ಬೆಂಗಳೂರು : ರಾಜ್ಯ ಸರ್ಕಾರವು ರೈತರಿಗೆ ಸಿಹಿಸುದ್ದಿ ನೀಡಿದ್ದು, ರೈತ ಸಿರಿ ಯೋಜನೆಯಡಿ ಸಿರಿಧಾನ್ಯ ಬೆಳೆಗಾರರಿಗೆ ಪ್ರತಿ ಹೆಕ್ಟೇರ್ಗೆ 10,000 ರೂ. ಪ್ರೋತ್ಸಾಹಧನ ಸಿಗಲಿದೆ (ಗರಿಷ್ಠ 2 ಹೆಕ್ಟೇರ್ವರೆಗೆ). ಈ ಯೋಜನೆ ಸಿರಿಧಾನ್ಯ ಬೆಳೆಗಳ ವಿಸ್ತರಣೆ ಮತ್ತು ರೈತರ ಆದಾಯ ಹೆಚ್ಚಿಸಲು ರೂಪಿಸಲಾಗಿದ್ದು, ನೇರ ನಗದು ವರ್ಗಾವಣೆ ಮೂಲಕ ಅನುದಾನ ನೀಡಲಾಗುತ್ತದೆ.
ರಾಜ್ಯದ ಸಿರಿಧಾನ್ಯ ಪ್ರದೇಶವನ್ನು ವಿಸ್ತರಿಸುವ ನಿಟ್ಟಿನಲ್ಲಿ 2019-20ನೇ ಸಾಲಿನಿಂದ ಸಾಂಪ್ರದಾಯಿಕವಾಗಿ ಬೆಳೆಯುವ ಸಿರಿಧಾನ್ಯಗಳಾದ ನವಣೆ, ಹಾರಕ ಸಾಮೆ, ಕೊರಲೆ, ಬರಗು ಮತ್ತು ಊದಲು ಬೆಳೆಗಳನ್ನು ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್ ಗೆ ರೂ.10000/-ಗಳಂತೆ ಗರಿಷ್ಠ ಎರಡು ಹೆಕ್ಟೇರ್ ಗೆ ಮಾತ್ರ ಸೀಮಿತವಾಗುವಂತೆ ಬೆಳೆ ಸಮೀಕ್ಷೆ ಆಧಾರದ ಮೇರೆಗೆ ನೇರ ನಗದು ವರ್ಗಾವಣೆ (DBT) ಮುಖಾಂತರ ಪ್ರೋತ್ಸಾಹಧನ ನೀಡಲಾಗಿರುತ್ತದೆ.
ಸಿರಿಧಾನ್ಯಗಳ ಸಂಸ್ಕರಣೆಗೆ ಉತ್ತೇಜನ ನೀಡುವ ಉದ್ದೇಶದೊಂದಿಗೆ ಸಿರಿಧಾನ್ಯಗಳ ಸಂಸ್ಕರಣೆ, ಮೌಲ್ಯವರ್ಧನೆ, ವರ್ಗೀಕರಣ, ಪ್ಯಾಕಿಂಗ್ ಮತ್ತು ಬ್ರಾಂಡಿಂಗ್ ಯಂತ್ರೋಪಕರಣಗಳಿಗೆ ಒಟ್ಟು ಯಂತ್ರೋಪಕರಣಗಳ ವೆಚ್ಚದ ಮೇಲೆ ಶೇ.50 ರಷ್ಟು ಅಥವಾ ಗರಿಷ್ಠ ರೂ. 10.00 ಲಕ್ಷಗಳ ವರೆಗೆ ಸಹಾಯಧನವನ್ನು ನೀಡಲಾಗಿರುತ್ತದೆ.
ಉದ್ದೇಶಗಳು
ರೈತರ ಆತ್ಮ ವಿಶ್ವಾಸವನ್ನು ಹೆಚ್ಚಿಸುವುದು.
ಕೃಷಿಯು ವ್ಯಾಪಾರವಲ್ಲ, ಅದೊಂದು ಸಂಸ್ಕೃತಿ ಎಂಬುದನ್ನು ರೈತರಿಗೆ ಮನವರಿಕೆ ಮಾಡಿಕೊಡುವುದು.
ರೈತರ ಸಾಲದ ಹೊರೆಯನ್ನು ಕಡಿಮೆ ಮಾಡುವುದು ಮತ್ತು ಸುಸ್ಥಿರತೆ ಮತ್ತು ಸ್ವಾಭಿಮಾನವನ್ನು ಸಾಧಿಸಲು ಅನುವು ಮಾಡಿಕೊಡುವುದು.
ಮಳೆಯಾಶ್ರಿತ ಮತ್ತು ಬರಪೀಡಿತ ಪ್ರದೇಶಗಳಲ್ಲಿ ಬರ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ತಗ್ಗಿಸಲು ರೈತರನ್ನು ಸಜ್ಜುಗೊಳಿಸುವುದು.









