ಮಂಡ್ಯ : ಮಂಡ್ಯದಲ್ಲಿ ಸರ್ಕಾರಿ ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಒಬ್ಬ ಮೃತಪಟ್ಟಿದ್ದು, 15 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಮದ್ದೂರು ತಾಲೂಕಿನ ಕೆಸ್ತೂರು ಪೋಲೀಸ್ ಠಾಣಾ ವ್ಯಾಪ್ತಿಯ ಮಾಚಹಳ್ಳಿ ಸಮೀಪ ಈ ಒಂದು ದುರ್ಘಟನೆ ಸಂಭವಿಸಿದೆ. ಚನ್ನಪಟ್ಟಣ ತಾಲೂಕಿನ ಪ್ರಸಿದ್ದ ಯಾತ್ರಾ ಸ್ಥಳ ಶ್ರೀ ಚಾಮುಂಡೇಶ್ವರಿ ದೇವಾಲಯದಿಂದ ನೂರಕ್ಕೂ ಹೆಚ್ಚು ಭಕ್ತಾದಿಗಳನ್ನು ಮದ್ದೂರು ನಗರಕ್ಕೆ ಕರೆ ತರುತ್ತಿದ್ದ ಸರ್ಕಾರಿ ಬಸ್ ಮಾಚಹಳ್ಳಿ ಸಮೀಪಕ್ಕೆ ಬರುತ್ತಿದ್ದಂತೆ ಮದ್ದೂರಿನಿಂದ ತುಮಕೂರು ಕಡೆಗೆ ಹೋಗುತ್ತಿದ್ದ ಕಾರಿಗೆ ಚಾಲಕನ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಮಹಿಳೆಗೆ ಗಂಭೀರ ಗಾಯಗೊಂಡು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿದೆ.
ಸರ್ಕಾರಿ ಬಸ್ ನಲ್ಲಿದ್ದ 15 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿದ್ದು, ಮದ್ದೂರು ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಅಪಘಾತ ಸಂಭವಿಸಿ ಅರ್ಧ ಗಂಟೆಯಾದರೂ ಒಂದು ಆಂಬುಲೆನ್ಸ್ ಕೂಡ ಸ್ಥಳಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಸ್ಥಳೀಯರು ರಸ್ತೆ ತಡೆ ನಡೆಸಿ ತಾಲೂಕು ಆರೋಗ್ಯಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಆಗಮಿಸಿದ ಕೆಸ್ತೂರು ಠಾಣೆಯ ಪೋಲೀಸರು ಗಾಯಗೊಂಡವರನ್ನು ಖಾಸಗಿ ವಾಹನಗಳ ಮೂಲಕ ಆಸ್ಪತ್ರೆಗೆ ರವಾನಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದು, ಈ ಸಂಬಂಧ ಕೆಸ್ತೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ವರದಿ : ಗಿರೀಶ್ ರಾಜ್, ಮಂಡ್ಯ








