ಬೆಂಗಳೂರು: ಮಕ್ಕಳ ದಿನಾಚರಣೆಯ ಅಂಗವಾಗಿ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ಬೃಹತ್ ಪೋಷಕ-ಶಿಕ್ಷಕರ ಸಭೆಯ (Mega Parents-Teachers Meet) ಉದ್ಘಾಟನಾ ಸಮಾರಂಭದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್. ಮಧು ಬಂಗಾರಪ್ಪ ಅವರು ರಾಜ್ಯದ ವಿವಿಧ ಭಾಗಗಳ ಸರ್ಕಾರಿ ಶಾಲೆ ಮತ್ತು ಪಿಯುಸಿ ವಿದ್ಯಾರ್ಥಿಗಳೊಂದಿಗೆ ಆನ್‌ಲೈನ್ ಹಾಗೂ ನೇರವಾಗಿ ಸಂವಾದ ನಡೆಸಿದರು.
ಈ ವೇಳೆ, ಪಠ್ಯೇತರ ಚಟುವಟಿಕೆಗಳಿಗೆ ಒತ್ತು, ಪಿಯುಸಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ ವಿಸ್ತರಣೆ ಹಾಗೂ ಉದ್ಯೋಗಾವಕಾಶಗಳ ಕುರಿತು ಪ್ರಮುಖ ವಿಚಾರವಾಗಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ಸರ್ಕಾರಿ ಶಾಲಾ ವಿದ್ಯಾರ್ಥಿಯಾದ ಈರಣ್ಣ ಅವರು, ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಗಮನ ನೀಡುವಂತೆ ಸಚಿವರಲ್ಲಿ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಗುಣಮಟ್ಟದ ಶಿಕ್ಷಣ ಮತ್ತು ಚಟುವಟಿಕೆಗಳಿಗೆ ಒತ್ತು ನೀಡಲು ಸರ್ಕಾರ ಬದ್ಧವಾಗಿದೆ. ಈಗಾಗಲೇ ಸುಮಾರು 13,000 ಶಿಕ್ಷಕರನ್ನು ನೇಮಕ ಮಾಡಲಾಗಿದೆ ಮತ್ತು ಶೀಘ್ರದಲ್ಲೇ ಮತ್ತೆ 12,000 ಶಿಕ್ಷಕರನ್ನು ಹಾಗೂ ಅನುದಾನಿತ ಸಂಸ್ಥೆಗಳಲ್ಲಿ 6,000ಕ್ಕೂ ಹೆಚ್ಚು ಶಿಕ್ಷಕರನ್ನು ನೇಮಕ ಮಾಡಲಾಗುತ್ತದೆ. ಮುಂಬರುವ ದಿನಗಳಲ್ಲಿ, ಬೇಡಿಕೆಯ ಅನುಗುಣವಾಗಿ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ಬೈಲಹೊಂಗಲದ ಸರ್ಕಾರಿ ಪಿಯುಸಿ ವಿದ್ಯಾರ್ಥಿ ರಾಕೇಶ್ ಅವರು, ಶಾಲೆ 10 ಗಂಟೆಗೆ ಆರಂಭವಾಗಿ 4 ಗಂಟೆಗೆ ಮುಗಿಯುವುದರಿಂದ ತಾವು ಬೆಳಗ್ಗೆ 7:45ಕ್ಕೆ ಮನೆ ಬಿಡಬೇಕಾಗುತ್ತದೆ. ಹೀಗಾಗಿ ಪಿಯುಸಿ ವಿದ್ಯಾರ್ಥಿಗಳಿಗೂ ಮಧ್ಯಾಹ್ನದ ಉಪಹಾರ ಯೋಜನೆಯನ್ನು ವಿಸ್ತರಿಸುವಂತೆ ಕೋರಿದರು.
ಇದಕ್ಕೆ ಸ್ಪಂದಿಸಿದ ಸಚಿವರು, ಈ ಹಿಂದೆ 8ನೇ ತರಗತಿಯವರೆಗೆ ಇದ್ದ ಯೋಜನೆಯನ್ನು ಈಗ 10ನೇ ತರಗತಿಯವರೆಗೆ ವಿಸ್ತರಿಸಲಾಗಿದೆ. ಜೊತೆಗೆ, ವಾರದಲ್ಲಿ ಆರು ದಿನ ಮೊಟ್ಟೆ ಅಥವಾ ಬಾಳೆಹಣ್ಣು ಮತ್ತು ಐದು ದಿನ Sai Sure ಮಿಶ್ರಣವನ್ನು ನೀಡಲಾಗುತ್ತಿದೆ. ಮೊಟ್ಟೆ/ಬಾಳೆಹಣ್ಣು ವಿಸ್ತರಣೆಗೆ ₹1500 ಕೋಟಿ ಅನುದಾನ ನೀಡಿದ ಅಜೀಂ ಪ್ರೇಮ್‌ಜಿ ಫೌಂಡೇಶನ್‌ಗೆ ಅವರು ಧನ್ಯವಾದ ತಿಳಿಸಿದರು. ರಾಜ್ಯದ ಎಲ್ಲ ಪಿಯುಸಿ ವಿದ್ಯಾರ್ಥಿಗಳಿಗೂ ಇದನ್ನು ವಿಸ್ತರಿಸುವ ಕುರಿತು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.
ಪೊಲೀಸ್ ಕಾಲೋನಿಯ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ತನುಜಾ ಬಿ.ವಿ. ಅವರು ಭವಿಷ್ಯದ ಉದ್ಯೋಗಾವಕಾಶಗಳ ಬಗ್ಗೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, ಉತ್ತೀರ್ಣ ಅಂಕವನ್ನು ಶೇ. 35 ರಿಂದ 33ಕ್ಕೆ ಇಳಿಸುವ ಇಲಾಖೆಯ ನಿರ್ಧಾರವನ್ನು ಪುನರುಚ್ಚರಿಸಿದರು. ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು. ಜೊತೆಗೆ, ಕೆಪಿಎಸ್ ಶಾಲೆಗಳಲ್ಲಿ ‘ಸ್ಕಿಲ್ ಅಟ್ ಸ್ಕೂಲ್’ ಕಾರ್ಯಕ್ರಮ ಮತ್ತು 1ನೇ ತರಗತಿಯಿಂದಲೇ ಕಂಪ್ಯೂಟರ್ ಕಲಿಕೆ ಜಾರಿಗೆ ತರುವುದರಿಂದ ವಿದ್ಯಾರ್ಥಿಗಳಿಗೆ ಉದ್ಯೋಗ ಪಡೆಯಲು ನೆರವಾಗಲಿದೆ ಎಂದು ತಿಳಿಸಿದರು.
ಶಿವಮೊಗ್ಗದ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ಬೃಂದಾ ಅವರು ದ್ವಿಭಾಷಾ ಶಿಕ್ಷಣದ ಕುರಿತು ಕೇಳಿದಾಗ, ದ್ವಿಭಾಷಾ ಮಾಧ್ಯಮವಿದ್ದರೂ ಕನ್ನಡ ಭಾಷೆಗೆ ಸದಾ ಆದ್ಯತೆ ನೀಡಬೇಕು ಮತ್ತು ಅದನ್ನು ಪ್ರೀತಿಯಿಂದ ಅಪ್ಪಿಕೊಳ್ಳಬೇಕು ಎಂದು ಸಚಿವರು ಹೇಳಿದರು.
ಸಚಿವರು ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್ ಸೌಲಭ್ಯಗಳು ಮತ್ತು ಬಾಲಕರಿಗೆ ಉಚಿತ ಸಾರಿಗೆ ಸೌಲಭ್ಯಗಳ ಕುರಿತು ಸಹ ಪ್ರತಿಕ್ರಿಯಿಸಿದರು.
ಮುಖ್ಯವಾಗಿ, ಮುಂಬರುವ ಶೈಕ್ಷಣಿಕ ವರ್ಷಗಳಿಂದ ಕಲೆ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ (ಕಾನೂನು, ಸಿಎ ಸೇರಿದಂತೆ) ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಹಾಗೆಯೇ, ಸರ್ಕಾರಿ ಸಂಸ್ಥೆಗಳನ್ನು ಇನ್ನಷ್ಟು ಬಲಪಡಿಸಲು ಹಳೆಯ ವಿದ್ಯಾರ್ಥಿಗಳು ತಮ್ಮ ಶಾಲೆಗಳು ಮತ್ತು ಕಾಲೇಜುಗಳ ಅಭಿವೃದ್ಧಿಗೆ ದೇಣಿಗೆ ನೀಡುವಂತೆ ಅವರು ಮನವಿ ಮಾಡಿದರು.
Bihar Results: ಇದು ಬಿಹಾರದ ಅಭಿವೃದ್ಧಿಯ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ಬಿಹಾರಿಗಳ ಗೆಲುವು: ಅಮಿತ್ ಶಾ
ALERT : `ಮಧುಮೇಹ’ದಿಂದ ಹೃದಯಾಘಾತ, ಪಾರ್ಶ್ವವಾಯು ಸೇರಿ ಈ ಗಂಭೀರ ಕಾಯಿಲೆಗಳು ಬರಬಹುದು ಎಚ್ಚರ.!








