ಚಿಕ್ಕಮಗಳೂರು: ಜಿಲ್ಲೆಯಲ್ಲಿ ತಂದೆಯೇ ಅಪ್ರಾಪ್ತೆಯನ್ನು ವೇಶ್ಯಾವಾಟಿಕೆ ತಳ್ಳಿದಂತ ಹೃದಯ ವಿದ್ರಾವಕ ಘಟನೆ ನಡೆದಿದೆ. ಹಣಕ್ಕಾಗಿ ಅಪ್ರಾಪ್ತೆಯ ತಂದೆ, ಅಜ್ಜಿ ವೇಶ್ಯಾವಾಟಿಕೆಗೆ ಬಾಲಕಿಯನ್ನು ದೂಡಿದ್ದಾರೆ. ಈ ಸಂಬಂಧ ದಾಖಲಾದಂತ ಪೋಕ್ಸೋ ಕೇಸ್ ಅಡಿಯಲ್ಲಿ ಅಪ್ರಾಪ್ತೆಯ ತಂದೆ ಸೇರಿದಂತೆ ಬರೋಬ್ಬರಿ 12 ಮಂದಿಯನ್ನು ಬೀರೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕಳೆದ ಡಿಸೆಂಬರ್.29ರಂದು ಅಪ್ರಾಪ್ತೆ ಬೀರೂರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡುತ್ತಾರೆ. ದೂರಿನಲ್ಲಿ ನನ್ನ ತಾಯಿ 6 ವರ್ಷಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಪಿಯುಸಿ ವ್ಯಾಸಂಗದ ವೇಳೆಯಲ್ಲಿ ನನಗೆ ಓದೋದಕ್ಕೆ ಇಷ್ಟವಿಲ್ಲದ ಕಾರಣ, ತಂದೆ ಗಿರೀಶ್ ಜೊತೆಗೆ ಬೀರೂರು ಸಮೀಪದ ನಾಗವಂಗಲದಲ್ಲಿ ವಾಸವಾಗಿರುತ್ತೇನೆ. ನನ್ನ ಅಜ್ಜಿ ನಾಗರತ್ನಮ್ಮ ಬೀರೂರಲ್ಲಿ ಇರುತ್ತಾರೆ. ಅವರಿಗೆ ನಾರಾಯಣಸ್ವಾಮಿ ಎಂಬುವವರು ಪರಿಚಯವಿರುತ್ತದೆ ಎಂದಿದ್ದಾರೆ.
ದಿನಾಂಕ 21-12-2025ರಂದು ಮಂಗಳೂರಿನ ಭರತ್ ಶೆಟ್ಟಿ ಎಂಬುವರ ಮನೆಗೆ ತಂದೆ ಗಿರೀಶ್ ಕರೆದೊಯ್ದ ನಂತ್ರ, ಅಪ್ರಾಪ್ತೆಯ ಮೇಲೆ ನಿರಂತರವಾಗಿ ದಿನಾಂಕ 26-12-2025ರವರೆಗೆ ಹಲವಾರು ಮಂದಿ ಅತ್ಯಾಚಾರ ಎಸಗಿದ್ದಾರೆ. ಅದರಲ್ಲೂ ಅಪ್ರಾಪ್ತೆ ಮುಟ್ಟಾಗಿ ನೋವಿನಿಂದ ನರಳುತ್ತಿದ್ದಂತ ಸಂದರ್ಭದಲ್ಲೇ ಆಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮಂಗಳೂರಿನಲ್ಲಿ ತಂದೆ, ಭರತ್ ಶೆಟ್ಟಿಯ ಹಿಂಸೆ ತಾಳಲಾರದೇ ಹೀಗೆ ಆದರೇ ನಾನು ಸಾಯುವುದಾಗಿ ಬೆದರಿಕೆ ಹಾಕಿದ್ದರಿಂತ ಅಲ್ಲಿಂದ ಬೀರೂರಿಗೆ ಅಪ್ರಾಪ್ತೆಯನ್ನು ಕರೆತರಲಾಗಿದೆ. ಬೀರೂರಿಗೆ ಬಂದ ನಂತ್ರ, ಅಜ್ಜಿ ನಾಗರತ್ನಮ್ಮ ಮನೆಯಲ್ಲಿ ಅಪ್ರಾಪ್ತೆ ಉಳಿದುಕೊಂಡಿರುತ್ತಾರೆ. ಅಲ್ಲಿದೆ ಅವರ ಅತ್ತೆ ಬಂದು, ನೀನು ಇಲ್ಲಿ ಇರುವುದು ಬೇಡ, ಬಾ ನಮ್ಮ ಮನೆಗೆ ಹೋಗೋಣ ಅಂತ ಕರೆದೊಯ್ದಿದ್ದರು ಎಂದಿದ್ದಾರೆ.
ಅತ್ತೆ ಮನೆಗೆ ತೆರಳಿದಂತ ಅಪ್ರಾಪ್ತೆ ಮಂಗಳೂರಿನಲ್ಲಿ ನಡೆದಂತ ಇಡೀ ಘಟನೆಯನ್ನು ಚಿಕ್ಕಪ್ಪ, ಅತ್ತೆ ಮುಂದೆ ಕಣ್ಣೀರಾಗಿ ಹೇಳಿದ್ದಾರೆ. ಆಕೆಯನ್ನು ಬೀರೂರು ಪೊಲೀಸ್ ಠಾಣೆಗೆ ಕರೆದೊಯ್ದು ತಂದೆ ಗಿರೀಶ್ ಸೇರಿದಂತೆ ಇತರರ ವಿರುದ್ಧ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಬೀರೂರು ಠಾಣೆಯ ಪೊಲೀಸರು ಬಿಎನ್ಎಸ್ ಕಾಯ್ದೆಯ 2023ರ 64(1), 143, 137(2) 127(3) ಹಾಗೂ ಪೋಕ್ಸೋ ಕೇಸ್ ದಾಖಲಿಸಿದ್ದಾರೆ. ಎ1 ಆರೋಪಿಯಾಗಿ ಭರತ್ ಶೆಟ್ಟಿ, ಎ2 ಆರೋಪಿಯಾಗಿ ಅಪ್ರಾಪ್ತೆಯ ತಂದೆ ಗಿರೀಶ್, ಎ3 ಆರೋಪಿಯಾಗಿ ಅಜ್ಜಿ ನಾಗರತ್ನಮ್ಮ ಹಾಗೂ ಇತರರ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ಈ ಪ್ರಕರಣ ದಾಖಲಾಗುತ್ತಿದ್ದಂತೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ್ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಎಸ್ಪಿ ಜಯಕುಮಾರ್, ಡಿವೈಎಸ್ಪಿ ಪರಶುರಾಮ್ ನಿರ್ದೇಶದನಂತೆ ಬೀರೂರು ಠಾಣೆಯ ಸಿಪಿಐ ಶ್ರೀಕಾಂತ್ ನೇತೃತ್ವದಲ್ಲಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗುತ್ತದೆ.
ಬೀರೂರು ಠಾಣೆ ಪಿಎಸ್ಐ ತಿಪ್ಪೇಶ್.ಡಿ.ವಿ, ಸಿಬ್ಬಂದಿಗಳಾದಂತ ಹೇಮಂತ್ ಕುಮಾರ್, ರಾಜಪ್ಪ, ಪಂಚನಹಳ್ಳಿ ಎಸ್ಐ ಸೈಯದ್ ಅಫ್ರಿಧಿ, ಲಿಂಗದಹಳ್ಳಿ ಠಾಣೆ ಎಸ್ಐ ಶಿವಕುಮಾರ್ ಅಂಡ್ ಟೀಂ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದಂತ ಆರೋಪಿಗಳನ್ನು ಬಂಧಿಸೋ ಕಾರ್ಯಾಚರಣೆಗೆ ಇಳಿಯುತ್ತಾರೆ.
ದೂರು ದಾಖಲಾದಂತ ನಾಲ್ಕೈದು ದಿನಕ್ಕೆ ಆಕೆಯ ತಂದೆ ಗಿರೀಶ್, ಅಜ್ಜಿ ನಾಗರತ್ನಮ್ಮ, ಬ್ರೋಕರ್ ನಾರಾಯಣಸ್ವಾಮಿ, ಆರೋಪಿಗಳಾದಂತ ಭರತ್ ಶೆಟ್ಟಿ, ಮಂಗಳೂರಿನ ಮನೆ ಮಾಲೀಕ ಶೇಖರ್ ಸುವರ್ಣ, ಆರೋಪಿ ಜೀನೇಂದ್ರ, ರಾಜೇಂದ್ರ, ಸಿರಾಜ್, ಸೇರಿದಂತೆ ಇತರೆ 12 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೋಕ್ಸೋ ಕೇಸ್, ಅತ್ಯಾಚಾರ ಪ್ರಕರಣ ಆರೋಪಿಗಳನ್ನು ಬಂಧಿಸಿದಂತ ಬೀರೂರು ಠಾಣೆಯ ಪೊಲೀಸರ ಕಾರ್ಯವನ್ನು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ಲಾಘಿಸಿ, ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ… ಸಂಪಾದಕರು..
BREAKING: ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀಗೆ ಅಶ್ಲೀಲ ಕಾಮೆಂಟ್ ಕೇಸ್: ಮತ್ತೋರ್ವ ಆರೋಪಿ ಅರೆಸ್ಟ್
ಜನರ ಆಶೀರ್ವಾದ ಇರುವವರೆಗೆ ರಾಜಕೀಯದಲ್ಲಿರುತ್ತೇನೆ: ಸಿಎಂ ಸಿದ್ಧರಾಮಯ್ಯ








