ಚಿಕ್ಕಮಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) ದಲ್ಲಿ ನಿವೇಶನ ಹಂಚಿಕೆ ವಿಚಾರದಲ್ಲಿ ಮುಖ್ಯಮಂತ್ರಿಗಳ ವಿರುದ್ಧ ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡಿದ ಪ್ರತಿಪಕ್ಷಗಳು, ಮುಖ್ಯಮಂತ್ರಿಗಳಿಗೆ ಉತ್ತರ ನೀಡಲೂ ಅವಕಾಶ ಕೊಡದೆ ಸುಳ್ಳನ್ನು ಸತ್ಯ ಮಾಡುವ ಪ್ರಯತ್ನ ನಡೆಸಿದವು ಎಂದು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿಯನ್ನೂ ಹೊಂದಿರುವ ಇಂಧನ ಸಚಿವ ಕೆ.ಜೆ.ಜಾರ್ಜ್ ಆರೋಪಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, “ಮುಖ್ಯಮಂತ್ರಿಯವರ ಪತ್ನಿಗೆ 50:50 ಅನುಪಾತದಲ್ಲಿ ನಿವೇಶನ ಹಂಚಿಕೆ ಮಾಡುವ ಮೂಲಕ ಅಕ್ರಮ ಎಸಗಲಾಗಿದೆ ಎಂಬುದು ಪ್ರತಿಪಕ್ಷಗಳ ಆರೋಪ. ಆದರೆ, 50:50 ಅನುಪಾತದಲ್ಲಿ ಹಂಚಿಕೆ ಮಾಡುವ ನಿರ್ಧಾರ ಕೈಗೊಂಡಿದ್ದು ಯಾರು? ಬಿಜೆಪಿ ಸರ್ಕಾರವಲ್ಲವೇ,”? ಎಂದು ಪ್ರಶ್ನಿಸಿದರು.
“ಮೂಡಾ ನಿವೇಶನಗಳ ಹಂಚಿಕೆಗೆ ಭೂಸ್ವಾಧೀನ ಮಾಡದೆ ಮುಖ್ಯಮಂತ್ರಿಯವರ ಪತ್ನಿಯ ಜಮೀನು ಪಡೆಯಲಾಗಿತ್ತು. ಕಾನೂನು ಪ್ರಕಾರ ಆ ಭೂಮಿಯನ್ನು ಸ್ವಾಧೀನದಿಂದ ಕೈಬಿಡಬೇಕಿತ್ತು. ಆದರೆ, 50:50 ಅನುಪಾತದಲ್ಲಿ ನಿವೇಶನ ನೀಡುವುದಾಗಿ ಹೇಳಿ ಅದರಂತೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕ್ರಮ ಕೈಗೊಳ್ಳಲಾಗಿತ್ತು. ಈಗ ಅವರು ಮುಖ್ಯಮಂತ್ರಿಗಳ ವಿರುದ್ಧವೇ ಆರೋಪ ಮಾಡುತ್ತಿದ್ದಾರೆ. ಈ ಆರೋಪದಲ್ಲಿ ಸತ್ಯಾಂಶವೇ ಇಲ್ಲ,” ಎಂದು ಹೇಳಿದರು.
“ಒಂದೊಮ್ಮೆ ಮೂಡಾ ಹಗರಣ ನಡೆದು ಅದರಲ್ಲಿ ಮುಖ್ಯಮಂತ್ರಿಯವರ ಪಾತ್ರ ಇದೆ ಎಂದಾಗಿದ್ದರೆ ಪ್ರತಿಪಕ್ಷದವರು ಸದನದಲ್ಲಿ ಮುಖ್ಯಮಂತ್ರಿಯವರಿಗೆ ಉತ್ತರಿಸಲು ಅವಕಾಶ ನೀಡುತ್ತಿದ್ದರು. ಆದರೆ, ಮುಖ್ಯಮಂತ್ರಿಯವರು ಉತ್ತರ ನೀಡಿದರೆ ಎಲ್ಲಿ ಅವರ ಹುಳುಕುಗಳು ಹೊರಬಂದು ಮುಖ್ಯಮಂತ್ರಿ ವಿರುದ್ಧ ಮಾಡಿದ ಆರೋಪಗಳು ಸುಳ್ಳು ಎಂದು ಸ್ಪಷ್ಟವಾಗುತ್ತವೋ ಎಂಬ ಆತಂಕದಿಂದ ಉತ್ತರಕ್ಕೂ ಅವಕಾಶ ನೀಡದೆ ಪ್ರತಿಪಕ್ಷ ಸದಸ್ಯರು ರಾಜಕಾರಣ ಮಾಡಿದರು.” ಎಂದರು.
“ಇಂತಹ ವಿಚಾರಗಳಲ್ಲಿ ಮಾಧ್ಯಮಗಳು ಸತ್ಯ ಸಂಗತಿಯನ್ನು ಬೆಳಕಿಗೆ ತರಬೇಕು ಎಂಬ ಉದ್ದೇಶದಿಂದ ನಾನು ಈ ವಿಚಾರವನ್ನು ಇಲ್ಲಿ ಪ್ರಸ್ತಾಪಿಸಿದ್ದೇನೆ. ಏಕೆಂದರೆ, ಈ ಹಿಂದೆ ಐಎಎಸ್ ಅಧಿಕಾರಿ ಡಿ.ಕೆ.ರವಿ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಮೇಲೆ ಆರೋಪ ಕೂರಿಸಲಾಗಿತ್ತು . ಆದರೆ, ಸಿಬಿಐ ತನಿಖೆ ನಡೆದು ನನ್ನನ್ನು ವಿಚಾರಣೆಗೂ ಕರೆಯಲಿಲ್ಲ. ಅಂತಿಮ ವರದಿಯಲ್ಲಿ ಈ ಪ್ರಕರಣದಲ್ಲಿ ನನ್ನ ಪಾತ್ರ ಏನೂ ಇಲ್ಲ ಎಂದು ಸಿಬಿಐ ಹೇಳಿತ್ತು. ಆದರೆ, ಮಾಧ್ಯಮಗಳು ಅದನ್ನು ಪ್ರಸಾರ ಮಾಡಲೇ ಇಲ್ಲ. ಮುಖ್ಯಮಂತ್ರಿಯವರ ಪ್ರಕರಣದಲ್ಲೂ ಈ ರೀತಿ ಆಗಬಾರದು,” ಎಂದು ತಿಳಿಸಿದರು.
“ರಾಜಕಾರಣಿಗಳು ತಪ್ಪು ಮಾಡಿದಾಗ ಟೀಕಿಸುವುದು ಮಾಧ್ಯಮಗಳ ಜವವಾಬ್ದಾರಿ. ಅದೇ ರೀತಿ ಅವರು ಒಳ್ಳೆಯ ಕೆಲಸ ಮಾಡಿದಾಗಲೂ ಅದನ್ನು ಬೆಂಬಲಿಸಿ ಬೆನ್ನು ತಟ್ಟುವ ಕೆಲಸ ಮಾಡಬೇಕು ಎಂದು ಹೇಳಿದ ಅವರು, ಚಿಕ್ಕಮಗಳೂರು ಪತ್ರಕರ್ತರ ಸಂಘಕ್ಕೆ ನಿವೇಶನ ಮತ್ತು ಕಟ್ಟಡ ಒದಗಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದು,” ಎಂದು ಜಾರ್ಜ್ ಭರವಸೆ ನೀಡಿದರು.
ಪತ್ರಕರ್ತರಿಗೆ ಸನ್ಮಾನ
ಇದೇ ಸಂದರ್ಭದಲ್ಲಿ ಜಿಲ್ಲೆಯಿಂದ ವರ್ಗಾವಣೆಗೊಂಡಿರುವ ವಾಹಿನಿ ವರದಿಗಾರ ವೀರೇಶ್, ಬಿ.ಆರ್. ರೋಹಿತ್ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತರ ಪ್ರಜಾವಾಣಿ ಪತ್ರಿಕೆಯ ವರದಿಗಾರ ಸಿಗರನಹಳ್ಳಿ ವಿಜಯ್ ಕುಮಾರ್ ,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪುರಸ್ಕೃತ ನ್ಯೂಸ್ 18 ವರದಿಗಾರ ಯೋಗೇಶ್ ಕಾಮೇನಳ್ಳಿಯವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ, ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಂ ಅಮಟೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಪದ್ಮಾವತಿ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಅಧ್ಯಕ್ಷ ಪಿ.ರಾಜೇಶ್ ಪಾಲ್ಗೊಂಡಿದ್ದರು.
‘ರಕ್ತದ ಕ್ಯಾನ್ಸರ್’ ಪೀಡಿತ 14 ವರ್ಷದ ಬಾಲಕನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ: ಬಡ ರೋಗಿ ಬದುಕಿಗೆ ಬೆಳಕಾದ ‘ಕಿದ್ವಾಯಿ’