ಬೆಂಗಳೂರು : ರಾಜ್ಯದ “ ಸರ್ಕಾರಿ ಶಾಲೆ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳ ಆಸ್ತಿ ಸಂರಕ್ಷಣಾ ಅಭಿಯಾನ / ಆಂದೋಲನ “ವನ್ನು ಜುಲೈ – 2025 ರಿಂದ ಸೆಪ್ಟೆಂಬರ್-2025 ರವರೆಗಿನ ತ್ರೈಮಾಸಿಕ ಅವಧಿಯಲ್ಲಿ ಹಮ್ಮಿಕೊಳ್ಳುವ ಬಗ್ಗೆ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಸರ್ಕಾರಿ ಶಾಲೆಗಳಿಗೆ ಸರ್ಕಾರದಿಂದ ಮಂಜೂರಾಗಿರುವ ಜಾಗಗಳು, ಜಮೀನುಗಳು ಹಾಗೂ ಅನೇಕ ದಾನಿಗಳು, ಶಿಕ್ಷಣ ಪ್ರೇಮಿಗಳು ಸರ್ಕಾರಿ ಶಾಲೆಗಳಿಗೆ ದಾನವಾಗಿ ನೀಡಿರುವ ನಿವೇಶನ, ಜಾಗ, ಜಮೀನು ಆಯಾ ಸರ್ಕಾರಿ ಶಾಲೆಯ ಹೆಸರಿಗೆ ಖಾತೆ ಆಗದೇ ಕೆಲವು ಸಂದರ್ಭಗಳಲ್ಲಿ ಒತ್ತುವರಿಗೊಂಡು, ಅತಿಕ್ರಮಣಗೊಂಡು ಸರ್ಕಾರಿ ಶಾಲಾ ಆಸ್ತಿ ಇತರರ ಪಾಲಾಗುವ ಸಂಭವ ಇರುತ್ತದೆ. ಸರ್ಕಾರಿ ಶಾಲೆಗಳ ಸದರಿ ಆಸ್ತಿಗಳು ಕಾನೂನು ಪ್ರಕಾರ ಆಯಾ ಸರ್ಕಾರಿ ಶಾಲೆಯ ಹೆಸರಿಗೆ ಸಕಾಲದಲ್ಲಿ ಖಾತೆಯಾಗದೇ ಇರುವುದರಿಂದ ಅನೇಕ ಸಂದರ್ಭಗಳಲ್ಲಿ ನ್ಯಾಯಾಲಯದಲ್ಲಿ ಪ್ರಕರಣಗಳು ಸಹ ದಾಖಲಾಗುವ ಸನ್ನಿವೇಶ ನಿರ್ಮಾಣವಾಗುತ್ತದೆ.
ಈಗಿನ ಮತ್ತು ಮುಂದಿನ ಪೀಳಿಗೆಗೆ ಕಡ್ಡಾಯವಾಗಿ ಉಚಿತವಾದ ಹಾಗೂ ಗುಣಮಟ್ಟದ ಶಿಕ್ಷಣವನ್ನು ನೀಡಬೇಕೆನ್ನುವ ಸರ್ಕಾರದ ಆಶಯವನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳ ಜಾಗಗಳನ್ನು ಆಯಾ ಶಾಲೆಯ ಹೆಸರಿಗೆ ಖಾತೆ ಮಾಡಿಸಿ, ಸಂರಕ್ಷಿಸುವುದರ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಿ, ಬೆಳೆಸುವುದು ವರ್ತಮಾನದ ಪ್ರಥಮ ಆದ್ಯತೆಯಾಗಿರುತ್ತದೆ. ಇದರೊಂದಿಗೆ ಸರ್ಕಾರಿ ಶಾಲಾ ಜಾಗಗಳ ಮಾಲೀಕತ್ವದ ಕುರಿತು ತಕರಾರು, ವಿವಾದ ಮತ್ತು ವ್ಯಾಜ್ಯಗಳು ಉಂಟಾಗುವ ಸಂಭವ ಇರುವುದಿಲ್ಲ.
ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಎಲ್ಲಾ ಸರ್ಕಾರಿ ಪ್ರಾಥಮಿಕ, ಸರ್ಕಾರಿ ಪ್ರೌಢ ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಜಾಗ, ಜಮೀನು, ನಿವೇಶನ ಮತ್ತು ಕಟ್ಟಡಗಳ ಆಸ್ತಿಗಳನ್ನು ಆಯಾ ಸರ್ಕಾರಿ ಶಾಲೆ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಯ ಹೆಸರಿಗೆ ಖಾತೆ ಮಾಡಿಸುವುದರ ಮೂಲಕ ಸಂರಕ್ಷಣೆ ಮಾಡಿಕೊಳ್ಳಲು ಸರ್ಕಾರದ ಮತ್ತು ಸಂಬಂಧಿಸಿದ ಇಲಾಖೆಗಳ ನಿರ್ದೇಶನಗಳ ಅನುಸಾರ ಈ ಹಿಂದಿನಿಂದಲೂ ಕ್ರಮವಹಿಸಲಾಗುತ್ತಿದೆ.
ಈ ನಿಟ್ಟಿನಲ್ಲಿ ಉಲ್ಲೇಖ-01 & 02 ರ ಸುತ್ತೋಲೆಗಳಂತೆ ಕಳೆದ ವರ್ಷಗಳಲ್ಲಿ ಸಂಬಂಧಿಸಿದ ಇಲಾಖೆಗಳ ಸಹಯೋಗದಲ್ಲಿ ಸರ್ಕಾರಿ ಶಾಲೆ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳ ಆಸ್ತಿ ಸಂರಕ್ಷಣಾ ಅಭಿಯಾನ\ ಆಂದೋಲನವನ್ನು ಸಹ ನಿರಂತರವಾಗಿ ಕೈಗೊಳ್ಳಲಾಗಿದ್ದು, ರಾಜ್ಯದಾದ್ಯಂತ ಬಹಳಷ್ಟು ಸರ್ಕಾರಿ ಶಾಲೆಗಳ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳ ಆಸ್ತಿಗಳನ್ನು ಆಯಾ ಸರ್ಕಾರಿ ಶಾಲೆಯ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ಖಾತೆ ಮಾಡಿಸಲು ಕ್ರಮವಹಿಸಲಾಗಿರುತ್ತದೆ. ಬಾಕಿಯಿರುವ ಸರ್ಕಾರಿ ಶಾಲೆಗಳ ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಆಸ್ತಿಗಳನ್ನು ಆಯಾ ಸರ್ಕಾರಿ ಶಾಲೆಯ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ಖಾತೆ ಮಾಡಿಸುವ ಪ್ರಕ್ರಿಯೆ ನಿರಂತರವಾಗಿ ಜಾರಿಯಲ್ಲಿದ್ದು, ಸದರಿ ಪ್ರಕ್ರಿಯೆಯನ್ನು ಚುರುಕುಗೊಳಿಸಿ, ನಿಗದಿತ ಕಾಲಾವಧಿಯೊಳಗೆ ಪೂರ್ಣಗೊಳಿಸಿಕೊಳ್ಳಲು ಮತ್ತೊಮ್ಮೆ ಇಂತಹ ಅಭಿಯಾನವನ್ನು / ಆಂದೋಲನವನ್ನು ಕೈಗೊಳ್ಳುವ ಅಗತ್ಯತೆ ಇರುತ್ತದೆ.
ಆಯಾ ಸರ್ಕಾರಿ ಶಾಲೆಗಳ ಜಾಗಗಳ ದಾಖಲೆಗಳನ್ನು ಸಂಗ್ರಹಿಸಿ ಸದರಿ ಶಾಲೆಯ ಹೆಸರಿಗೆ ಖಾತೆ ಮಾಡಿಸಲು, ಸದರಿ ಜಾಗಗಳು ಒತ್ತುವರಿಯಾಗಿದ್ದಲ್ಲಿ / ಅತಿಕ್ರಮಣವಾಗಿದ್ದಲ್ಲಿ ಸಂಬಂಧಪಟ್ಟ ಪ್ರಾದಿಕಾರದಿಂದ ಸರ್ವೇ ಮಾಡಿಸಿ ಸದರಿ ಒತ್ತುವರಿಯನ್ನು / ಅತಿಕ್ರಮಣವನ್ನು ತೆರವುಗೊಳಿಸಲು ನಿಯಮಾನುಸಾರ ಅಗತ್ಯ ಕ್ರಮಗಳನ್ನು ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸುವಂತೆ ಉಲ್ಲೇಖ-03ರ ಅರೆ ಸರ್ಕಾರಿ ಪತ್ರದಲ್ಲಿ ನಿರ್ದೇಶನವಿರುತ್ತದೆ.
ಮೇಲ್ಕಂಡ ಈ ಎಲ್ಲಾ ಅಂಶಗಳ ಹಿನ್ನಲೆಯಲ್ಲಿ, ಶಾಲಾ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲೆಗಳು ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಜುಲೈ – 2025 ರಿಂದ ಸೆಪ್ಟೆಂಬರ್- 2025 ರವರೆಗಿನ ತ್ರೈಮಾಸಿಕ ಅವಧಿಯಲ್ಲಿ ” ಸರ್ಕಾರಿ ಶಾಲೆ ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಆಸ್ತಿ ಸಂರಕ್ಷಣಾ ಅಭಿಯಾನ / ಆಂದೋಲನ ವನ್ನು ನಿಯಮಾನುಸಾರ ಕೈಗೊಂಡು, ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲೆಗಳ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳ ಆಸ್ತಿಗಳನ್ನು ಆಯಾ ಸರ್ಕಾರಿ ಶಾಲೆಯ ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ಖಾತೆ ಮಾಡಿಸಲು ಬಾಕಿಯಿರುವ ಪ್ರಕರಣಗಳಲ್ಲಿ ಸದರಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಸರ್ಕಾರಕ್ಕೆ ಯಥಾವತ್ತಾಗಿ ವರದಿ ಮಾಡಲು ಮತ್ತು ಶಾಲಾ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿನ ಯಾವುದಾದರೂ ಸರ್ಕಾರಿ ಶಾಲೆಯ ಅಥವಾ ಸರ್ಕಾರಿ ಶಿಕ್ಷಣ ಸಂಸ್ಥೆಯ ಸ್ಥಿರಾಸ್ತಿ (ಜಾಗ, ಜಮೀನು, ನಿವೇಶನ ಮತ್ತು ಕಟ್ಟಡ) ಒತ್ತುವರಿ ಅಥವಾ ಅತಿಕ್ರಮಣ ಆಗಿದ್ದಲ್ಲಿ, ಅದನ್ನು ತೆರವುಗೊಳಿಸಿ, ಸಂಬಂಧಿಸಿದವರ ಸುಪರ್ದಿಗೆ ನೀಡಲು ಹಾಗೂ ಸದರಿ ಸ್ಥಿರಾಸ್ತಿಗಳನ್ನು ನಿರಂತರವಾಗಿ ಮತ್ತು ಶಾಶ್ವತವಾಗಿ ಸಂರಕ್ಷಿಸಿಕೊಂಡು ಹೋಗಲು ನಿಯಮಾನುಸಾರ ಅಗತ್ಯ ಕ್ರಮಗಳನ್ನು ವಹಿಸುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳನ್ನು ಹಾಗೂ ಜಿಲ್ಲಾಡಳಿತಗಳನ್ನು ಕೋರಲಾಗಿದೆ.
ಈ ಸಂಬಂಧ ಆಯಾ ಜಿಲ್ಲಾ ಉಪನಿರ್ದೇಶಕರು(ಆಡಳಿತ) ರವರು ತಮ್ಮ ವ್ಯಾಪ್ತಿಯಲ್ಲಿನ ಆಯಾ ಸರ್ಕಾರಿ ಶಾಲೆ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಯ ಹೆಸರಿಗೆ ಖಾತೆಯಾಗದಿರುವ ಸದರಿ ಸ್ಥಿರಾಸ್ತಿಗಳ ಖಾತೆಯನ್ನು (ಮುಚ್ಚಿರುವ, ವಿಲೀನಗೊಳಿಸಿರುವ ಮತ್ತು ಸ್ಥಳಾಂತರಿಸಿರುವ ಸರ್ಕಾರಿ ಶಾಲೆಗಳು ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳೂ ಸೇರಿದಂತೆ) ಆಯಾ ಸರ್ಕಾರಿ ಶಾಲೆಯ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಯ ಅಥವಾ ಶಾಲಾ ಶಿಕ್ಷಣ ಇಲಾಖೆಯ ಹೆಸರಿಗೆ ಮಾಡಿಕೊಡಲು ಮತ್ತು ಒಂದು ವೇಳೆ ಸದರಿ ಸ್ಥಿರಾಸ್ತಿಗಳು ಒತ್ತುವರಿ ಅಥವಾ ಅತಿಕ್ರಮಣ ಆಗಿದ್ದಲ್ಲಿ ಅದನ್ನು ತೆರವುಗೊಳಿಸಲು ತಮ್ಮ ವ್ಯಾಪ್ತಿಯ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾಡಳಿತಕ್ಕೆ ಪ್ರಸ್ತಾವನೆಯನ್ನು ಸಕಾಲದಲ್ಲಿ ಸಲ್ಲಿಸಿ, ಕಂದಾಯ ಇಲಾಖೆ ಹಾಗೂ ಸಂಬಂಧಿಸಿದ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ, ಜುಲೈ – 2025 ರಿಂದ ಸೆಪ್ಟೆಂಬರ್- 2025 ರವರೆಗಿನ ತ್ರೈಮಾಸಿಕ ಅವಧಿಯಲ್ಲಿ ಈ ಅಭಿಯಾನ / ಆಂದೋಲನವನ್ನು ಕೈಗೊಳ್ಳುವ ಮೂಲಕ ಸದರಿ ಪ್ರಕ್ರಿಯೆಯನ್ನು ನಿಯಮಾನುಸಾರ ಪೂರ್ಣಗೊಳಿಸಿಕೊಳ್ಳಲು ಹಾಗೂ ಸದರಿ ಸ್ಥಿರಾಸ್ತಿಗಳನ್ನು ಇಲಾಖೆಯ ಸುಪರ್ದಿಗೆ ಪಡೆದು ನಿರಂತರವಾಗಿ ಮತ್ತು ಶಾಶ್ವತವಾಗಿ ಸಂರಕ್ಷಿಸಿಕೊಂಡು ಹೋಗಲು ಮತ್ತು ಸದರಿ ಸ್ಥಿರಾಸ್ತಿಗಳ ಖಾತೆಗಳ ವಿವರಗಳನ್ನು ಯಥಾವತ್ತಾಗಿ ಶಾಲಾ ಶಿಕ್ಷಣ ಇಲಾಖೆಯ ಸ್ಯಾಟ್ಸ್ (SATS) ತಂತ್ರಾಂಶದಲ್ಲಿ ಇಂದೀಕರಿಸಲು ನಿಯಮಾನುಸಾರ ಅಗತ್ಯ ಕ್ರಮಗಳನ್ನು ವಹಿಸುವಂತೆ ಶಾಲಾ ಶಿಕ್ಷಣ ಇಲಾಖೆಯ ಎಲ್ಲಾ ಉಪನಿರ್ದೇಶಕರು (ಆಡಳಿತ) ರವರಿಗೆ (ಜಿಲ್ಲಾ ಎಸ್ಟೇಟ್ ಅಧಿಕಾರಿ), ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ (ತಾಲ್ಲೂಕು ಎಸ್ಟೇಟ್ ಅಧಿಕಾರಿ) ಹಾಗೂ ಎಲ್ಲಾ ಸರ್ಕಾರಿ ಶಾಲೆಗಳ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ತಿಳಿಸಲಾಗಿದೆ.
ಮುಂದುವರೆದು, ಸರ್ಕಾರಿ ಶಾಲೆಗಳ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳ ಆಸ್ತಿಗಳನ್ನು ನಿರಂತರವಾಗಿ ಮತ್ತು ಶಾಶ್ವತವಾಗಿ ಸಂರಕ್ಷಿಸಿಕೊಂಡು ಹೋಗುವ ನಿಟ್ಟಿನಲ್ಲಿ ತಮ್ಮ ಜಿಲ್ಲಾ ವ್ಯಾಪ್ತಿಯೊಳಗೆ ಸುತ್ತು ಗೋಡೆ (ಕಾಂಪೌಂಡ್ ವಾಲ್) ಹೊಂದಿಲ್ಲದ ಸರ್ಕಾರಿ ಶಾಲೆಗಳನ್ನು ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಗುರುತಿಸಿ, ಇಂತಹ ಶಾಲೆಗಳ ಸುತ್ತು ಗೋಡೆ (ಕಾಂಪೌಂಡ್ ವಾಲ್‌ಗಳ ನಿರ್ಮಾಣ ಕಾಮಗಾರಿಗಳನ್ನು ನರೇಗಾ ಯೋಜನೆಯಡಿಯಲ್ಲಿ ಕೈಗೊಳ್ಳಲು ಅನುವಾಗುವಂತೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಆಯಾ ಜಿಲ್ಲಾ ಪಂಚಾಯತಿಗೆ ಸಲ್ಲಿಸಲು ರಾಜ್ಯದ ಎಲ್ಲಾ ಉಪನಿರ್ದೇಶಕರು (ಆಡಳಿತ) ರವರಿಗೆ ತಿಳಿಸಿದೆ.
ಸದರಿ ಕ್ರಿಯಾ ಯೋಜನೆಯನ್ನು ಪ್ರಸಕ್ತ ಸಾಲಿನ ನರೇಗಾ ಯೋಜನೆಯಡಿಯಲ್ಲಿ ಸೇರ್ಪಡೆಗೊಳಿಸಿ, ಈ ಉದ್ದೇಶಕ್ಕಾಗಿ ಕೂಡಲೇ ಅನುದಾನ ಮಂಜೂರು ಮಾಡುವಂತೆ, ಆಯಾ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಕೋರಲಾಗಿದೆ.
ಈ ಕುರಿತು ನಿರಂತರ ಅನುಪಾಲನೆಯೊಂದಿಗೆ ಅನುದಾನ ಮಂಜೂರು ಮಾಡಿಸಿಕೊಂಡು ದಿನಾಂಕ: 15.12.2025 ರೊಳಗೆ ಸದರಿ ಕಾಮಗಾರಿಗಳನ್ನು ಪೂರ್ಣಗೊಳಿಸಿಕೊಳ್ಳಲು ನಿಯಮಾನುಸಾರ ಅಗತ್ಯ ಕ್ರಮಗಳನ್ನು ವಹಿಸುವಂತೆ ಹಾಗೂ ಈ ಕುರಿತಾದ ಮಾಸಿಕ ಪ್ರಗತಿ ವರದಿಯನ್ನು ಈ ಕಛೇರಿಯ ಇ-ಮೇಲ್ ddpiplanning@gmail.com R ತಪ್ಪದೇ ಸಲ್ಲಿಸುವಂತೆ ರಾಜ್ಯದ ಎಲ್ಲಾ ಜಿಲ್ಲಾ ಉಪನಿರ್ದೇಶಕರು(ಆಡಳಿತ) ರವರಿಗೆ ತಿಳಿಸಲಾಗಿದೆ.
ಈ ಸರ್ಕಾರಿ ಶಾಲೆ ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಆಸ್ತಿ ಸಂರಕ್ಷಣಾ ಪ್ರಕ್ರಿಯೆಗೆ ಸಂಬಂಧಿಸಿದಂತೆ, ಆಯಾ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳನ್ನು ಜಿಲ್ಲಾ ನೋಡಲ್ ಅಧಿಕಾರಿಯನ್ನಾಗಿ ಹಾಗೂ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರನ್ನು ತಾಲ್ಲೂಕು ನೋಡಲ್ ಅಧಿಕಾರಿಯನ್ನಾಗಿ ದಿನಾಂಕ: 27.11.2023 ರ ಉಲ್ಲೇಖ-01ರ ಸುತ್ತೋಲೆಯಂತೆ ಈಗಾಗಲೇ ನೇಮಿಸಲಾಗಿದೆ.
ಸದರಿ ನೋಡಲ್ ಅಧಿಕಾರಿಗಳು ಆಯಾ ಉಪನಿರ್ದೇಶಕರು (ಆಡಳಿತ) ರವರ (ಜಿಲ್ಲಾ ಎಸ್ಟೇಟ್ ಅಧಿಕಾರಿ) ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ (ತಾಲ್ಲೂಕು ಎಸ್ಟೇಟ್ ಅಧಿಕಾರಿ) ನೇತೃತ್ವದಲ್ಲಿ ಈ ಆಸ್ತಿ ಸಂರಕ್ಷಣಾ & ಸದರಿ ಶಾಲೆಗಳ ಸುತ್ತುಗೋಡೆ (ಕಾಂಪೌಂಡ್ ವಾಲ್‌ಗಳ ನಿರ್ಮಾಣ ಕಾಮಗಾರಿಗಳ ಪ್ರಕ್ರಿಯೆಗಳನ್ನು ಕ್ರಮವಾಗಿ ಜಿಲ್ಲೆ ಮತ್ತು ತಾಲ್ಲೂಕು ಹಂತಗಳಲ್ಲಿ ಸಕಾಲದಲ್ಲಿ ಚಾಲನೆಗೊಳಿಸಿ, ಸಂಬಂಧಿಸಿದ ಎಲ್ಲಾ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ, ನಿರಂತರವಾಗಿ ಹಿಂಬಾಲಿಸಿ ಸಕಾಲದಲ್ಲಿ ಪೂರ್ಣಗೊಳಿಸಿಕೊಳ್ಳಲು ಹಾಗೂ ಯಥಾವತ್ತಾಗಿ ಶಾಲಾ ಶಿಕ್ಷಣ ಇಲಾಖೆಯ ಸ್ಮಾಟ್ಸ್ (SATS) ತಂತ್ರಾಂಶದಲ್ಲಿ ಇಂದೀಕರಿಸಲು ನಿಯಮಾನುಸಾರ ಅಗತ್ಯ ಕ್ರಮಗಳನ್ನು ವಹಿಸತಕ್ಕದ್ದು. ಒಂದು ವೇಳೆ ಈ ಪ್ರಕ್ರಿಯೆಗಳನ್ನು ನಿಗದಿತ ಕಾಲಾವಧಿಯೊಳಗೆ ಪೂರ್ಣಗೊಳಿಸಲು ಶಾಲಾ ಶಿಕ್ಷಣ ಇಲಾಖೆಯ ಸಂಬಂಧಿಸಿದ ಯಾವುದೇ ಅಧಿಕಾರಿಗಳು ವಿಫಲರಾದಲ್ಲಿ ಅಂತಹವರ ವಿರುದ್ಧ ನಿಯಮಾನುಸಾರ ಶಿಸ್ತುಕ್ರಮವನ್ನು ಜರುಗಿಸಲಾಗುವುದು ಎಂದು ಎಚ್ಚರಿಸಿದೆ.
ಆಯಾ ಜಿಲ್ಲಾ ವ್ಯಾಪ್ತಿಯ ಎಲ್ಲಾ ಸರ್ಕಾರಿ ಶಾಲೆಗಳ ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಸ್ಥಿರಾಸ್ತಿಗಳ ದಾಖಲೆಗಳ ಯಥಾಪ್ರತಿಗಳನ್ನು ಆಯಾ ಉಪನಿರ್ದೇಶಕರು(ಆಡಳಿತ)ರವರು (ಜಿಲ್ಲಾ ಎಸ್ಟೇಟ್ ಅಧಿಕಾರಿ) ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ (ತಾಲ್ಲೂಕು ಎಸ್ಟೇಟ್ ಅಧಿಕಾರಿ) ಗಳೊಂದಿಗೆ ಸದರಿ ನೋಡಲ್ ಅಧಿಕಾರಿಗಳು ಸಹ ಪ್ರತ್ಯೇಕವಾಗಿ, ಶಾಶ್ವತವಾಗಿ ಮತ್ತು ಸುರಕ್ಷಿತವಾಗಿ ಕಾಯ್ದಿರಿಸತಕ್ಕದ್ದು.