ಶಿವಮೊಗ್ಗ: ಲದ್ದಿ ಹಾಕಿದ್ದಿದೆ. ಓಡಾಡಿದ ಹೆಜ್ಜೆ ಗುರುತುಗಳಿವೆ. ಜಾಡು ಹಿಡಿದು ಹಿಂದೆ ಬಿದ್ದ ಅರಣ್ಯ ಇಲಾಖೆಯವರ ಕಣ್ಣಿಗೆ ಮಾತ್ರ ಆನೆಗಳೇ ಕಾಣಿಸುತ್ತಲಿಲ್ಲ. ಇದು ಸೊರಬ ತಾಲ್ಲೂಕಿನ ಉಳವಿ ಹೋಬಳಿ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿರುವಂತ ಎರಡು ಆನೆಗಳ ಕಾರ್ಯಾಚರಣೆಯ ಹುಡುಕಾಟವಾಗಿದೆ. ಹೀಗಾಗಿ ನಾಳೆ ಥರ್ಮಲ್ ಡ್ರೋನ್ ಸ್ಕ್ಯಾನರ್ ಬಳಸಿ ಪತ್ತೆ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆಯಿಂದ ನಡೆಸಲಾಗುತ್ತಿದೆ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಆನೆಗಳು ಕಾಣಿಸಿಕೊಂಡಿವೆ. ಎರಡು ಆನೆಗಳು ಸಾಗರ ವಲಯದ ತ್ಯಾಗರ್ತಿ ಮೂಲಕ ಮುಳ್ಳುಕೇರಿಯಿಂದ ಉಳವಿ ಹೋಬಳಿ ವ್ಯಾಪ್ತಿಗೆ ಬಂದಿರೋದಾಗಿ ಹೇಳಲಾಗುತ್ತಿದೆ. ಕಾಡಿನಂಚಿನಲ್ಲಿ ಇರುವಂತ ಭತ್ತ, ಬಾಳೆಯನ್ನು ನಾಶ ಪಡಿಸಿರುವಂತ ಜೋಡಿ ಆನೆಗಳು ಮಾತ್ರ, ಈವರೆಗೆ ಹೆಜ್ಜೆ ಗುರುತಿನ ಮೂಲಕ ಆನೆಗಳ ಜಾಡು ಸಿಕ್ಕಿದೆಯೇ ವಿನಃ ಅರಣ್ಯ ಇಲಾಖೆಯವರು ಹುಡುಕಿದರೂ ಕಣ್ಣಿಗೆ ಬಿದ್ದಿಲ್ಲ.
ಕಳೆದ ಐದು ದಿನಗಳ ಹಿಂದೆ ಕಣ್ಣೂರು, ಕಾನಹಳ್ಳಿ, ಗಡೆಗದ್ದೆ, ಕೋಪುಲುಗದ್ದೆ, ಉಳವಿ, ಕರ್ಜಿಕೊಪ್ಪ, ಹುಣವಳ್ಳಿ, ಕೈಸೋಡಿ, ದೂಗೂರು ವ್ಯಾಪ್ತಿಯಲ್ಲಿ ಎರಡು ಆನೆಗಳು ದಾಂಧಲೆಯನ್ನೇ ನಡೆಸಿವೆ. ಕೆಲವೆಡೆ ರೈತರ ಭತ್ತಕ್ಕೆ ನುಗ್ಗಿ ನಾಶ ಮಾಡಿದ್ದರೇ, ಮತ್ತೆ ಕೆಲವೆಡೆ ಬಾಳೆ ತೋಟವನ್ನು ತಿಂದುಂಡು ಹೋಗಿದ್ದಾವೆ. ಇದಲ್ಲದೇ ಅಲ್ಲಲ್ಲಿ ಅಡಿಕೆ ಗಿಡಗಳನ್ನು ಮುರಿದು ನಾಶ ಪಡಿಸಿದ್ದಾವೆ ಎನ್ನಲಾಗುತ್ತಿದೆ.
5 ದಿನಗಳಿಂದ ಹುಡುಕಿದರೂ ಕಣ್ಣಿಗೆ ಕಾಣದ ಆನೆಗಳು
ಲದ್ದಿ, ಹೆಜ್ಜೆ ಗುರುತಿನ ಆಧಾರದ ಮೇಲೆ ಎರಡು ಆನೆಗಳು ಉಳವಿ ಹೋಬಳಿ ವ್ಯಾಪ್ತಿಗೆ ಬಂದಿರೋ ಕುರುಹುಗಳು ಅರಣ್ಯ ಇಲಾಖೆಯವರಿಗೆ ಸಿಕ್ಕಿವೆ. ಈ ಹಿನ್ನಲೆಯಲ್ಲಿ ಮೂರು ನಾಲ್ಕು ತಂಡಗಳನ್ನು ರಚಿಸಿರುವಂತ ಸೊರಬ ವಲಯ ಅರಣ್ಯಾಧಿಕಾರಿ ಶ್ರೀಪಾದ್ ನಾಯ್ಕ್ ಅವರು, ಹಗಲು ರಾತ್ರಿ ಎನ್ನದೇ ಆನೆಗಳನ್ನು ಪತ್ತೆ ಹಚ್ಚಿ ಮರಳಿ ಬಂದ ಕಡೆಗೆ ಓಡಿಸುವಂತ ಕಾರ್ಯಾಚರಣೆಗೆ ಇಳಿಯಲಾಗಿದೆ.

ಕಳೆದ ಐದು ದಿನಗಳಿಂದ ದಿನಕ್ಕೊಂದು ಜಾಗವನ್ನು ಬದಲಿಸುತ್ತಿರುವಂತ ಜೋಡಿ ಆನೆಗಳು ಮಾತ್ರ, ಅರಣ್ಯ ಇಲಾಖೆಯವರ ಕಣ್ಣಿಗೆ ಈವರೆಗೆ ಬಿದ್ದಿಲ್ಲ. ಕೇವಲ ಜಾಡು ಪತ್ತೆ ಹಚ್ಚಿಕೊಂಡು ಹೊರಟವರಿಗೆ ಲದ್ದಿ, ಹೆಜ್ಜೆ ಗುರುತು ಮಾತ್ರವೇ ಕಣ್ಣಿಗೆ ಬಿದ್ದಿದೆ. ಇನ್ನೂ ಡ್ರೋನ್ ಮೂಲಕ ಪತ್ತೆ ಹಚ್ಚೋದಕ್ಕೆ ಪ್ರಯತ್ನಿಸಿದರೂ ದಟ್ಟ ಕಾಡಿನಿಂದಾಗಿ ಅದಕ್ಕೂ ಅಡ್ಡಿಯಾಗಿದೆ.
ಸಿಸಿ ಟಿವಿ ಕಣ್ಗಾವಲು ಇರಿಸಿದ ಅರಣ್ಯ ಇಲಾಖೆ
ಎರಡು ಆನೆಗಳು ಎಷ್ಟೇ ಹುಡುಕಿದರು ಕಣ್ಣಿಗೆ ಕಾಣುತ್ತಿಲ್ಲ. ಕನಿಷ್ಠ ಪಕ್ಷ ಸಿಸಿಟಿವಿ ಕಣ್ಗಾವಲಿನಲ್ಲಿ ಆದರೂ ಕಾಣಬಹುದೇ ಎಂಬುದಾಗಿ ಮೂರು ನಾಲ್ಕು ಕಡೆಯಲ್ಲಿ ಕಾಡಂಚಿನಲ್ಲಿ ಅರಣ್ಯ ಇಲಾಖೆಯಿಂದ ಕ್ಯಾಮರಾ ಕಣ್ಗಾವಲನ್ನು ಇರಿಸಲಾಗಿದೆ. ಹೀಗೆ ಮಾಡಿದರೂ ಸಿಸಿ ಕ್ಯಾಮರಾದಲ್ಲೂ ಆನೆಗಳು ಓಡಾಟದ ಯಾವುದೇ ದೃಶ್ಯಾವಳಿ ದಾಖಲಾಗಿಲ್ಲ. ಹೀಗಾಗಿ ಆನೆ ಪತ್ತೆ ಕಾರ್ಯಾಚರಣೆಯನ್ನು ಮುಂದುವರೆಸಲಾಗಿದೆ.
ನಾಳೆ ಆಧುನಿಕ ತಂತ್ರಜ್ಞಾನ ಥರ್ಮಲ್ ಡ್ರೋನ್ ಬಳಸಿ ಆನೆ ಪತ್ತೆ ಕಾರ್ಯಾಚರಣೆ
ಸೊರಬ ತಾಲ್ಲೂಕಿನ ಉಳವಿ ಹೋಬಳಿ ವ್ಯಾಪ್ತಿಯಲ್ಲಿ ಆನೆಗಳು ಕಾಣಿಸಿಕೊಂಡಿದ್ದರೂ, ಎಷ್ಟೇ ಪತ್ತೆ ಕಾರ್ಯಾಚರಣೆ ಮಾಡಿದರೂ ಕಣ್ಣಿಗೆ ಕಾರಣದೇ ಇರುವ ಕಾರಣ, ನಾಳೆ ಅರಣ್ಯ ಇಲಾಖೆಯಿಂದ ವಿಶೇಷ ಕಾರ್ಯಾಚರಣೆಗೆ ಇಳಿಯಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರದಿಂದ ಬಂದಿರುವಂತ ಆನೆ ಪತ್ತೆ ವಿಶೇಷ ಕಾರ್ಯಪಡೆ ( Elephant Task Forse- ETF)ಯಿಂದ ಆನೆ ಪತ್ತೆ ಕಾರ್ಯಾಚರಣೆಗೆ ಇಳಿಯಲಾಗುತ್ತಿದೆ.
ಹಾಸನದ ಬೇಲೂರಿನಿಂದ ಇದಕ್ಕಾಗಿ ಆಧುನಿಕ ತಂತ್ರಜ್ಞಾನ ಒಳಗೊಂಡಿರುವಂತ ಥರ್ಮಲ್ ಸ್ಕ್ಯಾನ್ ಹೊಂದಿರುವಂತ ಡ್ರೋನ್ ಮೂಲಕ ಆನೆ ಪತ್ತೆಗೆ ತೊಡಗಲಾಗುತ್ತಿದೆ. ಆನೆಗಳಿರುವಂತ ಜಾಡುಗಳನ್ನು ಗುರುತಿಸಿರುವಂತ ಅರಣ್ಯ ಇಲಾಖೆಯವರು, ಥರ್ಮಲ್ ಸ್ಕ್ಯಾನ್ ಡ್ರೋನ್ ಬಳಸಿ ದಟ್ಟ ಕಾನನದ ಒಳಗೆ ಅಡಗಿರುವಂತ ಆನೆಯ ಪತ್ತೆಯನ್ನು ಮಾಡೋದಕ್ಕೆ ತೊಡಗಲಿದ್ದಾರೆ.
ಪಕ್ಷಿ, ಪ್ರಾಣಿಗಳ ದೇಹದ ಉಷ್ಣಾಂಶವನ್ನು ಥರ್ಮಲ್ ಸ್ಕ್ಯಾನ್ ಡ್ರೋನ್ ಪತ್ತೆ
ಈ ಬಗ್ಗೆ ಆನೆ ಕಾರ್ಯಪಡೆಯ ಡಿ ಆರ್ ಎಫ್ ಸುನೀಲ್ ಅಂಡ್ ಟೀಂ ಮಾಹಿತಿ ನೀಡಿದ್ದು, ನಾಳೆ ಬೇಲೂರಿನಿಂದ ಥರ್ಮಲ್ ಸ್ಕ್ಯಾನ್ ಡ್ರೋನ್ ಮೂಲಕ ಆನೆ ಪತ್ತೆಗೆ ಇಳಿಯಲಾಗುತ್ತದೆ. ಈ ಡ್ರೋನ್ ಪಕ್ಷಿ, ಪ್ರಾಣಿಯ ದೇಹದ ಉಷ್ಣಾಂಶವನ್ನು ಆಧರಿಸಿದಂತ ದೃಶ್ಯಾವಳಿಯನ್ನು ದಾಖಲಿಸಲಿದೆ. ಆ ದೃಶ್ಯಾವಳಿಯಲ್ಲಿನ ಗಾತ್ರವನ್ನು ಆಧರಿಸಿ ಕಾಡಿನಲ್ಲಿ ಆನೆ ನಿಖರವಾಗಿ ಇರುವಂತ ಸ್ಥಳ ಪತ್ತೆ ಹಚ್ಚಲಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ.

ಮರಳಿ ಶೆಟ್ಟಿಹಳ್ಳಿ ಕಡೆಗೆ ಓಡಿಸಲು ಪ್ರಯತ್ನ
ಇನ್ನೂ ಸಾಗರ-ಸೊರಬ ಡಿಎಫ್ಓ ಮೋಹನ್ ಕುಮಾರ್ ಅವರು ಕನ್ನಡ ನ್ಯೂಸ್ ನೌ ಜೊತೆಗೆ ಮಾತನಾಡಿ, ನಾಳೆ ಥರ್ಮಲ್ ಸ್ಕ್ಯಾನ್ ಡ್ರೋನ್ ಮೂಲಕ ಆನೆ ಪತ್ತೆಯ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆಯಿಂದ ಮಾಡಲಾಗುತ್ತದೆ. ಆನೆಗಳು ಇರುವಂತ ಸ್ಥಳ ಗುರುತಿಸಿ, ಆ ಬಳಿಕ ಜನ ವಸತಿ ಪ್ರದೇಶದಿಂದ ದೂರ ಓಡಿಸುವಂತ ಕೆಲಸವನ್ನು ಮಾಡಲಾಗುತ್ತದೆ. ಆನೆಗಳು ಶೆಟ್ಟಿಹಳ್ಳಿ ಕಡೆಯಿಂದ ಬಂದಿರುವ ಬಗ್ಗೆ ಮಾಹಿತಿ ಇದೆ. ಆ ಭಾಗಕ್ಕೆ ನಾಳೆ ಆನೆಗಳನ್ನು ಪತ್ತೆ ಹಚ್ಚಿ ಓಡಿಸುವಂತ ಕೆಲಸವನ್ನು ಮಾಡಲಾಗುತ್ತದೆ ಎಂದರು.
ಆನೆ ಪತ್ತೆ ಕಾರ್ಯಾಚರಣೆಗೆ ಡಿಆರ್ ಎಫ್, ಗಸ್ತು ಅರಣ್ಯ ಪಾಲಕರು ಸಾಥ್
ಕಳೆದ ಐದು ದಿನಗಳಿಂದ ಉಳವಿ ಹೋಬಳಿ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿರುವಂತ ಜೋಡಿ ಆನೆಗಳನ್ನು ಪತ್ತೆ, ಮಾನವ ಹಾನಿಯನ್ನು ತಡೆಗಟ್ಟೋದಕ್ಕೆ ಹಗಲಿರುಳು ಸಾಗರ, ಸೊರಬ ವ್ಯಾಪ್ತಿಯ ಡಿ ಆರ್ ಎಫ್ ಓ, ಗಸ್ತು ಅರಣ್ಯ ಪಾಲಕರು ಶ್ರಮ ವಹಿಸುತ್ತಿದ್ದಾರೆ. ರಾತ್ರಿ ಕಾಡಂಚಿನಿಂದ ಊರಿನಡೆಗೆ ಬರದಂತೆ ಕಾಯ್ದರೇ, ಬೆಳಗ್ಗೆ ಆನೆ ಓಡಾಡಿದಂತ ಜಾಡುಗಳನ್ನು ಪತ್ತೆ ಮಾಡಿ, ಶೆಟ್ಟಿಹಳ್ಳಿ ಕಡೆಗೆ ಓಡಿಸೋ ಕೆಲಸವನ್ನು ಮಾಡುತ್ತಿದ್ದಾರೆ.
ಇಂದು ಆನೆ ಕಾರ್ಯಪಡೆ, ಮಾವುತರು ಪತ್ತೆ ಕಾರ್ಯಾಚರಣೆ
ಕಳೆದ ನಾಲ್ಕು ದಿನ ಹುಡುಕಿದರೂ ಆನೆಗಳು ಕಣ್ಣಿಗೆ ಕಾರಣದ ಹಿನ್ನಲೆಯಲ್ಲಿ, ಐದನೇ ದಿನವಾದಂತ ಇಂದು ಚಿಕ್ಕಮಗಳೂರಿನ ಎನ್ ಆರ್ ಪುರದಿಂದ ಆನೆ ಕಾರ್ಯಪಡೆ ಟೀಂ, ಸಕ್ರೆಬೈಲಿನ ಮಾವುತರು ಪತ್ತೆಗೆ ಇಳಿದಿದ್ದಾರೆ. ಇ ಟಿ ಎಫ್ ನ ಆರು ಅರಣ್ಯಾಧಿಕಾರಿಗಳ ಟೀಂ ಹಾಗೂ ಸಕ್ರೆಬೈಲಿನ ನಾಲ್ವರು ಮಾವುತರನ್ನು ಒಳಗೊಂಡ ತಂಡವು ಇಂದು ಇಡೀ ದಿನ ಆನೆ ಪತ್ತೆ ಕಾರ್ಯಾಚರಣೆ ನಡೆಸಿತು. ಆದರೇ ಇಂದು ಕೂಡ ಅರಣ್ಯ ಇಲಾಖೆಯವರ ಕಣ್ಣಿಗೆ ಆನೆಗಳು ಇರುವಂತ ಸ್ಥಳ ಮಾತ್ರ ಪತ್ತೆಯಾಗಲೇ ಇಲ್ಲ.
ಸ್ಥಳದಲ್ಲೇ ಮೊಕ್ಕಾಂ ಹೂಡಿದ ಸೊರಬ ಎಸಿಎಫ್, ಆರ್ ಎಫ್ ಓ
ಉಳವಿ ಹೋಬಳಿಯ ಕಾಡಿನಲ್ಲಿ ಕಾಣಿಸಿಕೊಂಡಿರುವಂತ ಆನೆಗಳನ್ನು ಮರಳಿ ಬಂದ ಸ್ಥಳಕ್ಕೆ ಓಡಿಸೋದಕ್ಕೆ ಸೊರಬ ತಾಲ್ಲೂಕು ಎಸಿಎಫ್ ಸುರೇಶ್ ಕುಳ್ಳಳ್ಳಿ, ಆರ್ ಎಫ್ ಓ ಶ್ರೀಪಾದ್ ನಾಯ್ಕ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಡಿಎಫ್ಓ ಮೋಹನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ರೈತರ ಬೆಳೆ ನಾಶವನ್ನು ತಡೆಯೋದಕ್ಕೆ, ಶೆಟ್ಟಿಹಳ್ಳಿ ಕಡೆಗೆ ಆನೆಗಳನ್ನು ಓಡಿಸೋದಕ್ಕೆ ತಮ್ಮ ಟೀಂ ಜೊತೆಗೆ ಕಾರ್ಯಾಚರಣೆಗೆ ಇಳಿದಿದ್ದಾರೆ.

ಇಂದು ಡಿಎಫ್ಓ ಮೋಹನ್ ಕುಮಾರ್ ಕೂಡ ಸ್ಥಳಕ್ಕೆ ಭೇಟಿ ನೀಡಿ, ಆನೆ ಓಡಿಸುವಂತ ಕಾರ್ಯಾಚರಣೆಯ ಬಗ್ಗೆ ಮಾಹಿತಿಯನ್ನು ಪಡೆದರು. ಇವರಿಗೆ ಸಾಗರ ಎಸಿಎಫ್ ರವಿ, ಸೊರಬ ಎಸಿಎಫ್ ಸುರೇಶ್ ಕುಳ್ಳಳ್ಳಿ, ಆರ್ ಎಫ್ ಓ ಶ್ರೀಪಾದ್ ನಾಯ್ಕ್, ಸಾಗರ ಆರ್ ಎಫ್ ಓ ಅಣ್ಣಪ್ಪ, ಶಿರಾಳಕೊಪ್ಪ ಆರ್ ಎಫ್ ಓ ಜಾವೇದ್, ಆನವಟ್ಟಿಯ ಆರ್ ಎಫ್ ಓ ಶೇಗುಪ್ತಾ ಆನೆ ಕಾರ್ಯಾಚರಣೆಯ ಇಂಚಿಂಚೂ ಮಾಹಿತಿಯನ್ನು ನೀಡಿದರು.
ಹಗಲಿರುಳೆನ್ನದೇ ಆನೆ ಪತ್ತೆಗೆ ಇಳಿದ ಅರಣ್ಯಾಧಿಕಾರಿ, ಸಿಬ್ಬಂದಿಗಳು
ಅಂದಹಾಗೇ ಸುಮಾರು 45ಕ್ಕೂ ಹೆಚ್ಚು ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಕಳೆದ ಐದು ದಿನಗಳಿಂದ ಆನೆ ಪತ್ತೆ, ಮರಳಿ ಬಂದ ಪ್ರದೇಶಕ್ಕೆ ಓಡಿಸುವಂತ ಪ್ರಯತ್ನಕ್ಕೆ ಇಳಿದಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಉಳವಿ ವ್ಯಾಪ್ತಿಯ ಡಿ ಆರ್ ಎಫ್ ಓ ಯೋಗರಾಜ್ ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಇವರಲ್ಲದೇ ಡಿ ಆರ್ ಎಫ್ ಓ ರಾಮಪ್ಪ, ಶ್ರೀಶೈಲ ಕೋಂದಿ, ಮೋಹನ್ ಕುಮಾರ್, ಮುತ್ತಣ್ಣ ಕೂಡ ಶ್ರಮಿಸುತ್ತಿದ್ದಾರೆ.
ಇನ್ನೂ ಗಸ್ತು ಅರಣ್ಯ ಪಾಲಕರಾದಂತ ಪ್ರವೀಣ್ ಕುಮಾರ್, ಸುಮಿತ, ಸುರೇಶ್, ಆನಂದ್, ಚಂದ್ರು, ಅಂಬಲಿಗೋಳ, ಶಿರಾಳಕೊಪ್ಪ, ಸೊರಬ ಹಾಗೂ ಸಾಗರದ ಸಿಬ್ಬಂದಿಗಳು ಸಾಥ್ ನೀಡಿದ್ದಾರೆ. ನಾಳೆ ಆನೆಯನ್ನು ಥರ್ಮಲ್ ಸ್ಕ್ಯಾನ್ ಡ್ರೋನ್ ಮೂಲಕ ಪತ್ತೆ ಮಾಡಿ, ಶೆಟ್ಟಿಹಳ್ಳಿ ಅರಣ್ಯಕ್ಕೆ ಓಡಿಸುವಂತ ಪ್ರಯತ್ನವನ್ನು ಅರಣ್ಯ ಇಲಾಖೆಯವರು ಮಾಡೋ ಸಾಧ್ಯತೆ ಇದೆ. ಆ ಕೆಲಸವಾಗಲೀ, ಆನೆ ದಾಳಿಯಿಂದ ಉಂಟಾಗುವಂತ ಬೆಳೆ ಹಾನಿ ತಪ್ಪಿಸಲಿ ಎಂಬುದು ರೈತರ ಆಗ್ರಹ ಕೂಡ ಆಗಿದೆ.
ಬೆಳೆನಾಶಗೊಂಡ ರೈತರಿಗೆ ಪರಿಹಾರಕ್ಕೆ ಈ ಮಾಹಿತಿ ನೀಡಿದ ಅರಣ್ಯಾಧಿಕಾರಿಗಳು
ಉಳವಿ ಹೋಬಳಿ ವ್ಯಾಪ್ತಿಯಲ್ಲಿ ಆನೆ ದಾಳಿಯಿಂದಾಗಿ ಅಲ್ಲಲ್ಲಿ ಭತ್ತ, ಅಡಿಕೆ, ಬಾಳೆ ನಾಶವಾಗಿವೆ. ಹೀಗೆ ನಾಶಗೊಂಡಂತ ರೈತರು, ಕೃಷಿ ಇಲಾಖೆ ಅಧಿಕಾರಿಗಳಿಗೆ ಪರಿಹಾರಕ್ಕೆ ಅರ್ಜಿ ಸಲ್ಲಿಸಬೇಕು. ಆ ಬಳಿಕ ಕೃಷಿ, ಕಂದಾಯ, ಅರಣ್ಯ ಇಲಾಖೆಯ ಅಧಿಕಾರಿಗಳು ಜಂಟಿ ಸರ್ವೆ ನಡೆಸಿ ಸರ್ಕಾರದಿಂದ ಆನೆ ದಾಳಿಯಿಂದ ಬೆಳೆ ನಾಶಗೊಂಡಿದ್ದಕ್ಕೆ ಪರಿಹಾರ ದೊರಕಿಸುವಂತ ಕೆಲಸ ಮಾಡುವುದಾಗಿ ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆತಂಕದಲ್ಲಿ ಉಳವಿ ಹೋಬಳಿ ವ್ಯಾಪ್ತಿಯ ಜನರು
ಎರಡು ಆನೆಗಳು ಉಳವಿ ಹೋಬಳಿ ವ್ಯಾಪ್ತಿಯ ಕಾಡಿನಲ್ಲಿ ಕಾಣಿಸಿಕೊಂಡಿರುವ ಪರಿಣಾಮ ಸಾರ್ವಜನಿಕರು ರಾತ್ರಿ ಆದ್ರೆ ಸಾಕು ಮನೆಯಿಂದ ಹೊರ ಬರೋದಕ್ಕೆ ಹೆದರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ರೈತರು ತಮ್ಮ ಜಮೀನುಗಳಿಗೆ ಕೃಷಿ ಕೆಲಸಗಳಿಗೆ ತೆರಳೋದಕ್ಕೆ ಭಯ ಪಡುವಂತೆ ಆಗಿದೆ. ಹೀಗಾಗಿ ಶೀಘ್ರವೇ ಕಾಡಾನೆಗಳನ್ನು ಪತ್ತೆ ಹಚ್ಚಿ, ಬಂದೆಡೆಗೆ ಓಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು…
ವಾರ್ನರ್ ಬ್ರದರ್ಸ್ ಅನ್ನು $72 ಬಿಲಿಯನ್‌ಗೆ ಖರೀದಿಸಲು ನೆಟ್ಫ್ಲಿಕ್ಸ್ ಒಪ್ಪಿಗೆ | Netflix to buy Warner Bros
ನಾನು, ಸತೀಶ್ ಜಾರಕಿಹೊಳಿ ಭೇಟಿಯಾಗಿದ್ದು ನಿಜ: ಡಿಸಿಎಂ ಡಿ.ಕೆ. ಶಿವಕುಮಾರ್








