ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಮತ್ತಷ್ಟು ಏರಿಕೆಯಾಗಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಅತ್ಯಂತ ಕಠಿಣ ಪದಗಳಲ್ಲಿ ಎಚ್ಚರಿಕೆ ನೀಡಿದ್ದಾರೆ. ಆಯಕಟ್ಟಿನ ‘ಹಾರ್ಮುಜ್ ಜಲಸಂಧಿ’ಯನ್ನು (Strait of Hormuz) ತೆರೆಯಲು ನೀಡಿರುವ ಗಡುವು ಮುಕ್ತಾಯಗೊಳ್ಳುತ್ತಿರುವ ಬೆನ್ನಲ್ಲೇ, “ಒಂದೇ ರಾತ್ರಿಯಲ್ಲಿ ಇಡೀ ಇರಾನ್ ದೇಶವನ್ನೇ ಅಳಿಸಿ ಹಾಕುವ ಶಕ್ತಿ ಅಮೆರಿಕಕ್ಕಿದೆ,” ಎಂದು ಅವರು ಗುಡುಗಿದ್ದಾರೆ.
ಶ್ವೇತಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್, “ನಾಳೆ ರಾತ್ರಿಯೇ ಇಡೀ ದೇಶವನ್ನು ನಾಮಾವಶೇಷ ಮಾಡಬಹುದು. ಇರಾನ್ ಒಪ್ಪಂದಕ್ಕೆ ಬರದಿದ್ದರೆ ಮತ್ತು ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸದಿದ್ದರೆ, ಅಲ್ಲಿನ ವಿದ್ಯುತ್ ಸ್ಥಾವರಗಳು ಮತ್ತು ಸೇತುವೆಗಳು ಧೂಳೀಪಟವಾಗಲಿವೆ,” ಎಂದು ನೇರ ಬೆದರಿಕೆ ಹಾಕಿದ್ದಾರೆ.
ಈ ಮೊದಲು ಸೋಮವಾರಕ್ಕೆ ನೀಡಲಾಗಿದ್ದ ಗಡುವನ್ನು ಟ್ರಂಪ್ ಮಂಗಳವಾರ ರಾತ್ರಿ 8 ಗಂಟೆಗೆ (ಅಮೆರಿಕ ಕಾಲಮಾನ) ವಿಸ್ತರಿಸಿದ್ದಾರೆ. ಅಲ್ಲಿಯೊಳಗೆ ಇರಾನ್ ನಿರ್ಧಾರ ಕೈಗೊಳ್ಳದಿದ್ದರೆ ಭಾರಿ ದಾಳಿ ನಡೆಸುವ ಮುನ್ಸೂಚನೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣ ‘ಟ್ರೂತ್ ಸೋಶಿಯಲ್’ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, “ಮಂಗಳವಾರ ಇರಾನ್ ಪಾಲಿಗೆ ‘ಪವರ್ ಪ್ಲಾಂಟ್ ಮತ್ತು ಬ್ರಿಡ್ಜ್ ಡೇ’ ಆಗಲಿದೆ. ಅಂತಹ ವಿನಾಶವನ್ನು ಜಗತ್ತು ಈ ಹಿಂದೆಂದೂ ಕಂಡಿರಲಿಕ್ಕಿಲ್ಲ,” ಎಂದು ಉಲ್ಲೇಖಿಸಿದ್ದಾರೆ.
ಬೆದರಿಕೆಯ ನಡುವೆಯೂ ಸಂಧಾನದ ಬಗ್ಗೆ ಸುಳಿವು ನೀಡಿರುವ ಟ್ರಂಪ್, “ಇರಾನ್ ಈಗ ಮಾತುಕತೆ ನಡೆಸುತ್ತಿದೆ, ಒಪ್ಪಂದವಾಗುವ ಉತ್ತಮ ಅವಕಾಶಗಳಿವೆ,” ಎಂದು ಹೇಳಿದ್ದಾರೆ.








