ಶಿವಮೊಗ್ಗ: ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಹಳೆಯ 65 ಕೆವಿ ಜನರೇಟರ್ ಅನ್ನು ರಾತ್ರೋ ರಾತ್ರಿ ಕದ್ದೊಯ್ದಿದ್ದದ್ದು ತಡವಾಗಿ ಬೆಳಕಿಗೆ ಬಂದಿತ್ತು. ಈ ಘಟನೆಯ ಹಿನ್ನಲೆಯಲ್ಲಿ ತಾಯಿ-ಮಕ್ಕಳ ಆಸ್ಪತ್ರೆಯ ಜನರೇಟರ್ ಕದ್ದೊಯ್ದಿರುವಂತ ಆಗಂತುಕರ ವಿರುದ್ಧ ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 65 ಕೆವಿ ಜನರೇಟರ್ ನಾಪತ್ತೆಯಾಗಿದ್ದ ಬಗ್ಗೆ ಸುದ್ದಿಯಾಗಿತ್ತು. ಈ ಬೆನ್ನಲ್ಲೆ ಸಾಗರ ಉಪ ವಿಭಾಗೀಯ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸುರೇಶ್ ಎಲ್ ಅವರು ಸಾಗರ ಪೇಟೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಅನಾಮಿಕರ ವಿರುದ್ಧ ಬಿಎನ್ಎಸ್ ಕಾಯ್ದೆಯ 303(2)ರಡಿ ಎಫ್ಐಆರ್ ದಾಖಲಿಸಲಾಗಿದೆ.
ದೂರಿನಲ್ಲಿ ಏನಿದೆ.?
ಆಡಳಿತ ವೈದ್ಯಾಧಿಕಾರಿಯಾದ ನಾನು ದಿನಾಂಕ:25/07/2025 ರಂದು ಉಪವಿಭಾಗೀಯ ಆಸ್ಪತ್ರೆ ಹಾಗೂ ತಾಯಿ ಮಕ್ಕಳ ಆಸ್ಪತ್ರೆ ಸಾಗರ, ಇಲ್ಲಿ ಆಡಳಿತ ವೈದ್ಯಾಧಿಕಾರಿಯಾಗಿ ಪ್ರಭಾರವನ್ನು ವಹಿಸಿಕೊಂಡು ದಿನಾಂಕ:29/07/2025 ರಂದು ಬೆಳಗ್ಗೆ 11- 30 ಗಂಟೆಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದಾಗ ಅಲ್ಲಿನ ಸಿಬ್ಬಂದಿ ವರ್ಗದವರು ಆಸ್ಪತ್ರೆಯ ಹಿಂಬದಿಯ ಹೊರಭಾಗದಲ್ಲಿ ಇಟ್ಟಿದ್ದ 65 ಕೆವಿ ಹಳೆಯ ಜನರೇಟರ್ ಅಂದಾಜು ಮೌಲ್ಯ 92000/- (ಉಪಯೋಗಿಸದೆ ಅನುಪಯುಕ್ತ ಗೊಳಿಸಲು ಸರ್ಕಾರಿ ಆದೇಶವನ್ನು ನಿರೀಕ್ಷಿಸಲಾಗಿತ್ತು) ಕಾಣೆಯಾಗಿರುವುದನ್ನು ಆ ದಿನ ಗಮನಿಸಿ ನನ್ನ ಗಮನಕ್ಕೆ ತಂದಿರುತ್ತಾರೆ.
ಅದೇ ದಿನ ನಾನು ಅಲ್ಲಿಯ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿವರ್ಗದವರನ್ನು ಕರೆದು ಸಭೆಯನ್ನು ನಡೆಸಿ ಈ ವಿಷಯದ ಬಗ್ಗೆ ಚರ್ಚಿಸಲಾಗಿ ಅವರೆಲ್ಲರೂ ಕಾಣೆಯಾಗಿರುವ ಬಗ್ಗೆ ಅದೇ ದಿನ ತಿಳಿದುಬಂದಿರುವುದನ್ನು ತಿಳಿಸಿರುತ್ತಾರೆ. ಆಸ್ಪತ್ರೆಯ ಕಟ್ಟಡದ ಉನ್ನತೀಕರಣ ಮತ್ತು ದುರಸ್ತಿ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿಗೆ ಸಂಬಂದಿಸಿದ ಸರಕು ಸಾಗಣೆ ವಾಹನಗಳು ಆಸ್ಪತ್ರೆಯ ಆವರಣದಲ್ಲಿ ಬಂದು ಹೋಗುತ್ತಿದ್ದು ಮತ್ತು ಕಾರ್ಮಿಕರು ಕಟ್ಟಡದ ಕೆಲಸ ಮಾಡುತ್ತಿದ್ದರಿಂದ ನಾವುಗಳು ಹೆಚ್ಚಾಗಿ ಗಮನಿಸಿರುವುದಿಲ್ಲ ಎಂದು ತಿಳಿಸಿರುತ್ತಾರೆ.
ಕೊನೆಯದಾಗಿ ದಿನಾಂಕ:26/06/2025 ರಂದು ಬೆಳಗ್ಗೆ 11-00 ಗಂಟೆಗೆ ರೀಟಾ ಮಾಲಿನಿ, ಪ್ರಭಾರ ಹಿರಿಯ ಶುಶೂಷಾಧಿಕಾರಿಗಳು ನೋಡಿರುತ್ತಾರೆ ಎಂದು ತಿಳಿಸಿರುತ್ತಾರೆ. ಆಸ್ಪತ್ರೆಯಲ್ಲಿದ್ದ 65 ಕೆವಿ ಹಳೆಯ ಜನರೇಟರನ್ನು ಕಳ್ಳತನ ಮಾಡಿದ ಕಳ್ಳರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ದೂರು ನೀಡಿರುತ್ತೇನೆ ಎಂದಿದ್ದಾರೆ.
ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸಿಬ್ಬಂದಿ ಕುಮ್ಮಕ್ಕಿನಿಂದಲೇ ಜನರೇಟರ್ ಕದ್ದೊಯ್ದಿರುವ ಶಂಕೆ
ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ 65 ಕೆವಿ ಜನರೇಟರ್ ಅನ್ನು ಹೊಸ ಜನರೇಟರ್ ಬಂದ ಕಾರಣ, ಬಿಲ್ಡಿಂಗ್ ಹಿಂಭಾಗದಲ್ಲಿ ಇರಿಸಲಾಗಿತ್ತು. ಅದು ಆನ್ ಕೂಡ ಆಗುವಂತ ಸುಸ್ಥಿತಿಯಲ್ಲಿ ಇತ್ತು. ಹೊಸ ಜನರೇಟರ್ ಬಂದ ಕಾರಣ ಇದನ್ನು ತೆಗೆದು ಇರಿಸಲಾಗಿತ್ತು. ಈ ಜನರೇಟರ್ ಬೇರೆಡೆ ಬಳಸಿಕೊಂಡಿದ್ದರೇ ಉಪಯೋಗಕ್ಕೂ ಬರುವಂತಿತ್ತು ಎಂಬುದು ಆಸ್ಪತ್ರೆಯ ಸಿಬ್ಬಂದಿಗಳ ಮಾತು.
ಹೀಗೆ ಸುಸ್ಥಿತಿಯಲ್ಲಿ ಇದ್ದಂತ 65 ಕೆವಿ ಜನರೇಟರ್ ಅನ್ನು ಹೊಸ ಜನರೇಟರ್ ಬಂದ ಕಾರಣ ಪಕ್ಕದಲ್ಲಿ ಇರಿಸಿದ್ದರಿಂದ ಅದರ ಮೇಲೆ ಕಣ್ಣಿಡಲಾಗಿದೆ. ಆಸ್ಪತ್ರೆಯ ಕಟ್ಟಡ ಕಾಮಗಾರಿ ನಡೆಸುತ್ತಿದ್ದವರ ಜೊತೆಗೆ ಶಾಮೀಲಾಗಿರುವಂತ ಆಸ್ಪತ್ರೆಯ ಸಿಬ್ಬಂದಿಗಳೇ ಹಳೆಯ ಜನರೇಟರ್ ಹೊತ್ತೊಯ್ಯೋದಕ್ಕೆ ಅವಕಾಶ ಮಾಡಿಕೊಟ್ಟಿರುವಂತ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸಿಬ್ಬಂದಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಜನರೇಟರ್ ಕದ್ದೊಯ್ದವರು ಯಾರು ಎನ್ನುವ ವಿಷಯ ಬೆಳಕಿಗೆ ಬರೋದು ಗ್ಯಾರಂಟಿ ಎಂಬುದು ಆಸ್ಪತ್ರೆಯ ಸಿಬ್ಬಂದಿಗಳ ಉನ್ನತ ಮಾಹಿತಿಯಾಗಿದೆ.
ಸಿಸಿಟಿವಿ ವರ್ಕ್ ಆಗದೇ ಇರೋದೋ ಕದ್ದೊಯ್ಯಲು ಪ್ಲಸ್ ಪಾಯಿಂಟ್
ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿನ ಮುಂಭಾಗದಲ್ಲಿ, ಗೆಟ್ ಬಳಿಯಲ್ಲಿ ಸೇರಿದಂತೆ ಹಲವೆಡೆ ಇರುವಂತ ಸಿಸಿಟಿವಿಗಳು ಹಾಳಾಗಿವೆಯಂತೆ. ಈ ವಿಷಯವನ್ನು ತಿಳಿದಿದ್ದಂತವರೇ 65 ಕೆವಿ ಜನರೇಟರ್ ರಾಜಾರೋಷವಾಗಿ ಕ್ರೇನ್ ಬಳಸಿ, ಟ್ರ್ಯಾಕರ್ ನಲ್ಲಿ ಇಟ್ಟುಕೊಂಡು ಹೊಯ್ದಿರೋದಾಗಿ ಆಸ್ಪತ್ರೆ ಬಳಿಯ ಕ್ಯಾಂಟೀನ್ ಸಿಬ್ಬಂದಿಗಳ ಮಾಹಿತಿಯಾಗಿದೆ.
ಒಂದು ವೇಳೆ ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮುಂಭಾಗ, ಗೇಟ್ ಬಳಿಯಲ್ಲಿ ಸೇರಿದಂತೆ ವಿವಿಧೆಡೆ ಇರುವಂತ ಸಿಸಿಟಿವಿ ಕಾರ್ಯ ನಿರ್ವಹಿಸುತ್ತಿದ್ದರೇ 92 ಸಾವಿರ ಮೌಲ್ಯದ 65 ಕೆವಿ ಜನರೇಟರ್ ಕದ್ದೊಯ್ಯೋದಕ್ಕೆ ಸಾಧ್ಯವಾಗುತ್ತಿರಲಿಲ್ಲವೆಂಬುದು ಆಸ್ಪತ್ರೆಯ ಸಿಬ್ಬಂದಿಗಳ ಮಾತಾಗಿದೆ. ಈಗಾಗಲೇ ಸಿಸಿಟಿವಿ ಕಾರ್ಯ ನಿರ್ವಹಿಸದೇ ಇರುವ ಬಗ್ಗೆ ತಾಲ್ಲೂಕು, ಜಿಲ್ಲಾ ಆಡಳಿತಕ್ಕೂ ಅಧಿಕಾರಿಗಳು ಪತ್ರದ ಮೂಲಕ ತಂದಿರೋದಾಗಿ ತಿಳಿದು ಬಂದಿದೆ.
ಜನರೇಟರ್ ಹೊತ್ತೊಯ್ದು ತಿಂಗಳೇ ಆದರೂ ಇಂದು ಪೊಲೀಸರಿಗೆ ದೂರು
ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಹಳೆಯ, ವರ್ಕಿಂಗ್ ಕಂಡೀಷನ್ ನಲ್ಲಿ ಇದ್ದಂತ 65 ಕೆವಿ ಜನರೇಟರ್ ಹೊತ್ತೊಯ್ದಿರೋದು ಇಂದು ನಾಳೆಯಲ್ಲ. ತಿಂಗಳೇ ಆಗಿದೆಯೆಂಬುದು ಬಲ್ಲ ಮೂಲಗಳ ಮಾಹಿತಿಯಾಗಿದೆ. ಹೊಸ ಆಡಳಿತ ವೈದ್ಯಾಧಿಕಾರಿ ಬಂದು, ಸೂಕ್ಷ್ಮವಾಗಿ ಗಮನಿಸಿದ ನಂತ್ರ, ಜನರೇಟರ್ ಕಳ್ಳತನವಾಗಿರೋ ವಿಷಯ ತಿಳಿದು ಬಂದಿದೆ. ಈ ಸಂಬಂದ ಜುಲೈ.28, 2025ರಂದು ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಅಧಿಕಾರಿಗಳು, ಸಿಬ್ಬಂದಿಗಳ ಸಭೆಯಲ್ಲಿ ಚರ್ಚೆ ಕೂಡ ಮಾಡಲಾಗಿದೆ. ಆದರೇ ಯಾರೊಬ್ಬರು ಜನರೇಟರ್ ಕದ್ದೊಯ್ದವರು ಯಾರು ಎಂಬ ಮಾಹಿತಿ ಬಿಚ್ಚಿಟ್ಟಿಲ್ಲ.
ಈ ಎಲ್ಲಾ ಕಾರಣದಿಂದಾಗಿ ಜುಲೈ.28, 2025ರ ಸಭೆ ನಡೆದ ಬಳಿಕ, ಇಂದು ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ 65 ಕೆವಿ ಜನರೇಟರ್ ನಾಪತ್ತೆ, ಕದ್ದೊಯ್ದ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾದ ಬಳಿಕ ಎಎಂಒ ಸಾಗರ ಪೇಟೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಹೀಗಾಗಿ 65 ಕೆವಿ ಜನರೇಟರ್ ನಾಪತ್ತೆಯ ಸುತ್ತ ಹಲವು ಅನುಮಾನಗಳು ಕಾಡುತ್ತಿವೆ. ಆ ಬಗ್ಗೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ತನಿಖೆಯ ನಂತ್ರ ಕದ್ದೊಯ್ದ ಕಳ್ಳರು ಯಾರು ಎನ್ನುವ ನಿಖರ ಮಾಹಿತಿ ಬಹಿರಂಗವಾಗಲಿದ್ಯೋ ಅಥವಾ ಈ ಕೇಸ್ ಇಲ್ಲಿಗೆ ಮುಚ್ಚಿ ಹೋಗಲಿದ್ಯೋ ಎಂಬುದನ್ನು ಕಾದು ನೋಡಬೇಕಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು