ಬೆಂಗಳೂರು: ನಾಗರಿಕರಾಗಿ ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುವುದು ಎಷ್ಟು ಮುಖ್ಯವೋ ನಿರ್ಲಕ್ಷ ಮಾಡದೆ ನಮ್ಮ ಕರ್ತವ್ಯಗಳನ್ನು ನಿರ್ವಹಿಸುವುದು ಅಷ್ಟೇ ಮುಖ್ಯ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘದ ಪದಾಧಿಕಾರಿಗಳಿಗೆ ತಿಳಿಸಿದರು.
ನೌಕರರ ಸಂಘ ಸಲ್ಲಿಸಿದ 19 ಬೇಡಿಕೆಗಳ ಸಂಬಂಧದಲ್ಲಿ ಸಚಿವರು ಸಂಘದ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದರು. ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೀರುಗಂಟಿಗಳು ನಿರ್ವಹಿಸುವ ಕೆಲಸಗಳನ್ನು ವಿವಿದೋದ್ದೇಶ ಎಂದು ನಿಗದಿಪಡಿಸಿರುವುದನ್ನು ಕೈಬಿಟ್ಟು ನಿರ್ದಿಷ್ಟ ಕೆಲಸ ನಿಗದಿ ಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು. ನೌಕರರ ಸಂಘದ ಮತ್ತೊಂದು ಬೇಡಿಕೆಯಾದ ಜನಸಂಖ್ಯೆ ಆಧರಿಸಿ ಗ್ರಾಮ ಪಂಚಾಯತಿಗಳನ್ನು ಮೇಲ್ದರ್ಜೆಗೆ ಏರಿಸಲು ಸಚಿವರು ಸಮ್ಮತಿಸಿದರು.
ಪಂಚಾಯತಿ ನೌಕರರಿಗೆ ಕನಿಷ್ಠ ವೇತನವನ್ನು ನಿಗದಿ ಪಡಿಸುವ ನೌಕರರ ಬೇಡಿಕೆ ಕಾರ್ಮಿಕ ಇಲಾಖೆ ಹಾಗೂ ಆರ್ಥಿಕ ಇಲಾಖೆಯ ಒಪ್ಪಿಗೆಗಾಗಿ ಕಳುಹಿಸಲಾಗಿದ್ದು ಸಂಬಂಧಿಸಿದವರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಪ್ರಿಯಾಂಕ್ ಖರ್ಗೆ ಅವರು ಹೇಳಿದರು. ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ವರ್ಗಾವಣೆ ಅವಕಾಶ, ಆದಾಯಕ್ಕೆ ಅನುಗುಣವಾಗಿ ಕರವಸೂಲಿಗಾರರ ಹುದ್ದೆಗಳ ನಿಗದಿ, ಮುಂತಾದ ಬೇಡಿಕೆಗಳು ಪರಿಶೀಲನೆಯ ಹಂತದಲ್ಲಿವೆ ಎಂದೂ ಸಚಿವರು ತೀಳಿಸಿದರು. ಗ್ರಾಮ ಪಂಚಾಯತಿಗಳಲ್ಲಿ ಸ್ವಚ್ಛತಾಗಾರರ ಹುದ್ದೆಗಳನ್ನು ಐಪಿಡಿ ಸಾಲಪ್ಪ ವರದಿಗೆ ಅನುಗುಣವಾಗಿ ಸೃಜಿಸಬೇಕೆಂಬ ನೌಕರರ ಸಂಘದ ಬೇಡಿಕೆಯ ಬಗ್ಗೆ ಮಾತನಾಡಿದ ಸಚಿವರು, ಸಾಲಪ್ಪನವರ ವರದಿಯು ನಗರ ಪ್ರದೇಶಕ್ಕೆ ಸಂಬಂಧಿಸಿದ್ದು ಗ್ರಾಮೀಣ ಪ್ರದೇಶಕ್ಕೆ ಅನ್ವಯಿಸುವಂತೆ ವರದಿಯನ್ನು ಸಿದ್ಧಪಡಿಸಲು ಉಪ ಸಮಿತಿ ರಚಿಸುವುದಾಗಿ ಹೇಳಿದರು
ನೌಕರ ಸಂಘ ನಾಳೆ ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಮುಷ್ಕರದ ಹಿನ್ನೆಲೆಯಲ್ಲಿ ಸಂಘದ ಪದಾಧಿಕಾರಿಗಳು ಸಚಿವರನ್ನು ಭೇಟಿ ಮಾಡಿ ಚರ್ಚಿಸಿದರು. ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಸಭೆಯಲ್ಲಿ ಪಾಲ್ಗೊಂಡಿದ್ದರು.
BREAKING : ಅಸಹಜ ಲೈಂಗಿಕ ದೌರ್ಜನ್ಯ ಕೇಸ್ : 2ನೇ ಪ್ರಕರಣದಲ್ಲೂ ಸೂರಜ್ ರೇವಣ್ಣಗೆ ಜಾಮೀನು ಮಂಜೂರು!