ಬೆಂಗಳೂರು : ಅಗತ್ಯಕ್ಕಿಂತಲೂ ಹೆಚ್ಚು ಪ್ರಮಾಣ ಉಪ್ಪು ಸೇವನೆಯಿಂದ ಭಾರತಲ್ಲಿ ಮಕ್ಕಳು ಸಹ ಸಾಂಕ್ರಾಮಿಕೇತರ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಅಧಿಕ ಉಪ್ಪು ಸೇವನೆಯಿಂದ ಭಾರತದಲ್ಲಿ ಮಕ್ಕಳು ಸೇರಿದಂತೆ ಜನರು ನಾನಾ ರೋಗಗಳಿಗೆ ತುತ್ತಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಅದಿಕ ಉಪ್ಪು ಸೇವನೆಯಿಂದ ರಕ್ತದೊತ್ತಡಕ್ಕೆ ಒಳಗಾಗಿ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ.
ಬದಲಾದ ಜೀವನ ಶೈಲಿಯಿಂದ ಇತ್ತೀಚಿನ ದಿನಗಳಲ್ಲಿ ಅಹಾರ ಪದಾರ್ಥಗಳಲ್ಲಿನ ಅತಿಯಾದ ಕೊಬ್ಬು, ಉಪ್ಪು ಮತ್ತು ಸಕ್ಕರೆ ಸೇವನೆ ಹೆಚ್ಚಾಗಿ ಜನರ ಅರೋಗ್ಯವಂತ ಬದುಕಿನ್ನೇ ಕಸಿದುಕೊಳ್ಳುತ್ತಿವೆ. ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಸಮೀಕ್ಷೆ ಪ್ರಕಾರ ಭಾರತದಲ್ಲಿ ಅಧಿಕ ಉಪ್ಪು ಸೇವನೆಯಿಂದ ಪ್ರತಿ ವರ್ಷ 1.75 ಲಕ್ಷ ಮಂದಿ ಸಾವಿಗೀಡಾಗುತ್ತಿದ್ದಾರೆ. ಅನಾರೋಗ್ಯಕರ ಆಹಾರ ಪದ್ಧತಿಯಿಂದ ಜನರಲ್ಲಿ ಸಾಂಕ್ರಾಮಿಕೇತರ ರೋಗಗಳು ಹೆಚ್ಚಾಗಿ ಜೀವ ಹಿಂಡುತ್ತಿವೆ.
ಆರೋಗ್ಯವಂತ ಬದುಕಿಗಾಗಿ ಯಾವುದೇ ವ್ಯಕ್ತಿ ಪ್ರತಿ ನಿತ್ಯ ಐದು ಗ್ರಾಂಗಿಂತಲೂ ಹೆಚ್ಚು ಉಪ್ಪು ಸೇವನೆ ಮಾಡಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾನದಂಡ ನಿಗದಿ ಪಡಿಸಿದೆ. ಈ ಮಾನದಂಡದ ಪ್ರಕಾರ ಮಕ್ಕಳು ಐದು ಗ್ರಾಂ. ಗಿಂತಲೂ ಕಡಿಮೆ ಉಪ್ಪು ಮಾತ್ರ ಪ್ರತಿ ದಿನ ಸೇವಿಸಬೇಕು. ವಾಸ್ತವದಲ್ಲಿ ಭಾರತೀಯರು ಅಹಾರ ಪದಾರ್ಥಗಳ ಮೂಲಕ ಕನಿಷ್ಠ 8 ರಿಂದ 11 ಗ್ರಾಂ ಉಪ್ಪುನ್ನು ಸೇವಿಸುತ್ತಿದ್ದಾರೆ. ಅತಿಯಾದ ಉಪ್ಪು ಸೇವನೆಯಿಂದ ರಕ್ತದ ಒತ್ತಡ ಹೆಚ್ಚಾಗಿ, ಹೃದಯ ಸಂಬಂಧಿ ಕಾಯಿಲೆಗಳಾದ ಹೃದಯಘಾತ, ಲಕ್ವ, ಕಿಡ್ನಿ ವೈಫಲ್ಯದಂತಹ ಕಾಯಲೆಗಳಿಗೆ ತುತ್ತಾಗಿ ಬದುಕನ್ನೇ ಕಳೆದುಕೊಳ್ಳುತ್ತಿದ್ದಾರೆ.
ನ್ಯಾಷನಲ್ ನಾನ್ ಕಮ್ಯೂನಿಕೇಬಲ್ ಡಿಸೀಸಸ್ ಮಾನಿಟರಿಂಗ್ ಸರ್ವೆ 2017-18 ರ ಪ್ರಕಾರ ಭಾರತದಲ್ಲಿ 18 ರಿಂದ 69 ವಯೋಮಾನದ 28.5 ರಷ್ಟು ಮಂದಿ ರಕ್ತದ ಒತ್ತಡದಿಂದ ಬಳಲುತ್ತಿದ್ದಾರೆ. ರಾಷ್ಟ್ರೀಯ ಸಮಗ್ರ ಪೌಷ್ಠಿಕ ಸರ್ವೆ ಪ್ರಕಾರ ಭಾರತದಲ್ಲಿ ಶೇ. 05 ರಷ್ಟು ಮಕ್ಕಳು ರಕ್ತದ ಒತ್ತಡಕ್ಕೆ ಒಳಗಾಗಿದ್ದಾರೆ ಎಂಬ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿತ್ತು. ಭಾರತದಲ್ಲಿ ಮಕ್ಕಳು ಸೇರಿದಂತೆ ಜನರು ಉಪ್ಪು ಸೇವನೆ ಪ್ರಮಾಣ ಕಡಿಮೆ ಮಾಡುವ ಅಗತ್ಯತೆಯನ್ನು ಈ ಅಂಕಿ ಅಂಶಗಳು ಬಹಿರಂಗಪಡಿಸಿವೆ.
ಭಾರತದಲ್ಲಿ 2025 ರ ಅಂತ್ಯದ ವೇಳೆಗೆ ಉಪ್ಪು ಸೇವನೆ ಪ್ರಮಾಣ ಶೇ. 30 ರಷ್ಟು ಕಡಿಮೆ ಮಾಡುವ ಗುರಿ ವಿಶ್ವ ಅರೋಗ್ಯ ಸಂಸ್ಥೆ ನೀಡಿದೆ. ಈ ಗುರಿ ಸಾಧಿಸಲು ಅಹಾರ ಪದಾರ್ಥ ಸೇವನೆ ಸೇರಿದಂತೆ ಎಲ್ಲಾ ಮೂಲಗಳಿಂದ ಉಪ್ಪು ಸೇವನೆ ನಿಯಂತ್ರಿಸುವ ಕಾರ್ಯಕ್ರಮಗಳನ್ನು ರಾಷ್ಟ್ರದಲ್ಲಿ ಕಾರ್ಯಗತಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಯತ್ನಿಸುತ್ತಿವೆ. ಈ ನಿಟ್ಟಿನಲ್ಲಿ ಪಿಎಂ ಪೋಷಣ್ ಬಿಸಿಯೂಟ ಕಾರ್ಯಕ್ರಮದಲ್ಲಿ ಉಪ್ಪಿನ ಬಳಕೆ ಕಡಿಮೆ ಮಾಡಲು ಬಿಸಿಯೂಟ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. ನಿರಂತರ ಕಾರ್ಯಗಾರ ಆಯೋಜಿಸಿ ಜಾಗೃತಿ ಮೂಡಿಸಲಾಗುತ್ತಿದೆ.
ಅತಿಯಾದ ಉಪ್ಪು ಸೇವನೆ ಭಾರತೀಯರ ಅರೋಗ್ಯವಂತ ಬದುಕನ್ನೇ ಕಸಿದುಕೊಳ್ಳುತ್ತಿದೆ. ಇದರಿಂದ ಚಿಕ್ಕಂದಿನಿಂದಲೇ ಮಕ್ಕಳಿಗೆ ಆರೋಗ್ಯಕರ ಆಹಾರದ ಅರಿವು ನೀಡುವುದು ಹಾಗು ಸರಿಯಾದ ಪೌಷ್ಠಿಕ ಮಾಹಿತಿಯೊಂದಿಗೆ ಮಕ್ಕಳಲ್ಲಿ ಆರೋಗ್ಯಕರ ಆಹಾರವನ್ನು ಆಯ್ಕೆ ಮಾಡುವ ಸಾಮರ್ಥ್ಯವನ್ನು ಬೆಳೆಸುವುದು ಅವಶ್ಯಕವಾಗಿದೆ ಎಂದು ಇನ್‌ಷ್ಟಿಟ್ಯೂಟ್ ಆಫ್ ಪಾಲಿಸಿ ರಿಸರ್ಚ್ ನಿರ್ದೇಶಕ ಅಮಿತ್ ಕರ್ಣಿಕ ಅವರು ತಿಳಿಸಿದ್ದಾರೆ.
ಉಪ್ಪು ಬಳಕೆ ನಿಯಂತ್ರಣ ಸಲಹೆ: ಉಪ್ಪಿಗಿಂತ ರುಚಿ ಬೇರೆ ಇಲ್ಲ. ಹಾಗಂತ ಅಧಿಕ ಉಪ್ಪು ಸೇವನೆ ಮಾಡುವುದು ಬುದ್ಧಿವಂತಿಕೆಯಲ್ಲ. ನಮ್ಮ ಜನ ಉಪ್ಪಿನ ಕಾಯಿ ಇಲ್ಲದೇ ಊಟವನ್ನು ಮುಟ್ಟುವುದಿಲ್ಲ. ಇವತ್ತಿನ ದಿನ ಮಾನದಲ್ಲಿ ಅತಿಯಾದ ಉಪ್ಪು ಸೇವನೆಯಿಂದ ಸಾಂಕ್ರಾಮಿಕೇತರ ನಾನಾ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ. ವಿಶ್ವ ಅರೋಗ್ಯ ಸಂಸ್ಥೆ ಮಾನದಂಡ ಪ್ರಕಾರ ಪ್ರತಿಯೊಬ್ಬ ವ್ಯಕ್ತಿ ದಿನಕ್ಕೆ ಐದು ಗ್ರಾಂಗಿಂತಲೂ ಹೆಚ್ಚು ಉಪ್ಪು ಸೇವನೆ ಮಾಡಬಾರದು. ಅಂದರೆ ಒಂದು ಟೀ ಸ್ಪೂನ್ ನಷ್ಟು ಉಪ್ಪು ದೇಹಕ್ಕೆ ಸಾಕು. ಆಹಾರ ತಯಾರಿಸುವಾಗ ಉಪ್ಪನ್ನು ಕಡ್ಡಾಯವಾಗಿ ಅಳತೆ ಮಾಡಿ ( ಒಬ್ಬರಿಗೆ ಐದು ಗ್ರಾಂ) ಬಳಸಬೇಕು. ಶುಂಠಿ, ನಿಂಬೆ, ಜೀರಿಗೆ, ಕಾಳು ಮೆಣಸು, ಇತ್ಯಾದಿ ಗಿಡಮೂಲಿಕೆ ಬಳಸುವ ಮೂಲಕ ಉಪ್ಪಿನ ಬಳಕೆ ಕಡಿಮೆ ಮಾಡಬೇಕು ಎಂದು ಡಾ. ವೈಷ್ಣವಿ ಸಿ.ಜಿ. ಸಲಹೆ ಮಾಡಿದ್ದಾರೆ. ಊಟವನ್ನು ಮಾಡುವಾಗ ಹೆಚ್ಚುವರಿ ಉಪ್ಪು ಹಾಕಿಕೊಂಡು ಬಳಸುವ ಸಂಪ್ರದಾಯವನ್ನು ಕೈ ಬಿಡಬೇಕು ಎಂದು ಇದೇ ವೇಳೆ ತಿಳಿಸಿದ್ದಾರೆ.
ಪ್ರಧಾನಿ ಮೋದಿಗೆ ಮಾರಿಷಸ್ ನ ಅತ್ಯುನ್ನತ ಗೌರವ ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಪ್ರದಾನ
ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ :ರೈಲ್ವೆಯಲ್ಲಿ 1,003 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ | Jobs Alert