ಚಿತ್ರದುರ್ಗ: ಸುಳ್ಳು ಹಾಗೂ ಊಹಾ ಪತ್ರಿಕೋದ್ಯಮದಿಂದ ಮಾಧ್ಯಮ ಕ್ಷೇತ್ರಕ್ಕೆ ಹಾನಿಯಾಗುತ್ತಿದೆ. ಪತ್ರಕರ್ತರು ಇಂದು ಗಾಳಿ ಸುದ್ಧಿಗಳಿಗೆ ಗವಾಕ್ಷಿಗಳಾಗುತ್ತಿದ್ದಾರೆ. ಸಾಮಾಜಿಕ ಮಾಧ್ಯಮ ತಾಣಗಳು ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳನ್ನು ಪ್ರಭಾವಿಸುತ್ತಿವೆ. ಇದರಿಂದ ಪತ್ರಕರ್ತರ ನೋಟ ಹಾಗೂ ಗ್ರಹಿಕೆ ಬದಲಾಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಆತಂಕ ವ್ಯಕ್ತಪಡಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪತ್ರಿಕಾ ಭವನ ಡಾ.ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಳ್ಳಲಾದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಊಹಾ ಪತ್ರಿಕೋದ್ಯಮ ಎಂದರೆ, ವಾಸ್ತವದಲ್ಲಿ ಇಲ್ಲದ ಸುದ್ದಿಗೆ ಜೀವ ತುಂಬಿ ಓದುಗ ಅಥವಾ ಪ್ರೇಕ್ಷಕರಿಗೆ ನೀಡುವುದಾಗಿದೆ. ಇದರೊಂದಿಗೆ ಸುದ್ದಿಯನ್ನು ಬೇಕಾಬಿಟ್ಟಿಯಾಗಿ ಬರೆದು ಸುಳ್ಳನ್ನು ಪ್ರಚಾರ ಮಾಡಲಾಗುತ್ತಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಪತ್ರಿಕೋದ್ಯಮ ಬಂದು ನಿಂತಿದೆ. ಸಾರ್ವಜನಿಕರಿಗೂ ಸಹ ಸುಳ್ಳು ಅಥವಾ ಸತ್ಯ ಯಾವುದು ಎನ್ನುವ ಗೊಂದಲದಲ್ಲಿದ್ದಾರೆ.
ಪತ್ರಕರ್ತರು ಗಾಳಿ ಸುದ್ದಿಗೆ ಗವಾಕ್ಷಿಗಳಾಗದೇ, ಸತ್ಯಕ್ಕೆ ಕಿಟಕಿಯಾಗಬೇಕು. ಧಾವಂತಕ್ಕೆ ಬಿದ್ದು ಸುದ್ದಿ ನೀಡುವ ಬದಲು, ಸತ್ಯವನ್ನು ಪರಿಶೀಲಿಸಿ ವರದಿ ಮಾಡಬೇಕು ಎಂದು ಕೆ.ವಿ.ಪ್ರಭಾಕರ್ ಹೇಳಿದರು.ರೋಚಕ ಹಾಗೂ ಬೆಚ್ಚಿಬೀಳಿಸುವ ಸುದ್ದಿ ನೀಡುತ್ತೇವೆ ಎನ್ನುವ ಧಾವಂತದಲ್ಲಿ ಇಂದು ಅಭಿವೃದ್ಧಿ, ತನಿಖಾ ಹಾಗೂ ಮಾನವೀಯ ಮೌಲ್ಯಗಳನ್ನು ಬಿಂಬಿಸುವ ಸುದ್ದಿಗಳು ಮರೆಯಾಗಿವೆ.
ಡಾ.ಬಿ.ಆರ್. ಅಂಬೇಡ್ಕರ್ ಅವರು “ಪತ್ರಿಕೋದ್ಯಮ ಪ್ರಜಾಪ್ರಭುತ್ವದ ಪ್ರಾಣವಾಯು” ಎಂದಿದ್ದಾರೆ. ಇಂದು ಮಾಧ್ಯಮಗಳ ಆದ್ಯತೆ ಬದಲಾಗಿದ್ದು, ಕಾರ್ಪೋರೇಟ್, ರಾಜಕೀಯ ಹಾಗೂ ಮನೋರಂಜನೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಪತ್ರಿಕೋದ್ಯಮದ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಬೇಕಾದ ತುರ್ತು ಸನ್ನಿವೇಶ ಎದುರಾಗಿದೆ ಎಂದು ಕೆ.ವಿ.ಪ್ರಭಾಕರ್ ತಿಳಿಸಿದರು.
ರಾಜ್ಯದಲ್ಲಿ 5200 ಕ್ಕೂ ಹೆಚ್ಚು ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ನೀಡಲು ಕ್ರಮ ಕೈಗೊಳ್ಳಲಾಗಿದೆ. ಸದ್ಯ ಗ್ರಾಮೀಣ ಪತ್ರಕರ್ತರ ಪಾಸ್ ನಿಯಮಗಳನ್ನು ಸಡಿಲಿಸಲಾಗಿದ್ದು, ಇದರಿಂದ ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ಅನುಕೂಲವಾಗಲಿದೆ. ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲರೂ ಬಹುತೇಕ ಮಧ್ಯಮ ವರ್ಗಕ್ಕೆ ಸೇರಿದವರಾಗಿದ್ದಾರೆ.
ಇವರ ಆರೋಗ್ಯ ರಕ್ಷಣೆ ದೃಷ್ಠಿಯಿಂದ ಮಾಧ್ಯಮ ಸಂಜೀವಿನಿ ಎನ್ನುವ ಕಾರ್ಯಕ್ರಮಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಲನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಪತ್ರಕರ್ತರಿಗೆ ನಿವೇಶನಗಳನ್ನು ಕೊಡಿಸಲು ಪ್ರಯತ್ನ ಮಾಡುವುದಾಗಿ ಕೆ.ವಿ. ಪ್ರಭಾಕರ್ ತಿಳಿಸಿದರು.
ರಾಜ್ಯ ವಸತಿ ಖಾತೆ ಸಚಿವರ ಮಾಧ್ಯಮ ಸಲಹೆಗಾರರಾದ ಲಕ್ಷ್ಮಿನಾರಾಯಣ ಅವರು ಮಾತನಾಡಿ, ರಾಜ್ಯದ ಎಲ್ಲಾ ವಸತಿ ಯೋಜನೆಗಳಲ್ಲಿ ಪತ್ರಕರ್ತರಿಗೆ ಶೇ.2 ರಷ್ಟು ಮೀಸಲು ನೀಡುವ ಯೋಜನೆ ಜಾರಿಗೆ ಸಿದ್ಧತೆ ನಡೆಸಲಾಗಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಹಂತ ಹಂತವಾಗಿ ಗ್ರಾಮೀಣ ಪತ್ರಕರ್ತರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಮಾಧ್ಯಮ ಸಂಜೀವಿನಿ ಯೋಜನೆಯನ್ನು ವಾರ್ತಾ ಇಲಾಖೆ ಮಾದ್ಯಮ ಪಟ್ಟಿಯಲ್ಲಿರುವ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲರಿಗೂ ವಿಸ್ತರಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುವುದಾಗಿ ತಿಳಿಸಿದರು.
ಪತ್ರಿಕಾ ಭವನದಲ್ಲಿ ನೂತನವಾಗಿ ನಿರ್ಮಿಸಿರುವ ಬಿ.ವಿ. ವೈಕುಂಠರಾಜು ಸಭಾಂಗಣ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಪತ್ರಕರ್ತರಿಗೆ ನಿವೇಶನ ಅಥವಾ ಮನೆಗಳನ್ನು ಮಂಜೂರು ಮಾಡಲು ನಿಯಮಗಳಲ್ಲಿ ತೊಡಕಿದೆ. ವಸತಿ ಇಲಾಖೆ ನಿಯಮಗಳನ್ನು ಬದಲು ಮಾಡಿದರೆ, ಪತ್ರಕರ್ತರಿಗೆ ಅನೂಕಲವಾಗಿದೆ ಎಂದರು.
ಹೊಳಲ್ಕೆರೆ ಶಾಸಕ ಡಾ|| ಎಂ. ಚಂದ್ರಪ್ಪ ಮಾತನಾಡಿ, ಪತ್ರಕರ್ತರ ಕ್ಷೇಮ ನಿಧಿಗೆ ರೂ.3 ಲಕ್ಷ ಘೋಷಣೆ ಮಾಡಿದ್ದು, ಪತ್ರಕರ್ತರು ಶೀಘ್ರವೇ ಕ್ಷೇಮನಿಧಿಗೆ ಹಣ ಪಡೆದುಕೊಳ್ಳಬಹುದು. ಹೊಳಲ್ಕೆರೆ ಕಾರ್ಯನಿರತ ಪತ್ರಕರ್ತರ ಸಂಘದ ಕಟ್ಟಡಕ್ಕೆ ರೂ.10ಲಕ್ಷ ಅನುದಾನ ಮಂಜೂರು ಮಾಡುವುದಾಗಿ ತಿಳಿಸಿದರು.
ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ, ಮಾಧ್ಯಮ ಅಕಾಡೆಮಿ ಸದಸ್ಯ ಎಂ.ಎನ್. ಅಹೋಬಳಪತಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಗೌಡಗೆರೆ, ಪ್ರಧಾನ ಕಾರ್ಯದರ್ಶಿ ಎಸ್.ಸಿದ್ದರಾಜು, ಖಜಾಂಚಿ ಡಿ.ಕುಮಾರಸ್ವಾಮಿ, ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್, ಪತ್ರಕರ್ತರಾದ ಯೋಗಿಶ್, ಮದನಗೌಡ, ಗಿರೀಶ್ ಕೋಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.