ಬೆಂಗಳೂರು: ರಾಜ್ಯದ ರೈತರ ಭೂ ದಾಖಲೆಗಳ ಸುರಕ್ಷತೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದ್ದಾರೆ. ಇನ್ನು ಮುಂದೆ ರೈತರು ತಮ್ಮ ಪಹಣಿ (RTC) ಗೆ ಆಧಾರ್ ಸಂಖ್ಯೆಯನ್ನು ಜೋಡಿಸುವುದು ಕಡ್ಡಾಯವಾಗಿದೆ.
ಈ ಹೊಸ ವ್ಯವಸ್ಥೆಯಿಂದ ರೈತರಿಗೆ ಆಗುವ ಪ್ರಮುಖ ಅನುಕೂಲಗಳು ಮತ್ತು ಬದಲಾವಣೆಗಳು ಇಲ್ಲಿವೆ:
1. ವಂಚನೆಗೆ ಬೀಳಲಿದೆ ಬ್ರೇಕ್
ಪಹಣಿಗೆ ಆಧಾರ್ ಜೋಡಣೆಯಾದ ನಂತರ, ಭೂ ದಾಖಲೆಗಳಲ್ಲಿ ಯಾವುದೇ ಬದಲಾವಣೆ ಅಥವಾ ತಿದ್ದುಪಡಿಗಳಾದರೂ ತಕ್ಷಣವೇ ಜಮೀನಿನ ಮಾಲೀಕರಿಗೆ SMS ಮೂಲಕ ಸಂದೇಶ ರವಾನೆಯಾಗಲಿದೆ. ಇದರಿಂದ ಮಾಲೀಕರ ಗಮನಕ್ಕೆ ಬಾರದೆ ನಡೆಯುವ ಅಕ್ರಮ ವಹಿವಾಟುಗಳಿಗೆ ಕಡಿವಾಣ ಬೀಳಲಿದೆ.
2. ಮಾನವ ಹಸ್ತಕ್ಷೇಪವಿಲ್ಲದ ‘ಸ್ವಯಂಚಾಲಿತ ಅನುಮೋದನೆ’
ಮ್ಯುಟೇಶನ್ (ಬದಲಾವಣೆ) ಪ್ರಕ್ರಿಯೆಯಲ್ಲಿ ವಿಳಂಬ ತಪ್ಪಿಸಲು ಸರ್ಕಾರ ಹೊಸ ತಂತ್ರಾಂಶವನ್ನು ಜಾರಿಗೆ ತಂದಿದೆ:
ಕ್ರಯ, ವಿಭಾಗ, ದಾನ, ಪೌತಿ ಮತ್ತು ವಿಲ್ ನಂತಹ ಪ್ರಕರಣಗಳಲ್ಲಿ 7 ಅಥವಾ 15 ದಿನಗಳ ನೋಟಿಸ್ ಅವಧಿ ಇರುತ್ತದೆ.
ನೋಟಿಸ್ ಅವಧಿ ಮುಗಿದ ನಂತರ, ಯಾವುದೇ ಆಕ್ಷೇಪಣೆ ಇಲ್ಲದಿದ್ದರೆ, ತಂತ್ರಾಂಶವು ಸರ್ವರ್ ಸಹಿ ಮೂಲಕ ಸ್ವಯಂಚಾಲಿತವಾಗಿ (Automatic Approval) ಮ್ಯುಟೇಶನ್ ಅನ್ನು ಅನುಮೋದಿಸಲಿದೆ.
ಇದರಿಂದ ಕಚೇರಿಗಳಿಗೆ ಅಲೆಯುವ ಕೆಲಸ ತಪ್ಪಲಿದ್ದು, ಭ್ರಷ್ಟಾಚಾರಕ್ಕೂ ಅವಕಾಶವಿರುವುದಿಲ್ಲ.
3. ತಕರಾರು ಇದ್ದರೆ ತಹಶೀಲ್ದಾರ್ ನ್ಯಾಯಾಲಯಕ್ಕೆ ವರ್ಗಾವಣೆ
ಒಂದೊಮ್ಮೆ ನಿಗದಿತ ನೋಟಿಸ್ ಅವಧಿಯೊಳಗೆ ಸಾರ್ವಜನಿಕರು ಅಥವಾ ಕಂದಾಯ ನಿರೀಕ್ಷಕರು ಯಾವುದಾದರೂ ಆಕ್ಷೇಪಣೆ ಸಲ್ಲಿಸಿದರೆ, ಅಂತಹ ಪ್ರಕರಣಗಳನ್ನು ತಂತ್ರಾಂಶವು ನೇರವಾಗಿ ತಹಶೀಲ್ದಾರ್ ನ್ಯಾಯಾಲಯಕ್ಕೆ ವರ್ಗಾಯಿಸುತ್ತದೆ. ಅಲ್ಲಿ ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
4. ರಾಜಸ್ವ ನಿರೀಕ್ಷಕರಿಗೆ (RI) ಹೊಸ ಸೌಲಭ್ಯ
ಈ ಮೊದಲು ರಾಜಸ್ವ ನಿರೀಕ್ಷಕರು ಆಕ್ಷೇಪಣೆ ಅಥವಾ ಅನುಮೋದನೆ ನೀಡಲು ತಾಲೂಕು ಕಚೇರಿಗೇ ಬರಬೇಕಿತ್ತು. ಆದರೆ ಈಗ ಅವರಿಗೆ ಪ್ರತ್ಯೇಕ ಲಾಗಿನ್ ನೀಡಲಾಗಿದ್ದು, ಅವರು ಇದ್ದ ಜಾಗದಿಂದಲೇ ತಂತ್ರಾಂಶದ ಮೂಲಕ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.








