ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಜಾನುವಾರುಗಳ ಆರೋಗ್ಯ ರಕ್ಷಣೆ ಹಾಗೂ ಅವುಗಳ ಹಾಲಿನ ಇಳುವರಿ ಕಾಪಾಡಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ರೈತರಿಗೆ ಕೆಲವು ಸಲಹೆಗಳನ್ನು ನೀಡಲಾಗಿದೆ.
ಜಾನುವಾರುಗಳನ್ನು ಮುಂಜಾನೆ ಮತ್ತು ಸಾಯಂಕಾಲದ ಸಮಯದಲ್ಲಿ ಮಾತ್ರ ಮೇಯಿಸಲು ಬಿಡಬೇಕು. ಅವುಗಳಿಗೆ ದಿನಕ್ಕೆ 2 ರಿಂದ 3 ಬಾರಿ ಶುದ್ಧವಾದ ನೀರನ್ನು ಕುಡಿಸಬೇಕು. ಮಧ್ಯಾಹ್ನದ ಸಮಯದಲ್ಲಿ ಜಾನುವಾರುಗಳನ್ನು ಕೊಟ್ಟಿಗೆಯಲ್ಲಿ ಅಥವಾ ಗಿಡದ ನೆರಳಿನಲ್ಲಿ ಕಟ್ಟಬೇಕು. ಜಾನುವಾರುಗಳಿಗೆ ದಿನದಲ್ಲಿ 1 ರಿಂದ 2 ಸಾರಿ ಮೈ ತೊಳೆಯಬೇಕು ಹಾಗೂ ಮಿಶ್ರ ತಳಿ ರಾಸು, ಎಮ್ಮೆಗಳಲ್ಲಿ ದೇಹದ ಉಷ್ಣತೆ ಕಾಪಾಡಲು ಗೋಣಿಚೀಲವನ್ನು ನೀರಿನಲ್ಲಿ ತೋಯಿಸಿ ಮೈ ಮೇಲೆ ಹಾಕಬೇಕು. ದನದ ಕೊಟ್ಟಿಗೆಯನ್ನು ತಂಪಾಗಿ ಇಡಲು ಕೊಟ್ಟಿಗೆಯ ಮೇಲೆ ತೆಂಗಿನ ಗರಿ ಅಥವಾ ಹುಲ್ಲನ್ನು ಹಾಕಿ, ಕಿಟಕಿಗಳಿಗೆ ಗೋಣಿ ಚೀಲಗಳನ್ನು ಕಟ್ಟಿ ನೀರನ್ನು ಸಿಂಪಡಿಸುತ್ತಿರಬೇಕು. ಜಮೀನು ಉಳುಮೆ ಮಾಡಲು ಎತ್ತುಗಳನ್ನು ಮುಂಜಾನೆ ಅಥವಾ ಸಾಯಂಕಾಲದ ಸಮಯದಲ್ಲಿ ಮಾತ್ರ ಕೆಲಸಕ್ಕೆ ಉಪಯೋಗಿಸಬೇಕು. ಕುರಿ ಮತ್ತು ಆಡುಗಳನ್ನು ಸಹ ತಂಪಾದ ಸಮಯದಲ್ಲಿ ಮೇಯಿಸಿ ಮಧ್ಯಾಹ್ನದ ವೇಳೆ ಗಿಡದ ನೆರಳಿನಲ್ಲಿ ನಿಲ್ಲಿಸಬೇಕು. ವಲಸೆ ಕುರಿಗಳು ದೂರದ ಸ್ಥಳಗಳಿಗೆ ಹೋಗುವುದಿದ್ದರೆ, ಮುಂಜಾನೆ ಅಥವಾ ಸಾಯಂಕಾಲದ ಸಮಯದಲ್ಲಿ ಹೊಡೆದುಕೊಂಡು ಹೋಗಬೇಕು. ಕರು, ಕುರಿ, ಮೇಕೆ ಮರಿಗಳಿಗೆ ಸರಿಯಾದ ಪ್ರಮಾಣದಲ್ಲಿ ಹಾಲನ್ನು ಕುಡಿಸಬೇಕು ಹಾಗೂ ನೀರನ್ನು ಸಹ 2 ರಿಂದ 3 ಸಾರಿ ಕುಡಿಸಬೇಕು.
ಹೈನು ರಾಸುಗಳಿಗೆ ಸಾಧ್ಯವಾದಷ್ಟು ಪೌಷ್ಠಿಕ ಆಹಾರ ಹಾಗೂ ಲಭ್ಯವಿರುವ ಹಸಿರು ಮೇವನ್ನು ಕೊಡಬೇಕು. ಪೌಷ್ಠಿಕ ಆಹಾರ ಅಥವಾ ಕುಡಿಯುವ ನೀರಿನಲ್ಲಿ ಲವಣ ಮಿಶ್ರಣ, ಉಪ್ಪು ಹಾಗೂ ಬೆಲ್ಲವನ್ನು ನಿಗದಿತ ಪ್ರಮಾಣದಲ್ಲಿ ಕೊಡಬೇಕು. ಕೊಟ್ಟಿಗೆಯ ಸುತ್ತಮುತ್ತ ತೋಟ, ಹೊಲದ ಬದವುಗಳಲ್ಲಿ ಮೇವಿನ ಮರಗಳನ್ನು ಬೆಳೆಸುವುದರಿಂದ ಜಾನುವಾರುಗಳಿಗೆ ತಂಪಾದ ನೆರಳು ಹಾಗೂ ಪೌಷ್ಠಿಕ ಆಹಾರವಾಗಿ ಹಸಿರು ಸೊಪ್ಪು ತಿನ್ನಿಸಲು ಅನುಕೂಲವಾಗುತ್ತದೆ. ಜಾನುವಾರುಗಳಿಗೆ ಮುಂಜಾಗ್ರತೆಯಾಗಿ ಇಲಾಖೆಯಿಂದ ಉಚಿತವಾಗಿ ನೀಡುವ ಸಾಂಕ್ರಾಮಿಕ ರೋಗಗಳ ಲಸಿಕೆಗಳನ್ನು ಕಾಲಕಾಲಕ್ಕೆ ಹಾಕಿಸಬೇಕು. ಅವುಗಳಿಗೆ ಜಂತುನಾಶಕ ಔಷಧಿಯನ್ನು ವರ್ಷದಲ್ಲಿ 2 ರಿಂದ 3 ಸಾರಿ ಕುಡಿಸಬೇಕು. ಯಾವುದೇ ಸಮಯದಲ್ಲಿ ಕಾಯಿಲೆಯಿಂದ ಬಳಲುವ ಜಾನುವಾರುಗಳನ್ನು ಹತ್ತಿರದ ಪಶುವೈದ್ಯಕೀಯ ಸಂಸ್ಥೆಗಳಲ್ಲಿ ಚಿಕಿತ್ಸೆ ಕೊಡಿಸಬೇಕು. ನಿರ್ಜಲೀಕರಣಗೊಂಡ ಜಾನುವಾರುಗಳಿಗೆ ಉಪ್ಪು, ಅಡುಗೆ ಸೋಡಾ, ಬೆಲ್ಲ ಹಾಗೂ ಲಿಂಬೆಹಣ್ಣಿನ ರಸವನ್ನು ನೀರಿನಲ್ಲಿ ಮಿಶ್ರಣ ಮಾಡಿ ದಿನದಲ್ಲಿ 3 ರಿಂದ 4 ಸಾರಿ ಕುಡಿಸಬೇಕು. ರೈತರು ತಮ್ಮ ಜಮೀನಿನಲ್ಲಿರುವ ಮೇವನ್ನು ಯಾವುದೇ ಕಾರಣಕ್ಕೂ ಸುಟ್ಟು ಹಾಕದೆ ಬಣವೆ ಹಾಕಿ ಅಥವಾ ಸುರಳಿ ಸುತ್ತಿಕೊಂಡು (ಬೇಲಿಂಗ್) ಮೇವನ್ನು ಸಂಗ್ರಹಿಸಬೇಕು. ಇದರಿಂದ ಭೂಮಿಯ ಫಲವತ್ತತೆ ಹಾಳಾಗದಂತೆ ತಡೆಯುವುದರ ಜೊತೆಗೆ ವಾಯುಮಾಲಿನ್ಯ ನಿಯಂತ್ರಣ ಮತ್ತು ಜಾನುವಾರುಗಳಿಗೆ ಮೇವಿನ ಕೊರತೆಯನ್ನು ನಿಗಿಸಬಹುದು. ರೈತರು ಮೇವನ್ನು ಯಾವುದೇ ಕಾರಣಕ್ಕೂ ಹೊರ ಜಿಲ್ಲೆಗಳಿಗೆ ಅಥವಾ ಹೊರ ರಾಜ್ಯಗಳಿಗೆ ಮಾರಾಟ ಮಾಡಬಾರದು.
ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರ ಕಚೇರಿ ದೂರವಾಣಿ ಸಂಖ್ಯೆ: 08539-221408, ಕೊಪ್ಪಳ ಪಾಲಿಕ್ಲಿನಿಕ್ ಮೊ.ನಂ: 9844187842 ಕೊಪ್ಪಳ ಪಶು ಆಸ್ಪತ್ರೆ ಮೊ.ನಂ: 9886309968, ಗಂಗಾವತಿ ಪಶು ಆಸ್ಪತ್ರೆ ಮೊ.ನಂ: 9448601226, ಕುಷ್ಟಗಿ ಪಶು ಆಸ್ಪತ್ರೆ ಮೊ.ನಂ: 9663154018, ಯಲಬುರ್ಗಾ ಪಶು ಆಸ್ಪತ್ರೆ ಮೊ.ನಂ: 9620022851, ಕನಕಗಿರಿ ಪಶು ಆಸ್ಪತ್ರೆ ಮೊ.ನಂ: 9591637222, ಕಾರಟಗಿ ಪಶು ಆಸ್ಪತ್ರೆ ಮೊ.ನಂ: 9986243808 ಹಾಗೂ ಕುಕನೂರು ಪಶು ಆಸ್ಪತ್ರೆ ಮೊ.ನಂ: 9449641224 ಗೆ ಸಂಪರ್ಕಿಸಬಹುದು ಎಂದು ಕೊಪ್ಪಳ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ. ಪಿ.ಎಂ.ಮಲ್ಲಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








