ಬೆಂಗಳೂರು : 2023-24ನೇ ಸಾಲಿನ 5, 8 ಮತ್ತು 9ನೇ ತರಗತಿ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಆಗಿರುವ ಲೋಪದೋಷಗಳ ಬಗ್ಗೆ ವರದಿಯನ್ನು ನೀಡುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಸೂಚನೆ ನೀಡಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ 2023-24ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 5, 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಸಂಕಲನಾತ್ಮಕ ಮೌಲ್ಯಮಾಪನ-2 (SA-2) ಕಾರ್ಯವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯ ಕೆ.ಎಸ್.ಕ್ಯು.ಎ.ಎ.ಸಿ. ವತಿಯಿಂದ ನಡೆಸಲಾಗಿರುತ್ತದೆ. ಉಲ್ಲೇಖಿತ ಮಾರ್ಗಸೂಚಿಯನ್ವಯ ಮೌಲ್ಯಮಾಪನ ಕಾರ್ಯ ನಿರ್ವಹಿಸುವ ಸಂಪೂರ್ಣ ಜವಾಬ್ದಾರಿ ಉಪನಿರ್ದೇಶಕರು (ಅಭಿವೃದ್ಧಿ) ರವರದ್ದಾಗಿದ್ದು, ನಿಗದಿತ ದಿನಾಂಕದೊಳಗೆ ಬ್ಲಾಕ್ ಹಂತದಲ್ಲಿ ಮೌಲ್ಯಮಾಪನ ಕಾರ್ಯವನ್ನು ಪೂರ್ಣಗೊಳಿಸಿ ಉತ್ತರ ಪತ್ರಿಕೆಗಳನ್ನು ಸಂಬಂಧಿಸಿದ ಶಾಲೆಗಳಿಗೆ ಮರುರವಾನಿಸಲು ಸೂಚಿಸಲಾಗಿತ್ತು.
ಪ್ರಸ್ತುತ 5, 8 ಮತ್ತು 9ನೇ ತರಗತಿಯ ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳನ್ನು ಆಯಾ ಶಾಲೆಗಳಿಗೆ ಮರುರವಾನಿಸಲಾಗಿದೆ. ಇದರಲ್ಲಿ ಸರಿ ಉತ್ತರ ಬರೆದಿದ್ದರೂ ಸೂಕ್ತ ಅಂಕ ನೀಡದಿರುವುದು, ಉತ್ತಮವಾಗಿ ಓದುವ ಮಕ್ಕಳಿಗೆ ಕಡಿಮೆ ಅಂಕ ನೀಡಿರುವುದು, ಫಲಿತಾಂಶದ ಅಂಕಿ-ಅಂಶಗಳ ಲೆಕ್ಕವನ್ನೇ ತಪ್ಪಾಗಿ ಮಾಡಿರುವುದು. ಕೆಲ ವಿಷಯಗಳಲ್ಲಿ ಗರಿಷ್ಠ ಅಂಕಗಳಿಗಿಂತ ಹೆಚ್ಚು ಅಂಕ ನೀಡಿರುವ ಪ್ರಕರಣಗಳು ಕಂಡುಬಂದಿದೆ ಎಂಬುದಾಗಿ ಶಾಲಾ ಆಡಳಿತ ಮಂಡಳಿಗಳು ಮಾಹಿತಿ ನೀಡಿವೆ ಎಂದು ಖಾಸಗಿ ಶಾಲಾ ಸಂಘಟನೆ ಕ್ಯಾಮ್ಸ್ ಆರೋಪಿಸಿರುವುದಾಗಿ ಪತ್ರಿಕೆಗಳಲ್ಲಿ ಪ್ರಕಟವಾಗಿರುತ್ತದೆ.
ಈ ಹಿನ್ನೆಲೆಯಲ್ಲಿ 2023-24ನೇ ಸಾಲಿನ 5, 8 ಮತ್ತು 9ನೇ ತರಗತಿಯ ಮೌಲ್ಯಮಾಪನದಲ್ಲಿ ಆಗಿರುವ ಲೋಪದೋಷಗಳ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ, ಅಗತ್ಯವಿದ್ದಲ್ಲಿ ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನ ಮಾಡಿಸಲು ಹಾಗೂ ಸರಿಯಾಗಿ ಮೌಲ್ಯಮಾಪನ ಮಾಡದ ತಪ್ಪಿತಸ್ಥ ಶಿಕ್ಷಕರ ವಿರುದ್ಧ ಸೂಕ್ತ ಕ್ರಮಕೈಗೊಂಡು ಈ ಕಛೇರಿಗೆ ದಿನಾಂಕ: 15.04.2024 ರೊಳಗೆ ವರದಿಯನ್ನು ನೀಡಲು ಉಪನಿರ್ದೇಶಕರು (ಅಭಿವೃದ್ಧಿ) ರವರಿಗೆ ತಿಳಿಸಿದೆ.