ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯದ ಬಗ್ಗೆ ಸಿಎಂ ಸಿದ್ಧರಾಮಯ್ಯ ಬೆಂಗಳೂರು ಸಿಟಿ ರೌಂಡ್ ನಡೆಸುತ್ತಿದ್ದಾರೆ. ಈ ವೇಳೆ ಸಮರ್ಪಕ ನಿರ್ವಹಣೆ ಮಾಡದ ವೈಟ್ ಟಾಪಿಂಗ್ ಗುತ್ತಿಗೆದಾರರು, ಎಂಜಿನಿಯರ್ ಗಳ ವಿರುದ್ದ ಕ್ರಮಕ್ಕೆ ಸೂಚನೆ ನೀಡಿದ್ದಾರೆ.
ಹೆಣ್ಣೂರಿನ ಬಾಗಲೂರು ರಸ್ತೆಯಲ್ಲಿ ವೈಟ್ ಟಾಪಿಂಗ್ ಮಾಡಲು ಆರಿಸಿಕೊಂಡ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿರುವುದರ ಹೊಣೆಯನ್ನು ಗುತ್ತಿಗೆದಾರರೇ ಹೊರಬೇಕಿದೆ. ಓಮ್ಮೆ ವೈಟ್ ಟಾಪಿಂಗ್ ಗೆ ರಸ್ತೆಯನ್ನು ಒಪ್ಪಿಸಿದ ಮೇಲೆ ಆ ರಸ್ತೆಗಳ ನಿರ್ವಹಣೆಗೆ ಬಿಬಿಎಂಪಿ ಹಣ ಕೊಡಲು ಬರುವುದಿಲ್ಲ. ವೈಟ್ ಟಾಪಿಂಗ್ ಮುಗಿಯುವಾಗ 2-3 ವರ್ಷ ಆಗುತ್ತದೆ. ಅಲ್ಲಿಯವರೆಗೂ ಗುತ್ತಿಗೆದಾರರೇ ರಸ್ತೆಗಳ ನಿರ್ವಹಣೆ ಮಾಡಬೇಕು. ಆದರೆ ಹೇಳೋರು ಕೇಳೇರು ಇಲ್ಲದಂತೆ ಗುತ್ತಿಗೆದಾರರು ವರ್ತಿಸುತ್ತಾರೆ ಎಂದು ಅಧಿಕಾರಿಗಳು ತಿಳಿಸಿದರು. ಸಮರ್ಪಕ ನಿರ್ವಹಣೆ ಮಾಡದ ವೈಟ್ ಟಾಪಿಂಗ್ ಗುತ್ತಿಗೆದಾರರು ಮತ್ತು ಎಂಜಿನಿಯರ್ ಗಳ ವಿರುದ್ದ ಕ್ರಮಕ್ಕೆ ಸಿಎಂ ಸೂಚನೆ ನೀಡಿದರು.