ನವದೆಹಲಿ: ಭಾರತ ಮತ್ತೊಮ್ಮೆ ‘ಲಾಕ್ಡೌನ್’ ಎಂಬ ಪದದ ಸುಳಿಗೆ ಸಿಲುಕುವ ಮುನ್ಸೂಚನೆ ಸಿಗುತ್ತಿದೆ. ಆದರೆ ಈ ಬಾರಿ ಕಾರಣ ಯಾವುದೇ ವೈರಸ್ ಅಲ್ಲ, ಬದಲಾಗಿ ‘ಎನರ್ಜಿ’ ಅಥವಾ ಇಂಧನದ ಬಿಕ್ಕಟ್ಟು! ಹೌದು, ಸೋಶಿಯಲ್ ಮೀಡಿಯಾದಲ್ಲಿ ಈಗ ‘ಎನರ್ಜಿ ಲಾಕ್ಡೌನ್’ (Energy Lockdown) ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ.
ಪಶ್ಚಿಮ ಏಷ್ಯಾದಲ್ಲಿ (Middle East) ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಸಮುದ್ರ ವ್ಯಾಪಾರ ಮಾರ್ಗಗಳಲ್ಲಿ ಉಂಟಾಗಿರುವ ಅಡೆತಡೆಗಳು ದೇಶದ ಇಂಧನ ಭದ್ರತೆಯ ಮೇಲೆ ಆತಂಕದ ಕರಿನೆರಳು ಚಾಚುವಂತೆ ಮಾಡಿದೆ.
ಚರ್ಚೆ ಶುರುವಾಗಿದ್ದು ಎಲ್ಲಿ?
ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಜಾಗತಿಕ ಪೂರೈಕೆ ಸರಪಳಿಯ ಏರುಪೇರಿನ ಬಗ್ಗೆ ಪ್ರಸ್ತಾಪಿಸಿದ ನಂತರ ಈ ಚರ್ಚೆ ಕಾಳ್ಗಿಚ್ಚಿನಂತೆ ಹಬ್ಬಿದೆ. ಮಾರ್ಚ್ 25 ರಂದು ನಡೆದ ಸರ್ವಪಕ್ಷ ಸಭೆಯಲ್ಲಿ ಪಶ್ಚಿಮ ಏಷ್ಯಾ ಸಂಘರ್ಷದಿಂದ ಭಾರತದ ಆರ್ಥಿಕತೆ ಮತ್ತು ಇಂಧನದ ಮೇಲಾಗುವ ಪರಿಣಾಮಗಳ ಬಗ್ಗೆ ಸುದೀರ್ಘ ಚರ್ಚೆ ನಡೆದಿದೆ ಎನ್ನಲಾಗಿದೆ. ಸರ್ಕಾರ ಇಂಧನ ಬಳಕೆಯನ್ನು ನಿಯಂತ್ರಿಸಲು ಕಠಿಣ ಕ್ರಮ ಕೈಗೊಳ್ಳಬಹುದು ಎಂಬ ವದಂತಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಏನಿದು ‘ಎನರ್ಜಿ ಲಾಕ್ಡೌನ್’?
ಸರಳವಾಗಿ ಹೇಳುವುದಾದರೆ, ಇಂಧನ ಮತ್ತು ವಿದ್ಯುತ್ ಕೊರತೆಯಾದಾಗ ಸರ್ಕಾರವು ಅನಗತ್ಯ ಓಡಾಟ ಮತ್ತು ವ್ಯಾಪಾರ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರುವುದೇ ಎನರ್ಜಿ ಲಾಕ್ಡೌನ್. ಅಗತ್ಯ ಸೇವೆಗಳಿಗೆ ಇಂಧನ ಉಳಿಸಲು ಸಾಮಾನ್ಯ ಜನರ ಬಳಕೆಯ ಮೇಲೆ ‘ರೇಷನಿಂಗ್’ (ಮಿತಿ) ಹೇರಲಾಗುತ್ತದೆ.
ಜಾರಿಯಾದರೆ ಏನೆಲ್ಲಾ ಬದಲಾಗಬಹುದು?
ಸಾರಿಗೆ ವ್ಯವಸ್ಥೆ ಮೇಲೆ ಬ್ರೇಕ್: ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಮೇಲೆ ಮಿತಿ ಹೇರಬಹುದು. ದೊಡ್ಡ ನಗರಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ‘ಆಡ್-ಈವನ್’ (Odd-Even) ಅಥವಾ ‘ಕಾರ್-ಫ್ರೀ ಸಂಡೇ’ ನಂತಹ ನಿಯಮಗಳು ಜಾರಿಗೆ ಬರಬಹುದು.
ವರ್ಕ್ ಫ್ರಮ್ ಹೋಮ್ ವಾಪಸ್: ಐಟಿ ಕಂಪನಿಗಳು ಮತ್ತು ಖಾಸಗಿ ಕಚೇರಿಗಳಿಗೆ ಮತ್ತೆ ‘ಮನೆಯಿಂದಲೇ ಕೆಲಸ’ ಮಾಡಲು ಸೂಚನೆ ನೀಡಬಹುದು. ಇದರಿಂದ ಲಕ್ಷಾಂತರ ಲೀಟರ್ ಇಂಧನ ಉಳಿತಾಯವಾಗಲಿದೆ ಎಂಬುದು ಸರ್ಕಾರದ ಲೆಕ್ಕಾಚಾರ.
ಆನ್ಲೈನ್ ಶಿಕ್ಷಣ: ಶಾಲಾ-ಕಾಲೇಜು ಬಸ್ಗಳ ಸಂಚಾರ ತಡೆಯಲು ಮತ್ತೆ ಆನ್ಲೈನ್ ಕ್ಲಾಸ್ಗಳು ಶುರುವಾಗುವ ಸಾಧ್ಯತೆ ಇದೆ.
ಐಪಿಎಲ್ ಮತ್ತು ಮನರಂಜನೆ: ಐಪಿಎಲ್ನಂತಹ ದೊಡ್ಡ ಕ್ರೀಡಾಕೂಟಗಳಿಗೆ ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಗೆ ನಿರ್ಬಂಧ ಹೇರಬಹುದು. ವಿದ್ಯುತ್ ಉಳಿಸಲು ಸಾರ್ವಜನಿಕ ಸಮಾರಂಭಗಳು ಮತ್ತು ರಾಜಕೀಯ ರ್ಯಾ ಲಿಗಳ ಮೇಲೆ ಕಡಿತ ಬೀಳಬಹುದು.
ವಿಮಾನ ಯಾನ: ವಿಮಾನ ಇಂಧನ (ATF) ಬೆಲೆ ಏರಿಕೆಯಿಂದಾಗಿ ವಿಮಾನಗಳ ಹಾರಾಟದ ಸಂಖ್ಯೆ ಕಡಿಮೆಯಾಗಬಹುದು.
ಹೋಟೆಲ್ ಮತ್ತು ಕೈಗಾರಿಕೆಗಳ ಮೇಲೆ ಹೊಡೆತ
ಈಗಾಗಲೇ ದೇಶದ ಹಲವೆಡೆ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ಗಳ ಕೊರತೆ ಎದುರಾಗಿದೆ. ಹೋಟೆಲ್ಗಳು ಮತ್ತು ಬೇಕರಿಗಳು ಅಡುಗೆ ಅನಿಲವಿಲ್ಲದೆ ಪರದಾಡುತ್ತಿವೆ. ಮನೆಗಳಿಗೆ ಆದ್ಯತೆ ನೀಡಲು ಕೈಗಾರಿಕೆಗಳಿಗೆ ನೀಡುವ ಅನಿಲ ಪೂರೈಕೆಯಲ್ಲಿ ಸರ್ಕಾರ ಕಡಿತ ಮಾಡಬಹುದು.
ಯಾವುದು ಎಂದಿನಂತೆ ಇರಲಿದೆ?
ಎನರ್ಜಿ ಲಾಕ್ಡೌನ್ ಅಂದರೆ ಎಲ್ಲವೂ ಬಂದ್ ಎಂದರ್ಥವಲ್ಲ. ಆಸ್ಪತ್ರೆಗಳು, ಅಂಬ್ಯುಲೆನ್ಸ್, ಅಗ್ನಿಶಾಮಕ ದಳ ಮತ್ತು ಪೊಲೀಸ್ ನಂತಹ ತುರ್ತು ಸೇವೆಗಳಿಗೆ ಇಂಧನ ಪೂರೈಕೆ ಎಂದಿನಂತೆ ಇರಲಿದೆ. ಮೆಟ್ರೋ ಮತ್ತು ರೈಲು ಸಂಚಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
ಗಮನಿಸಿ: ಸರ್ಕಾರವು ಪ್ರಸ್ತುತ ದೇಶದಲ್ಲಿ ಸಾಕಷ್ಟು ಇಂಧನ ದಾಸ್ತಾನು ಇದೆ ಎಂದು ಭರವಸೆ ನೀಡಿದೆ. ಸಾರ್ವಜನಿಕರು ಆತಂಕಗೊಂಡು ಅನಗತ್ಯವಾಗಿ ಗ್ಯಾಸ್ ಸಿಲಿಂಡರ್ ಅಥವಾ ಇಂಧನವನ್ನು ಸಂಗ್ರಹಿಸಿಡಬಾರದು ಎಂದು ಮನವಿ ಮಾಡಿದೆ.








