ಅನುಪ್ಪೂರ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಅನುಪ್ಪೂರ್ ಜಿಲ್ಲೆಯ ಕೋಟ್ಮಾ ಬಸ್ ನಿಲ್ದಾಣದ ಸಮೀಪವಿರುವ 10 ವರ್ಷ ಹಳೆಯ ‘ಅಗರ್ವಾಲ್ ಲಾಡ್ಜ್’ ಶನಿವಾರ ಸಂಜೆ ಸುಮಾರು 5:30ಕ್ಕೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಕಟ್ಟಡ ಕುಸಿಯುವಾಗ ಸ್ಫೋಟದಂತಹ ದೊಡ್ಡ ಶಬ್ದ ಕೇಳಿಬಂದಿದ್ದು, ಇಡೀ ಪ್ರದೇಶ ಧೂಳಿನಿಂದ ಆವೃತವಾಗಿತ್ತು. ಈ ದುರ್ಘಟನೆಯಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 7 ರಿಂದ 10 ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಆತಂಕ ಎದುರಾಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಕಟ್ಟಡ ಕುಸಿಯುವ ಮೊದಲು ಸ್ಫೋಟದಂತಹ ಸದ್ದು ಕೇಳಿಬಂದಿದೆ. ನಂತರ ಕೇವಲ ಕ್ಷಣಾರ್ಧದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಮಣ್ಣುಪಾಲಾಗಿದೆ.ಲಾಡ್ಜ್ ಪಕ್ಕದ ನಿವೇಶನದಲ್ಲಿ ಹೊಸ ಕಟ್ಟಡಕ್ಕಾಗಿ ಆಳವಾದ ಪಾಯ ತೋಡುವ ಕೆಲಸ ನಡೆಯುತ್ತಿತ್ತು. ಈ ಅಗೆಯುವಿಕೆಯಿಂದಾಗಿ ಹಳೆಯ ಕಟ್ಟಡದ ಪಾಯಕ್ಕೆ ಹಾನಿಯಾಗಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.
ಸಿಕ್ಕಿಬಿದ್ದವರು: ಅವಶೇಷಗಳಡಿ ಸಿಲುಕಿದ್ದ ಮೂವರನ್ನು ಈಗಾಗಲೇ ಸುರಕ್ಷಿತವಾಗಿ ರಕ್ಷಿಸಲಾಗಿದೆ. ಆದರೆ ಇನ್ನೂ ಹಲವರು ಒಳಗೆ ಸಿಲುಕಿದ್ದು, ರಕ್ಷಣಾ ಕಾರ್ಯ ಚುರುಕಿನಿಂದ ಸಾಗಿದೆ.
ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಘಟನೆಯ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಎನ್ಡಿಆರ್ಎಫ್ (NDRF) ಮತ್ತು ಎಸ್ಡಿಆರ್ಎಫ್ ತಂಡಗಳನ್ನು ಸ್ಥಳಕ್ಕೆ ರವಾನಿಸಿದ್ದಾರೆ.ಎಸ್ಇಸಿಎಲ್ (SECL) ಮತ್ತು ಜೆಎಂಎಸ್ ಕಂಪನಿಯ ತಜ್ಞ ರಕ್ಷಣಾ ತಂಡಗಳು ಆಧುನಿಕ ಯಂತ್ರೋಪಕರಣಗಳೊಂದಿಗೆ ಅವಶೇಷಗಳನ್ನು ತೆರವುಗೊಳಿಸುತ್ತಿವೆ.
ಕೋಟ್ಮಾ ಮತ್ತು ಅನುಪ್ಪೂರ್ ಜಿಲ್ಲಾ ಆಸ್ಪತ್ರೆಗಳನ್ನು ‘ಹೈ-ಅಲರ್ಟ್’ನಲ್ಲಿ ಇರಿಸಲಾಗಿದ್ದು, ಗಾಯಾಳುಗಳಿಗೆ ತಕ್ಷಣದ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ.






