ಬೆಂಗಳೂರು: ಇಂದು ಹೈಕೋರ್ಟ್ ನಲ್ಲಿ ಭಾರೀ ಹೈಡ್ರಾಮಾವೇ ನಡೆದಿದೆ. ಸಾಗರದ ಸಹಾಯಕ ಇಂಜಿನಿಯರ್ ಶಾಂತಕುಮಾರ ಸ್ವಾಮಿ ಎಂಬುವರು ಸಾಗರ ಡಿವೈಎಸ್ಪಿ ವಿರುದ್ಧ ಬೆದರಿಕೆ ಆರೋಪ, ಶಾಸಕ ಬೇಳೂರು ಗೋಪಾಲಕೃಷ್ಣ ನನ್ನಿಂದ ಹಣ ಪೀಕಲು ಯತ್ನಿಸಿದ ಗಂಭೀರ ಆರೋಪ ಮಾಡಿದ್ದಾರೆ. ಹಾಗಾದ್ರೇ ಶಾಸಕರು, ಡಿವೈಎಸ್ಪಿ ಹಾಗೆ ಮಾಡಿದ್ದಾರಾ.? ಹೇಳೋದು ಏನು.? ಹೈಕೋರ್ಟ್ ನಲ್ಲಿ ಏನಾಯ್ತು ಎನ್ನುವ ಬಗ್ಗೆ ಮುಂದೆ ಓದಿ.
ಇಂದು ಹೈಕೋರ್ಟ್ ನಲ್ಲಿ ನಡೆದಿದ್ದೇನು?
ಸಾಗರ ತಾಲ್ಲೂಕಿನ ಆನಂದಪುರದಲ್ಲಿ ಸಹಾಯ ಇಂಜಿನಿಯರ್ ಆಗಿ, ಅಮಾನತುಗೊಂಡಿರುವಂತ ಶಾಂತಕುಮಾರ ಸ್ವಾಮಿ ಎಂ.ಜಿ ಎನ್ನುವವರು ಹೈಕೋರ್ಟ್ ನಲ್ಲಿ ಇಂದು ನನ್ನನ್ನು ಕಾಪಾಡಿ. ನನಗೆ ಶಿವಮೊಗ್ಗ ಜಿಲ್ಲೆಯ ಸಾಗರದ ಡಿವೈಎಸ್ಪಿ ಕಿರುಕುಳ ಕೊಡ್ತಾ ಇದ್ದಾರೆ. ನನಗೆ ಭರವಸೆ ನೀಡುವವರೆಗೂ ಕೋರ್ಟ್ ಬಿಟ್ಟು ಹೋಗುವುದಿಲ್ಲ ಎಂಬುದಾಗಿ ಕೈಮುಗಿದು ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಮುಂದೆ ಅಂಗಲಾಚಿದರು.
ಮಧ್ಯಾಹ್ನದ ಊಟಕ್ಕೆ ಹೊರಟಿದ್ದಂತ ಅವರು ಸಾವಧಾನವಾಗಿ ಇಂಜಿನಿಯರ್ ಶಾಂತಕುಮಾರಸ್ವಾಮಿ ಹೇಳಿದ್ದನ್ನು ಕೇಳಿದರು. ಹೈಕೋರ್ಟ್ ನ್ಯಾಯಮೂರ್ತಿಯ ಮುಂದೆ ಅವರು ನನಗೆ ವಿವಾಹ ನಿಶ್ಚಿಯವಾಗಿ ರದ್ದಾಗಿದೆ. ಆನಂತರ ಸುಳ್ಳು ಪ್ರಕರಣ ದಾಖಲಿಸಿ, ನನ್ನಿಂದ ಹಣ ಪೀಕಲು ಸ್ಥಳೀಯ ಕಾಂಗ್ರೆಸ್ ಶಾಸಕ ಮತ್ತು ಪೊಲೀಸರು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದನ್ನು ರೆಕಾರ್ಡ್ ಮಾಡಿ ನಾನು ಲೋಕಾಯುಕ್ತಕ್ಕೆ ದೂರು ನೀಡಿದ್ದೆ. ನಾನು ಲೋಕಾಯುಕ್ತಕ್ಕೆ ದೂರು ನೀಡಿದ ಬಳಿಕ, ನನ್ನನ್ನು ನೀನು ಲೋಕಾಯುಕ್ತಕ್ಕೆ ದೂರು ನೀಡಿದ್ದೀಯ. ನಿನ್ನ ಸಾಗರದಲ್ಲಿ ಇರೋದಕ್ಕೆ ಬಿಡುತ್ತಿಲ್ಲ. ಹೀಗಾಗಿ ಬೆಂಗಳೂರಿಗೆ ವರ್ಗಾವಣೆ ಕೋರಿದ್ದೆ. ಅದು ಸಾಧ್ಯವಾಗಿಲ್ಲ ಎಂದರು.
ಜುಲೈ.22ರಂದು ಸಾಗರದಲ್ಲಿ ನನ್ನ ವಿರುದ್ಧ ದಾಖಲಾಗಿರುವ ಪ್ರಕರಣಗಳ ರದ್ದತಿ ಕೋರಿ ಸಲ್ಲಿಸಿದ್ದಂತ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದಂತ ನೇತೃತ್ವದ ನಿಮ್ಮ ನ್ಯಾಯಪೀಠದಲ್ಲಿ ನಡೆಸಲಾಗಿತ್ತು. ಪಾರ್ಟಿ ಇನ್ ಪರ್ಸನಲ್ ಆಗಿ ಈ ಪ್ರಕರಣಗಳಲ್ಲಿ ವಿಚಾರಣೆ ಭಾಗಿಯಾಗಿದ್ದು, ವಕೀಲರನ್ನು ನೇಮಿಸಿಕೊಳ್ಳುವಂತೆಯೂ ತಿಳಿಸಲಾಗಿತ್ತು. ಹೊಸದಾಗಿ ಅರ್ಜಿ ಸಲ್ಲಿಸಲು ಸ್ವಾತಂತ್ರ್ಯ ಕಲ್ಪಿಸಿ ಅರ್ಜಿ ವಿಲೇವಾರಿ ಮಾಡಲಾಗಿತ್ತು. ಈ ವಿಷಯವನ್ನು ಯೂಟ್ಯೂಬ್ ನಲ್ಲಿ ಲೈವ್ ಸ್ಟ್ರೀಮಿಗ್ ಆಧರಿಸಿ, ತಕ್ಷಣ ಸುಳ್ಳು ಗಾಂಜಾ ಕೇಸ್ ಹಾಕಿ ನನ್ನನ್ನು ಬಂಧಿಸಿ, ಶಿವಮೊಗ್ಗ ಜೈಲಿಗೆ ಅಟ್ಟಿದರು ಎಂದು ತಿಳಿಸಿದರು.
ನನ್ನನ್ನು ಹೈಕೋರ್ಟ್ ನಲ್ಲಿ ಪೊಲೀಸರ ಬಗ್ಗೆಯೇ ದೂರುತ್ತೀಯ ಅಂತ ಸಾಗರ ಡಿವೈಎಸ್ಪಿ ದಂಡಿಸಿದ್ದಾರೆ. ಗಾಂಜಾ ಕೇಸ್ ಜೊತೆಗೆ ನನ್ನ ಮೇಲೆ ಬೇರೆ ಬೇರೆ ಸೆಕ್ಷನ್ ಅನ್ವಯಿಸಿದ್ದಾರೆ. ಇಷ್ಟೇ ಅಲ್ಲದೇ ರಿವಾಲ್ವಾರ್ ಇಟ್ಟು ಎನ್ ಕೌಂಟರ್ ಮಾಡುವುದಾಗಿಯೂ ಬೆದರಿಸಿದ್ದಾರೆ. ನನ್ನ ಹೆಸರಲ್ಲಿ ರೌಡಿ ಶೀಟರ್ ತೆರೆಯುವುದಾಗಿಯೂ ಬೆದರಿಕೆ ಹಾಗಿ, ಮೊಬೈಲ್, ಪರ್ಸ್ ಕಸಿದುಕೊಂಡಿದ್ದಾರೆ ಎಂಬುದಾಗಿ ಕಣ್ಣೀರಿಟ್ಟರು.
ಈ ಎಲ್ಲವನ್ನು ಸಾವಧಾನದಿಂದ ಆಲಿಸಿದಂತ ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು, ಇದೆಲ್ಲವೂ ರೆಕಾರ್ಡ್ ಮಾಡಲಾಗುತ್ತಿದೆ. ಸಾಗರ ಡಿವೈಎಸ್ಪಿ ಈ ರೀತಿ ನಡೆದುಕೊಂಡಿದ್ದರೇ, ಖಂಡಿತವಾಗಿಯೂ ಅವರ ವಿರುದ್ಧ ಕ್ರಮಕ್ಕೆ ನಿರ್ದೇಶಿಲಾಗುವುದು. ಜಗದೀಶ್ ಇದನ್ನು ನೋಡಿ ಎಂದಿದ್ದಲ್ಲದೇ, ಹೆದರಬೇಡಿ, ನಾವು ಅವರಿಗೆ ಹೇಳಿದ್ದೇವೆ. ನಾಳೆ ವಿಚಾರಣೆ ನಡೆಸಲಾಗುವುದು ಎಂದು ಹೇಳಿತ್ತು.
ದಿನದ ಅಂತ್ಯ ಮುಕ್ತಾಯ ವೇಳೆಯಲ್ಲೂ ಹೈಕೋರ್ಟ್ ಪೀಠದ ಮುಂದೆ ಶಾಂತಕುಮಾರಸ್ವಾಮಿ ಹಾಜರಾದಾಗ ನ್ಯಾಯಾಮೂರ್ತಿಗಳು ಏನಾಗಿದೆ ಎಂಬುದರ ವಾಸ್ತವಿಕ ವರದಿಯನ್ನು ನಾಳೆ ತರಿಸಿಕೊಳ್ಳುತ್ತೇನೆ. ಬೆಳಿಗ್ಗೆ ನೀವು ಹೇಳಿದ್ದು ಸುಳ್ಳಾಗಿದ್ದರೇ ನಿಮ್ಮ ವಿರುದ್ಧವೂ ಕ್ರಮಕ್ಕೆ ಆದೇಶಿಸಲಾಗುವುದು. ಎದುರಿಸಲು ಸಿದ್ದರಾಗಿ. ನಾಳೆ ನ್ಯಾಯಾಲಯದ ಮುಂದೆ ಹಾಜರಿರಬೇಕು ಎಂದು ವಿಚಾರಣೆ ನಾಳೆಗೆ ಮುಂದೂಡಿತ್ತು.
ಶಾಸಕ ಬೇಳೂರು ಗೋಪಾಲಕೃಷ್ಣ ಹಣಕ್ಕೆ ಬೇಡಿಕೆ ಆರೋಪದ ಬಗ್ಗೆ ಹೇಳೋದೇನು?
ನಿಮ್ಮ ಕನ್ನಡ ನ್ಯೂಸ್ ನೌಕ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರನ್ನು ಈ ವಿಷಯ ಕುರಿತಂತೆ ಸಂಪರ್ಕಿಸಿತು. ಅವರು ನನಗೆ ಮೊನ್ನೆ ಮೊನ್ನೆ ತಾನೇ ಅವರು ಪರಿಚಯ. ನಾನು ಯಾವ ಅಧಿಕಾರಿಗಳಿಗೂ ಬೆದರಿಕೆ ಹಾಕಿಲ್ಲ. ಯಾವ ಅಧಿಕಾರಿಯಿಂದಲೂ ಹಣಕ್ಕೆ ಬೇಡಿಕೆ ಇಟ್ಟಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದರು.
ತಾಲ್ಲೂಕಿನ ಜನತೆಯ ಕೆಲಸ ಕಾರ್ಯಗಳಿಗೆ ಅಡ್ಡಿ ಆಗಬಾರದು ಎಂಬುದಾಗಿ ಇಂಜಿನಿಯರ್ ಶಾಂತಕುಮಾರ ಸ್ವಾಮಿ ಪೋನ್ ಪಿಕ್ ಮಾಡುತ್ತಿರದ ಆರೋಪದ ಮೇಲೆ ಗದರಿಸಿದ್ದೇನೆ. ತಾಲ್ಲೂಕಿನಲ್ಲಿ ಮಳೆಯಿಂದ ಹಾನಿಯಾಗಿ ಜನರು ಸಂಕಷ್ಟದಲ್ಲಿದ್ದಾರೆ. ಅಧಿಕಾರಿಯಾಗಿ ಅವರ ಕೆಲಸ ಮಾಡುವುದು ಕರ್ತವ್ಯ. ಜನಪ್ರತಿನಿಧಿಯಾಗಿ ನಾನು ಪೋನ್ ಪಿಕ್ ಮಾಡಿ, ಜನರಿಗೆ ಆಗಿರುವಂತ ಸಮಸ್ಯೆ ಸರಿಪಡಿಸುವಂತೆ ಸೂಚಿಸಿದ್ದೇನೆ ಅಷ್ಟೇ ಎಂಬುದಾಗಿ ತಿಳಿಸಿದರು.
ಗನ್ ಪಾಯಿಂಟ್ ನಲ್ಲಿ ಡಿವೈಎಸ್ಪಿ ಗೋಪಾಲಕೃಷ್ಣ ನಾಯ್ಕ್ ಬೆದರಿಕೆ, ಸುಳ್ಳು ಕೇಸ್ ಬಗ್ಗೆ DYSP ಹೇಳಿದ್ದೇನು?
ಇನ್ನೂ ಸಾಗರ ತಾಲ್ಲೂಕು ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ್ ಅವರಿಗೆ ಈ ಸಂಬಂಧ ಕರೆ ಮಾಡಿ ಪ್ರತಿಕ್ರಿಯೆಯನ್ನು ಕನ್ನಡ ನ್ಯೂಸ್ ನೌ ಕೇಳಿತು. ಇದಕ್ಕೆ ಉತ್ತರಿಸಿದಂತ ಅವರು, ಆ ರೀತಿ ಮಾಡುವ ಪ್ರಶ್ನೆಯೇ ಇಲ್ಲ. ಪೊಲೀಸ್ ಇಲಾಖೆಗೆ ನಮ್ಮದೇ ಆದಂತ ಜವಾಬ್ದಾರಿಯಿದೆ. ಗನ್ ಎಲ್ಲಾ ಸ್ವಯಂ ರಕ್ಷಣೆಗಾಗಿ ನೀಡುತ್ತಾರೆ. ಅದನ್ನೆಲ್ಲ ನಾವು ಓಪನ್ ಮಾಡಲ್ಲ. ಕಮ್ಯೂನಲ್ ಗಲಾಟೆ, ಲಾ ಆಂಡ್ ಆರ್ಡರ್ ಸಮಸ್ಯೆ ಆದಾಗ ಮಾತ್ರವೇ ಗನ್ ಎಲ್ಲ ತೆಗೆಯುತ್ತೇವೆ. ಶಾಂತಕುಮಾರಸ್ವಾಮಿ ಮೇಲೆ ನಾಲ್ಕೈದು ಕೇಸ್ ಆಗಿದೆ. ಅವುಗಳಿಗೆ ಸಂಬಂಧ ಪಟ್ಟಂತೆ ನಾವು ತನಿಖೆ ಮಾಡಿದ್ದೇವೆ. ತನಿಖೆಯಲ್ಲಿ ಅವನ ವಿರುದ್ಧದ ಹೇಳಿಕೆಯನ್ನು ಪಡೆಯಲಾಗಿದೆ ಎಂದರು.
ಗಾಂಜಾ ಕೇಸ್ ಸಂಬಂಧ ತನಿಖಾಧಿಕಾರಿಯಗಳು ಮಾಹಿತಿ ನೀಡಿದಂತವರನ್ನು ಕರೆದು ವಿಚಾರಣೆ ನಡೆಸಿದಾಗ ನೀಡಿದಂತ ಮಾಹಿತಿಯ ಆಧಾರದ ಮೇಲೆ ಅವರ ವಿರುದ್ಧ ದೂರು ದಾಖಲಾಗಿತ್ತು. ಶಾಂತಕುಮಾರ ಸ್ವಾಮಿ ವಿರುದ್ಧ ಸಾಗರ ನಗರ, ಗ್ರಾಮಾಂತರ, ಸೊರಬ, ರಿಪ್ಪನ್ ಪೇಟೆಯಲ್ಲಿ ದಾಖಲಾಗಿದ್ದಂತ ಪ್ರಕರಣ ಸಂಬಂಧ ಸರ್ಕಾರಿ ಅಧಿಕಾರಿಯ ಬಗ್ಗೆ ಸಂಬಂಧ ಪಟ್ಟ ಅವರ ಇಲಾಖೆಗೆ ವರದಿಯನ್ನು ನೀಡಲಾಗಿದೆ ಎಂದು ತಿಳಿಸಿದರು.
ಸುಳ್ಳು ಕೇಸ್ ಇಲ್ಲವೇ ಇಲ್ಲ. ಕಂಪ್ಲೇಂಟ್ ಕೊಟ್ಟಿದ್ದಾರೆ. ತಗೊಂಡಿದ್ದೇವೆ. ಅದಕ್ಕೆ ಸಂಬಂಧಿಸಿದಂತ ಸಿಸಿಟಿವಿ ದೃಶ್ಯಾವಳಿಯಿದೆ. ಅದು ಸಾಗರ ಗ್ರಾಮಾಂತರದಲ್ಲಿ ದಾಖಲಾಗಿರುವುದು. ಅವರು ತೆಗೆದುಕೊಂಡಿದ್ದಾರೆ. ನಾನು ತನಿಖಾಧಿಕಾರಿಯೂ ಅಲ್ಲ. ನನಗೂ ಅವರಿಗೂ ಸಂಬಂಧವಿಲ್ಲ. ನಾನು ಬೆದರಿಸಿಲ್ಲ. ಇವರು ಸರ್ಕಾರಿ ಅಧಿಕಾರಿ ಇದ್ದಾರೆ. ಮದುವೆ ವಿಚಾರದಲ್ಲಿ ಬಂದಿದ್ದಂತ ದೂರು ಸಂಬಂಧ ನೋಡಿ ನೀವು ಸರ್ಕಾರಿ ನೌಕರರು ಇದ್ದೀರಿ. ಯಾಕೆ ಹೀಗೆಲ್ಲ ಮಾಡುತ್ತಿದ್ದೀರಿ ಅಂತ ತಿಳಿ ಹೇಳಿದ್ದೇನೆ. ಅದರ ಹೊರತಾಗಿ ಬೆದರಿಸೋ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟ ಪಡಿಸಿದರು.
ನಾಳೆ ಹೈಕೋರ್ಟ್ ಗೆ ಯಾವ ಮಾಹಿತಿಯನ್ನು ನೀಡಲಿದ್ದೀರಿ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದಂತ ಅವರು, ಕೋರ್ಟ್ ನಿಂದ ಸೂಚನೆ, ಈ ಘಟನೆಯ ಸಂಬಂಧ ನನಗೆ ಮಾಹಿತಿ ಬಂದಿಲ್ಲ. ಮಾಧ್ಯಮಗಳಲ್ಲಿ ಪ್ರಸಾರವಾದಂತ ಸುದ್ದಿಯಿಂದ ನನ್ನ ಗಮನಕ್ಕೆ ಬಂದಿದೆ. ಶಾಂತಕುಮಾರ ಸ್ವಾಮಿ ಪ್ರಕರಣ ಸಂಬಂಧ ವಾಸ್ತವಾಂಶ ಏನಿದ್ಯೋ ಅದನ್ನು ಹೈಕೋರ್ಟ್ ಗೆ ಸಲ್ಲಿಸಲಾಗುತ್ತದೆ ಎಂದು ಹೇಳಿದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
Rain in Karnataka: ಇಂದಿನಿಂದ ಆ.10ರವರೆಗೆ ಬೆಂಗಳೂರಲ್ಲಿ ಭಾರೀ ಮಳೆ: ರಾಜ್ಯದ ಈ ಜಿಲ್ಲೆಗಳಲ್ಲೂ ರೆಡ್ ಅಲರ್ಟ್