ನವದೆಹಲಿ: ಎನ್ಸಿಇಆರ್ಟಿ (NCERT) ಪಠ್ಯಪುಸ್ತಕದಲ್ಲಿ ನ್ಯಾಯಾಂಗದ ಕುರಿತು ಇರುವ ವಿವಾದಾತ್ಮಕ ಅಧ್ಯಾಯವನ್ನು ಮರು-ಪರಿಶೀಲಿಸಲು ಮತ್ತು ತಿದ್ದಲು ಕೇಂದ್ರ ಸರ್ಕಾರವು ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸಿದೆ. ಈ ಕುರಿತು ಇಂದು ಸುಪ್ರೀಂ ಕೋರ್ಟ್ಗೆ ಕೇಂದ್ರದ ಪರ ವಕೀಲರು ಅಧಿಕೃತ ಮಾಹಿತಿ ನೀಡಿದ್ದಾರೆ.
ಈ ಸಮಿತಿಯಲ್ಲಿ ಭಾರತದ ಮಾಜಿ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಮತ್ತು ನ್ಯಾಯಮೂರ್ತಿ ಅನಿರುದ್ಧ ಬೋಸ್ ಅವರಂತಹ ಘಟಾನುಘಟಿಗಳು ಇರಲಿದ್ದಾರೆ ಎಂದು ಕೇಂದ್ರ ತಿಳಿಸಿದೆ.
ವಿವಾದದ ಹಿನ್ನೆಲೆ: 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ನ್ಯಾಯಾಂಗದ ಕಾರ್ಯವೈಖರಿ ಮತ್ತು ಭ್ರಷ್ಟಾಚಾರದ ಕುರಿತು ತಪ್ಪಾದ ಮತ್ತು ನ್ಯಾಯಾಂಗದ ಗೌರವಕ್ಕೆ ಚ್ಯುತಿ ತರುವಂತಹ ಅಂಶಗಳಿವೆ ಎಂದು ಈ ಹಿಂದೆ ಆಕ್ಷೇಪ ವ್ಯಕ್ತವಾಗಿತ್ತು.
ಈ ಹಿಂದೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, “ಚಿಕ್ಕ ವಯಸ್ಸಿನಲ್ಲೇ ಮಕ್ಕಳ ಮನಸ್ಸಿನಲ್ಲಿ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸುವುದು ಅಪಾಯಕಾರಿ” ಎಂದು ಎಚ್ಚರಿಸಿತ್ತು. ಅಲ್ಲದೆ, ತಕ್ಷಣವೇ ಪಠ್ಯವನ್ನು ಸರಿಪಡಿಸುವಂತೆ ಸೂಚಿಸಿತ್ತು.ಈಗ ರಚನೆಯಾಗಿರುವ ಈ ತಜ್ಞರ ಸಮಿತಿಯು ನ್ಯಾಯಾಂಗದ ಸ್ವಾತಂತ್ರ್ಯ, ಅದರ ಜವಾಬ್ದಾರಿಗಳು ಮತ್ತು ಸಾಂವಿಧಾನಿಕ ಮಹತ್ವವನ್ನು ಎತ್ತಿ ಹಿಡಿಯುವಂತೆ ಹೊಸ ಪಠ್ಯವನ್ನು ಸಿದ್ಧಪಡಿಸಲಿದೆ.








