ಶಿವಮೊಗ್ಗ: ಸಾಗರ ತಾಲ್ಲೂಕು ಆಡಳಿತದಿಂದ ರೈತರ ಜೊತೆಗೆ ಚೆಲ್ಲಾಟ ಎನ್ನುವಂತೆ ಪದೇ ಪದೇ ಭೂ ನ್ಯಾಯ ಮಂಡಳಿ ಸಭೆ ಮುಂದೂಡಿಕೆ ಮಾಡಲಾಗುತ್ತಿದೆ. ಕೂಡಲೇ ಸಭೆ ನಡೆಸಿ ರೈತರ ಸಮಸ್ಯೆ ಪರಿಹರಿಸುವ ಕೆಲಸ ಮಾಡುವಂತೆ ಸಾಗರ ತಾಲ್ಲೂಕು ರೈತ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ.ಇ ಒತ್ತಾಯಿಸಿದರು.
ಇಂದು ಸಾಗರದ ಉಪ ವಿಭಾಗೀಯ ಅಧಿಕಾರಿಗಳ ಕಚೇರಿ ಬಳಿ ಸಾಗರ ತಾಲ್ಲೂಕು ರೈತ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ಅಲ್ಲದೇ ಎಸಿಗೆ ಮನವಿ ಪತ್ರವನ್ನು ನೀಡಲಾಯಿತು.
ಈ ವೇಳೆ ಮಾತನಾಡಿದಂತ ಅವರು, ಭೂ ನ್ಯಾಯ ಮಂಡಳಿ ಸ್ಥಾಪನೆಯಾಗಿ 4 ತಿಂಗಳು ಕಳೆಯುತ್ತಿದೆ. ರೈತರ ಸಮಸ್ಯೆ ಇತ್ಯರ್ಥ ಪಡಿಸಲು ನಾಲ್ಕು ಬಾರಿ ಸಭೆ ಕರೆಯಲಾಗಿತ್ತು. ಆದರೆ ಒಂದು ಸಭೆ ನಡೆಸದೇ ಪದೇ ಪದೇ ಮುಂದೂಡಿಕೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಜನವರಿಯಿಂದ ಫೆಬ್ರವರಿ ವರೆಗೆ ನಾಲ್ಕು ಸಭೆ ನಿಗದಿ ಮಾಡಲಾಗಿತ್ತು. ಸಂಬಂಧಪಟ್ಟ ರೈತರಿಗೂ ನೋಟಿಸ್ ನೀಡಲಾಗಿತ್ತು. ತಮ್ಮ ಸಮಸ್ಯೆ ಇತ್ಯರ್ಥಕ್ಕೆ ಸಭೆಗೆ ಬರುವಂತೆ ನೋಟಿಸ್ ನಲ್ಲಿ ತಿಳಿಸಲಾಗಿತ್ತು. ಆದರೆ ನಿಗದಿತ ದಿನಾಂಕದಂದು ಸಾಗರ ತಾಲ್ಲೂಕು ಕೇಂದ್ರಕ್ಕೆ ರೈತರು ಆಗಮಿಸಿದರೇ ಸಭೆ ರದ್ದು ಮಾಡಲಾಗಿದೆ ಅಂತ ತಿಳಿಸಿದ್ದಾರೆ. ಇದರಿಂದ ರೈತರು ಸಾಗರ ತಾಲ್ಲೂಕು ಕಚೇರಿಗೆ ಅಲೆದಾಡೋದೇ ಆಗಿದೆ ಎಂದರು.
ಮುಂದಿನ ಭೂ ನ್ಯಾಯ ಮಂಡಳಿ ಸಭೆಗಳನ್ನು ಬೇಗ ನಡೆಸಬೇಕು. ದಿನಾಂಕ ನಿಗದಿ ಮಾಡಿ, ರೈತರ ಪ್ರಕರಣಗಳನ್ನು ಇತ್ಯರ್ಥ ಪಡಿಸುವ ಕೆಲಸ ಮಾಡಬೇಕು. ಗೇಣಿದಾರರೂ ಹಾಲಿ ಸಾಗುವಳಿದಾರರು, ಸ್ವಾಧೀನಾನುಭವ ವಿಸ್ತೀರ್ಣಕ್ಕೆ ಪಹಣಿ ಪರಿಷ್ಕೃತ ಹಕ್ಕು ಪತ್ರದ ಜೊತೆಗೆ ಮಂಜೂರಾತಿ ಪತ್ರ ನೀಡುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಮಚಂದ್ರ ಸೂರನಗದ್ದೆ, ಸತ್ಯನಾರಾಯಣ ಕೆಳದಿ, ನಾಗರಾಜ್, ಸುರೇಶ್ ಟಿ.ಹೆಚ್, ಮಂಜಪ್ಪ, ದ್ಯಾಮಪ್ಪ, ಲಕ್ಷಣ, ಕರಿಯಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ