ಬೆಂಗಳೂರು: ನಗರದಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಸರ್ಕಾರಿ ಭೂಮಿ ಒತ್ತುವರಿದಾರರ ವಿರುದ್ಧ ಸಮರ ಸಾರಿದ್ದಾರೆ. ಇಂದು ಅಕ್ರಮ ಸರ್ಕಾರಿ ಭೂ ಒತ್ತುವರಿದಾರರ ವಿರುದ್ಧ ಎಫ್‌ಐಆರ್ ದಾಖಲಿಸಿ, ಬಿಸಿ ಮುಟ್ಟಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಅವರು, ಕಂದಾಯ ಇಲಾಖೆಯ ಸಚಿವನಾಗಿ ನಾನು ಜವಾಬ್ದಾರಿ ವಹಿಸುತ್ತಿದ್ದಂತೆ ನಿರ್ಧರಿಸಿದ ಮೊದಲ ಕೆಲಸ ಸರ್ಕಾರಿ ಜಮೀನಿನ ಒತ್ತುವರಿ ತೆರವು. ಕಳೆದ ವರ್ಷ 2023ರ ಜೂನ್ ತಿಂಗಳ ಮೊದಲ ವಾರವೇ ಇಲಾಖೆಗೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಬೆಂಗಳೂರು ನಗರ ಮತ್ತು ಗ್ರಾಮೀಣ ಭಾಗದಲ್ಲಿ ಒತ್ತುವರಿಯಾಗಿರುವ ಎಲ್ಲಾ ಸರ್ಕಾರಿ ಜಮೀನಿನ ವಿವರವನ್ನು ಕೇಳಲಾಗಿತ್ತು. ಅಲ್ಲದೆ, ಯಾವುದೇ ಭೂ ಮಾಫಿಯಾ ಮರ್ಜಿಗೆ ಒಳಗಾಗದೆ ಅಥವಾ ಬೆದರಿಕೆಗಳಿಗೆ ಬಗ್ಗದೆ ವಾರಾಂತ್ಯಗಳಲ್ಲಿ ಒತ್ತುವರಿ ಕಾರ್ಯಾಚರಣೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಲಾಗಿತ್ತು ಎಂದಿದ್ದಾರೆ.
ಪರಿಣಾಮ ಕಳೆದ ವರ್ಷ ಜೂನ್ ತಿಂಗಳಿನಿಂದಲೇ ಬೆಂಗಳೂರು ನಗರ-ಗ್ರಾಮೀಣ ಭಾಗದಲ್ಲಿ ಒತ್ತುವರಿ ತೆರವು ಕೆಲಸ ಆರಂಭಿಸಲಾಗಿತ್ತು. ಅದರಂತೆ ನೂರಾರು ಕೋಟಿ ಮೌಲ್ಯದ ಯಲಹಂಕ ತಾಲ್ಲೂಕು, ಜಾಲ ಹೋಬಳಿ ಕಟ್ಟಿಗೇನಹಳ್ಳಿ ಗ್ರಾಮದ ಸ.ನಂ.28 ರಲ್ಲಿ 13.07 ಎಕರೆ ಸರ್ಕಾರಿ ಜಮೀನು ಒತ್ತುವರಿಯಾಗಿರುವುದು ಗಮನಕ್ಕೆ ಬಂದಿತ್ತು. ಈ ಪೈಕಿ ಎರಡು ಎಕರೆ ಜಮೀನನ್ನು ಕೆಲವು ಭ್ರಷ್ಟ ಅಧಿಕಾರಿಗಳು ಈಗಾಗಲೇ ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡಿಕೊಟ್ಟಿರುವುದು ಗಮನಕ್ಕೆ ಬಂದಿತ್ತು ಎಂದು ತಿಳಿಸಿದ್ದಾರೆ.
ಕೂಡಲೇ ಈ ಅಕ್ರಮದ ಬಗ್ಗೆ ತನಿಖೆ ನಡೆಸಿ ಈ ಅಕ್ರಮದಲ್ಲಿ ಭಾಗಿಯಾಗಿದ್ದ ವಿಶೇಷ ಜಿಲ್ಲಾಧಿಕಾರಿ, ವಿಶೇಷ ತಹಶೀಲ್ದಾರ್ ಸೇರಿದಂತೆ ಸುಮಾರು 18 ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಕೆಲಸದಿಂದ ಅಮಾನತು ಮಾಡಲಾಗಿತ್ತು. ಅಲ್ಲದೆ, ಕೂಡಲೇ ಅನಧಿಕೃತ ಒತ್ತುವರಿ ತೆರವು ಕಾರ್ಯಾಚರಣೆಗೂ ಅಂಕಿತ ಹಾಕಲಾಗಿತ್ತು ಹೇಳಿದ್ದಾರೆ.
ಯಲಹಂಕ ತಾಲ್ಲೂಕು, ಜಾಲ ಹೋಬಳಿ ಕಟ್ಟಿಗೇನಹಳ್ಳಿ ಗ್ರಾಮದ ಸರ್ವೇ ನಂ.28 ರಲ್ಲಿ ಒತ್ತುವರಿಯಾಗಿದ್ದ 13.07 ಎಕರೆ ಸರ್ಕಾರಿ ಜಮೀನನ್ನೂ ಖಾಸಗಿ ಒತ್ತುವರಿ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿತ್ತು. ಈ ಭಾಗದಲ್ಲಿ ಇಂದಿನ ಪ್ರತಿ ಎಕರೆ ಜಮೀನನ ಮಾರುಕಟ್ಟೆ ಮೌಲ್ಯ ಕನಿಷ್ಠ 10 ಕೋಟಿ ರೂಪಾಯಿ ಎಂಬುದು ಉಲ್ಲೇಖಾರ್ಹ. ಹೀಗೆ ವಶಕ್ಕೆ ಪಡೆದಿದ್ದ ಜಮೀನಿನ ರಕ್ಷಣೆಗೆ ರಕ್ಷಣಾ ಗೋಡೆ (ಕಾಂಪೌಂಡ್) ನಿರ್ಮಿಸುವ ಕಾರ್ಯಕ್ಕೂ ಸೂಚನೆ ನೀಡಲಾಗಿತ್ತು ಎಂದಿದ್ದಾರೆ.
ಇಲಾಖೆಗೆ ಸೇರಿದ ನೌಕರರು ಕಾಂಪೌಂಡ್ ಗೋಡೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಸಮಯದಲ್ಲಿ ಕೆಲವರು ಇಂಜಿನಿಯರ್ ಚಂದ್ರಶೇಖರ್ ಅವರ ಮೊಬೈಲ್‌ಗೆ ಕರೆಮಾಡಿ ಕಾಂಪೌಂಡ್ ನಿರ್ಮಿಸುವ ಕೆಲಸದಲ್ಲಿ ನಿರತರಾಗಿರುವ ಎಲ್ಲರಿಗೂ ಜೀವ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಕೆಎ 50 ಎಂವೈ7177 ಸಂಖ್ಯೆಯ ನೀಲಿ ಬಣ್ಣದ ಟಾಟಾ ಪಂಚ್ ಎಲೆಕ್ಟ್ರಿಕಲ್ ಕಾರಿನಲ್ಲಿ ಬಂದು ಸ್ಥಳದಲ್ಲೇ ಪ್ರಾಣ ಬೆದರಿಕೆ ಹಾಕಿ ಹೊಗಿರುತ್ತಾರೆ ಅಂತ ತಿಳಿಸಿದ್ದಾರೆ.
ಭೂ ಮಾಫಿಯಾ ಜನರ ಈ ಗೊಡ್ಡು ಬೆದರಿಗೆ ಜಗ್ಗದ ಇಲಾಖೆ ಸಿಬ್ಬಂದಿಗಳು ಕಾಂಪೌಂಡ್ ಗೋಡೆಯನ್ನು ಸಂಪೂರ್ಣವಾಗಿ ನಿರ್ಮಿಸಿದ್ದರು. ಆ ಮೂಲಕ ಕೋಟ್ಯಾಂತರ ರೂಪಾಯಿ ಮೌಲ್ಯದ ಸರ್ಕಾರಿ ಆಸ್ತಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಮ್ಮ ಬದ್ಧತೆಯನ್ನು ತೋರಿದ್ದರು ಎಂದಿದ್ದಾರೆ.
ಆದರೆ, ದಿನಾಂಕ:22/06/2024 ರಂದು ಬೆಳಗಿನ ಜಾವ ಸುಮಾರು 1:00 ಗಂಟೆಯಿಂದ 4:00 ಗಂಟೆ ವೇಳೆಯಲ್ಲಿ ಸುಮಾರು 40 ರಿಂದ 50 ಜನರ ದುಷ್ಕರ್ಮಿಗಳ ಗುಂಪು ಬೃಹತ್ ಆದ ಕೌಂಪೌಂಡ್ ಗೋಡೆಯನ್ನು ಅಕ್ರಮವಾಗಿ ಧ್ವಂಸಗೊಳಿಸಿ ಸರ್ಕಾರಕ್ಕೆ ಸುಮಾರು ರೂ.1.50 ರಿಂದ 2 ಕೋಟಿ ಹಣ ನಷ್ಟಮಾಡಿರುತ್ತಾರೆ. ಅಲ್ಲದೆ, ಸರ್ಕಾರಿ ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿ ಸಕಾರಿ ಜಾಗವನ್ನು ಕಬಳಿಸಲು ಪ್ರಯತ್ನಿಸಿರುತ್ತಾರೆ ಎಂದು ಹೇಳಿದ್ದಾರೆ.
ಹೀಗೆ ನಮ್ಮ ಇಲಾಖೆಯ ಸಿಬ್ಬಂದಿಗಳಿಗೆ ಜೀವ ಬೆದರಿಕೆ ಹಾಕಿದ್ದಲ್ಲದೆ, ದೌರ್ಜನ್ಯವೆಸಗಿ ಸರ್ಕಾರಿ ಜಮೀನಿಗೆ ಅತಿಕ್ರಮಿಸಿ ಕಾಂಪೌಂಡ್ ಗೋಡೆಗಳನ್ನೂ ಧ್ವಂಸಗೊಳಿಸಿರುವ ಎಲ್ಲಾ ದುಷ್ಕರ್ಮಿಗಳ ವಿರುದ್ಧ ಇದೀಗ ಅವರ ಛಾಯಾಚಿತ್ರದ ಸಹಿತ ಎಫ್‌ಐಆರ್ ದಾಖಲಿಸಲಾಗಿದೆ. ಈ ಮೂಲಕ ಭೂ ಮಾಫಿಯಾವನ್ನು ನಮ್ಮ ಇಲಾಖೆ ಮತ್ತು ಸರ್ಕಾರ ಯಾವ ಕಾಲಕ್ಕೂ ಯಾವ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ. ಸರ್ಕಾರಿ ಜಮೀನನ್ನು ಕಾನೂನು ಬಾಹೀರವಾಗಿ ಅತಿಕ್ರಮಿಸುವವರ ವಿರುದ್ಧ ನಾನು ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಎಂದಿಗೂ ಹಿಂಜರಿಯುವ ಮಾತೇ ಇಲ್ಲ ಎಂದು ತಿಳಿಸಿದ್ದಾರೆ.
ಬಳ್ಳಾರಿ: ನಾಳೆ ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
ರಷ್ಯಾಕ್ಕೆ ಶರಣಾಗುವ ಮುನ್ನ ತನ್ನದೇ ಸೈನಿಕನ ಮೇಲೆ ಬಾಂಬ್ ದಾಳಿ ನಡೆಸಿದ ಉಕ್ರೇನ್, ಡ್ರೋನ್ ದಾಳಿಯ ವಿಡಿಯೋ ವೈರಲ್