ಲಕ್ನೋ: ಇಲ್ಲಿನ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 200 ರೋಗಿಗಳನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಲೋಕ ಬಂಧು ರಾಜ್ ನಾರಾಯಣ್ ಕಂಬೈನ್ಡ್ ಆಸ್ಪತ್ರೆಯ ಎರಡನೇ ಮಹಡಿಯಲ್ಲಿ ಮೊದಲು ಹೊಗೆ ಕಾಣಿಸಿಕೊಂಡಿದೆ ಎಂದು ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಪಿಟಿಐಗೆ ತಿಳಿಸಿದ್ದಾರೆ.
“ಎರಡನೇ ಮಹಡಿಯಿಂದ ಹೊಗೆ ಹೊರಹೊಮ್ಮುತ್ತಿರುವುದು ಕಂಡುಬಂದ ನಂತರ, ರೋಗಿಗಳನ್ನು ಸ್ಥಳಾಂತರಿಸಲು ತಕ್ಷಣ ಪ್ರಾರಂಭಿಸಲಾಯಿತು. ಒಟ್ಟಾರೆಯಾಗಿ ಸುಮಾರು 200 ರೋಗಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ” ಎಂದು ಅವರು ಹೇಳಿದರು.
ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಮತ್ತು ಅಗ್ನಿಶಾಮಕ ದಳದ ತಂಡಗಳು ಬೆಂಕಿಯನ್ನು ನಂದಿಸಲು ಕೆಲಸ ಮಾಡುತ್ತಿವೆ ಎಂದು ಪಾಠಕ್ ದೃಢಪಡಿಸಿದರು.
“ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ ಮತ್ತು ಆಸ್ಪತ್ರೆಯ ಅಧೀಕ್ಷಕರು ಎಲ್ಲಾ ರೋಗಿಗಳನ್ನು ಇತರ ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ಒಟ್ಟಾಗಿ ಕೆಲಸ ಮಾಡಿದರು. ಅಗ್ನಿಶಾಮಕ ದಳದವರು ಹಾಜರಿದ್ದು, ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ” ಎಂದು ಅವರು ಹೇಳಿದರು