ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ ಗಳ ಎರಡನೇ ಸುತ್ತು ಹಾಗೂ ಆಯುಷ್ ಕೋರ್ಸ್ ಗಳ ಮೂರನೇ ಸುತ್ತಿನ ಸೀಟು ಹಂಚಿಕೆ ಹಂಚಿಕೆಯ ಅಂತಿಮ ಫಲಿತಾಂಶ ಸೆ.23ರಂದು ಪ್ರಕಟವಾಗಲಿದ್ದು, ಆ ಬಳಿಕ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಅಂತಿಮ ಸುತ್ತಿನ ಫಲಿತಾಂಶ ಪ್ರಕಟಣೆ ನಂತರ ಸೆ.26ರೊಳಗೆ ಶುಲ್ಕ ಪಾವತಿಸಿ ಸೀಟು ಖಾತರಿ ಚೀಟಿ ಡೌನ್‌ಲೋಡ್ ಮಾಡಿಕೊಂಡು ಸೆ.28ರೊಳಗೆ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಖಿಲ ಭಾರತ ಕೋಟಾ (ಎಂಸಿಸಿ) ಹಾಗೂ ಕೆಇಎ ಎರಡೂ ಕಡೆ ವೈದ್ಯಕೀಯ ಸೀಟು ಹಂಚಿಕೆಯಾದ 774 ಅಭ್ಯರ್ಥಿಗಳ ಪೈಕಿ, ಎಂಸಿಸಿ ಸೀಟು ಉಳಿಸಿಕೊಳ್ಳಲು ಇಚ್ಚಿಸುವ ಅಭ್ಯರ್ಥಿಗಳಿಗೆ ಕೆಇಎ ಸೀಟು ಬಿಟ್ಟು ಹೊರ ಹೋಗಲು ಇಂದು ಇಡೀ ದಿನ ಅವಕಾಶ ನೀಡಲಾಗಿತ್ತು. ಈ ಪ್ರಕ್ರಿಯೆ ನಂತರ ರದ್ಧಾದ ಸೀಟುಗಳನ್ನು ಇದೇ ಸುತ್ತಿಗೆ ತೆಗೆದುಕೊಂಡು ಪುನಃ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಕೆಇಎ ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿ ಕಾಲೇಜಿಗೆ ಸೇರಿದ್ದ ಅಭ್ಯರ್ಥಿಗಳಿಗೆ ಎಂಸಿಸಿ ಯಲ್ಲಿ ಸೀಟು ಸಿಕ್ಕಿದ್ದರೂ ರದ್ದುಪಡಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಆ ಸೀಟುಗಳನ್ನು ಕೂಡ ಇದೇ ಸುತ್ತಿಗೆ ಪರಿಗಣಿಸಲಾಗುವುದು ಎಂದರು.
ಹೊಸ ನೋಂದಣಿಗೆ ಅವಕಾಶ
ವಿವಿಧ ಕಾರಣಗಳಿಂದ ವೈದ್ಯಕೀಯ ಕೋರ್ಸ್ ಗಳಿಗೆ ಇದುವರೆಗೂ ಅರ್ಜಿಯನ್ನೇ ಸಲ್ಲಿಸದಿರುವವರಿಗೆ ಹೊಸದಾಗಿ ನೋಂದಣಿ ಮಾಡಿಕೊಳ್ಳಲು ಸೆ.25ರಿಂದ 29ರವರೆಗೆ ಅವಕಾಶ ನೀಡಲಾಗುವುದು. ಅಲ್ಲದೆ, ಸಿಇಟಿಗೆ ಅರ್ಜಿ ಸಲ್ಲಿಸಿ, ಕೆಇಎ ಪೋರ್ಟಲ್ ನಲ್ಲಿ ಯುಜಿ ನೀಟ್ ರೋಲ್ ನಂಬರ್ ನಮೂದಿಸುವುದಕ್ಕೂ ಸೆ.29ರಿಂದ ಅಕ್ಟೋಬರ್ 3ರವರೆಗೆ ಅವಕಾಶ ನೀಡಲಾಗುವುದು ಎಂದು ಅವರು ವಿವರಿಸಿದ್ದಾರೆ.
ಮಾಪ್ ಅಪ್ ಸುತ್ತಿನಲ್ಲಿ ಭಾಗವಹಿಸಲು ಇಚ್ಛಿಸುವ ಎಲ್ಲ ಅಭ್ಯರ್ಥಿಗಳು ಹೊಸದಾಗಿಯೇ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗುತ್ತದೆ. ಲಭ್ಯ ಸೀಟುಗಳನ್ನು ಗಮನದಲ್ಲಿಟ್ಟುಕೊಂಡು ಆಪ್ಷನ್ಸ್ ದಾಖಲಿಸಲು ಇದು ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.
ರಾಜ್ಯಾಧ್ಯಂತ ಜಾತಿಗಣತಿ ಸಮೀಕ್ಷೆಗೆ 1.60 ಲಕ್ಷ ಶಿಕ್ಷಕರನ್ನು ನೇಮಕ: ಸಚಿವ ಮಧು ಬಂಗಾರಪ್ಪ
ರಾಜ್ಯದ 2ನೇ ದೊಡ್ಡ ದಸರಾ ಖ್ಯಾತಿಯ ಶಿವಮೊಗ್ಗ ದಸರಾಕ್ಕೆ ನಿವೃತ್ತ ಲೆಫ್ಟಿನೆಂಟ್ ಜನರಲ್ ಬಿಎಸ್ ರಾಜು ಚಾಲನೆ