ಪಿಎಂ-ಕಿಸಾನ್ ಪ್ರೋತ್ಸಾಹಧನ ಪಡೆಯಲು ಕೇಂದ್ರ ಸರ್ಕಾರದ ರೈತರ ಗುರುತಿನ ಐಡಿ ಕಡ್ಡಾಯವಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಯ ಪ್ರಕಾರ ಫ್ರೂಟ್ಸ್ ಹಾಗೂ ಭೂಮಿ ದತ್ತಾಂಶಗಳನ್ನು ನಿಯತವಾಗಿ ಜೋಡಣೆ ಮಾಡುವುದು ಅತಿ ಮುಖ್ಯವಾಗಿದೆ. ಹಾಗಾಗಿ ರೈತರು ಫ್ರೂಟ್ಸ್ ತಂತ್ರಾ<ಶದಲ್ಲಿ ಇ-ಕೆವೈಸಿ, ಮೊಬೈಲ್ ನಂಬರ್ ಅಪ್ಡೇಟ್ ಮಾಡಿಕೊಳ್ಳುವುದು, ರೈತರ ಹೆಸರಿನಲ್ಲಿರುವ ಎಲ್ಲಾ ಭೂಹಿಡುವಳಿಗಳನ್ನು ಕಡ್ಡಾಯವಾಗಿ ತಮ್ಮ ಎಫ್.ಐ.ಡಿಯಲ್ಲಿ ಸೇರ್ಪಡಿಸಿಕೊಳ್ಳುವುದು ಮತ್ತು ರೈತರ ಸಹಮತಿ ಪತ್ರವನ್ನು ವಿದ್ಯುನ್ಮಾನ ರೀತಿಯಲ್ಲಿ ನೀಡುವುದು ಕಡ್ಡಾಯವಾಗಿರುತ್ತದೆ.
ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದಿಂದ ಒಂದು ಕೇಂದ್ರ ನೋಂದಾಯಿತ ರೈತರ ಸಂಖ್ಯೆಯನ್ನು ಸೃಜಿಸಲಾಗುತ್ತದೆ. ಈ ರೀತಿಯಾಗಿ ಸೃಜಿಸಲಾದ ಕೇಂದ್ರ ನೋಂದಾಯಿತ ರೈತ ಸಂಖ್ಯೆಯನ್ನು ಕೇಂದ್ರ ಸರ್ಕಾರದಿಂದ ಅನುಷ್ಠಾನಗೊಳಿಸುವ ಪಿಎಂ-ಕಿಸಾನ್ ಯೋಜನೆ ಸೇರಿದಂತೆ ಇತರೆ ಯೋಜನೆಗಳಾದ ಬರ ಪರಿಹಾರ, ಬೆಳೆ ವಿಮೆ, ಮುಂತಾದ ಯೋಜನೆಗಳಿಗೆ ಕೇಂದ್ರ ನೋಂದಾಯಿತ ರೈತರ ಸಂಖ್ಯೆಯನ್ನು ಕಡ್ಡಾಯವಾಗಿ ಉಪಯೋಗಿಸಲಾಗುತ್ತದೆ.
ಹಾಗಾಗಿ ರೈತರು ಕೇಂದ್ರ ಸರ್ಕಾರದಿಂದಾಗಲಿ ಅಥವಾ ರಾಜ್ಯ ಸರ್ಕಾರದಿಂದ ಅನುಷ್ಠಾನಗೊಳಿಸಲಾಗುವ ಯೋಜನೆಯ ಸೌಲಭ್ಯವನ್ನು ಪಡೆಯಲು ರೈತರು ತಮ್ಮ ಆಧಾರ್ ಕಾರ್ಡ, ಆಧಾರ್ ಕಾರ್ಡನೊಂದಿಗೆ ಜೋಡಣೆಯಾಗಿರುವ ಮೊಬೈಲ್, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಹಾಗೂ ರೈತರ ಹೆಸರಿನಲ್ಲಿರುವ ಎಲ್ಲಾ ಪಹಣಿಗಳನ್ನು ತೆಗೆದುಕೊಂಡು ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ, ಗ್ರಾಮ ಒನ್ ಕೇಂದ್ರಗಳಿಗೆ ಹಾಗೂ ತೋಟಗಾರಿಕೆ ಇಲಾಖಾ ಕಚೇರಿಗಳಿಗೆ ಭೇಟಿ ನೀಡಿ ಕೇಂದ್ರ ನೊಂದಾಯಿತ ರೈತರ ಸಂಖ್ಯೆಯನ್ನು ಸೃಜಿಸಿಕೊಳ್ಳಬೇಕು.
ತಪ್ಪಿದಲ್ಲಿ ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುವರು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ, ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಆಯಾ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








