ಯಾದಗಿರಿ : ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ಸಿಕ್ಕಿದ್ದು, ವಾರದ 6 ದಿನ ಮೊಟ್ಟೆ ವಿತರಿಸುವ ಯೋಜನೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಚಾಲನೆ ನೀಡಿದ್ದಾರೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾಡಳಿತ, ಜಿ.ಪಂ ಯಾದಗಿರಿ ಹಾಗೂ ಅಕ್ಷರ ದಾಸೋಹ-ಮಧ್ಯಾಹ್ನ ಉಪಹಾರ ಯೋಜನೆಯಡಿ ಅಜೀಂ ಪ್ರೇಮ್ ಜೀ ಫೌಂಡೇಶನ್, ಬೆಂಗಳೂರು ಇವರ ಸಹಭಾಗಿತ್ವದಲ್ಲಿ ಶಾಲಾ ಮಕ್ಕಳ ಪೌಷ್ಟಿಕತೆ ವೃದ್ಧಿಸಲು “ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 56 ಲಕ್ಷ ಮಕ್ಕಳಿಗೆ ವಾರದ 6 ದಿನಗಳು ಪೂರಕ ಪೌಷ್ಟಿಕ ಆಹಾರವನ್ನು ವಿತರಿಸುವ ಕಾರ್ಯಕ್ರಮಕ್ಕೆ ಯಾದಗಿರಿ ಜಿಲ್ಲೆಯ ಅರಕೇರಾ.ಕೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಲಾಗಿದೆ.
ಈ ವೇಳೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ನಮ್ಮ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 76 ಸಾವಿರ ಶಾಲೆಗಳು ಬರುತ್ತವೆ. ಒಟ್ಟು 60 ಲಕ್ಷ ಮಕ್ಕಳು ವಿದ್ಯಾಭ್ಯಾಸ ಮಾಡ್ತಾ ಇದ್ದಾರೆ. ಇಂದು ವಾರದಲ್ಲಿ 6 ದಿನ ಮೊಟ್ಟೆ ವಿತರಿಸಲು ಚಾಲನೆ ನೀಡಲಾಗಿದ್ದು, ರಾಜ್ಯದ 57 ಲಕ್ಷ ವಿದ್ಯಾರ್ಥಿಗಳು ಈ ಸೌಲಭ್ಯ ಪಡೆಯುತ್ತಿದ್ದಾರೆ. ಇದಕ್ಕೆ ಅಜೀಂ ಪ್ರೇಮ್ ಜಿ ಫೌಂಡೇಶನ್ ರವರು ಕೈ ಜೋಡಿಸಿದ್ದಾರೆ ಅವರಿಗೆ ಸರ್ಕಾರದ ಪರವಾಗಿ ಧನ್ಯವಾದಗಳು ತಿಳಿಸುತ್ತೇವೆ ಎಂದರು.
ಸರ್ಕಾರ ಬಂದ ಮೇಲೆ ಗ್ಯಾರಂಟಿ ಕೊಡುತ್ತಿರುವುದು ನಮ್ಮ ಹೆಮ್ಮೆ. ಬಡವರ ಹೊಟ್ಟೆ ತುಂಬಿಸುವ ಕಾರ್ಯ ಅನ್ನಭಾಗ್ಯ ಯೋಜನೆಯಾಗಿದೆ. ಮಕ್ಕಳ ಪೌಷ್ಠಿಕತೆಗೆ ಹೆಚ್ಚು ಒತ್ತು ಕೊಡುತ್ತಿದ್ದು, ಈ ಯೋಜನೆಗೆ ಮೂರು ವರ್ಷಕ್ಕೆ 1591 ಕೋಟಿ ರೂಗಳನ್ನು ಖರ್ಚು ಮಾಡುತ್ತಿದ್ದು ಇತಿಹಾಸವಾಗಿದೆ ಎಂದು ತಿಳಿಸಿದ್ದಾರೆ.