ಬೆಂಗಳೂರು : 2025-26 ನೇ ಸಾಲಿನ ರಾಜ್ಯ ಮಟ್ಟದ “ಪ್ರತಿಭಾ ಕಾರಂಜಿ ಸ್ಪರ್ಧೆ” ಕಾರ್ಯಕ್ರಮ ಆಯೋಜಿಸುವ ಬಗ್ಗೆ ಶಾಲಾ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ವಿಷಯಕ್ಕೆ ಸಂಬಂಧಿಸಿದಂತೆ, 2025-26ನೇ ಸಾಲಿನಲ್ಲಿ ರಾಜ್ಯ ಮಟ್ಟದ ‘ಪ್ರತಿಭಾ ಕಾರಂಜಿ ಸ್ಪರ್ಧೆ” ಕಾರ್ಯಕ್ರಮವನ್ನು ಕೊಪ್ಪಳ ಜಿಲ್ಲೆಯಲ್ಲಿ ಫೆಬ್ರವರಿ ಮೊದಲನೇ ವಾರದಲ್ಲಿ ನಡೆಸಲು ಉಲ್ಲೇಖ(1)ರಂತೆ ಸೂಚಿಸಿರುತ್ತಾರೆ. ರಾಜ್ಯ ಮಟ್ಟದ “ಪ್ರತಿಭಾ ಕಾರಂಜಿ ಸ್ಪರ್ಧೆ” ಕಾರ್ಯಕ್ರಮವನ್ನು ಆಯೋಜನೆಗೊಳಿಸುವ ಸಂಬಂಧ ಎಲ್ಲಾ ಜಿಲ್ಲೆಗಳ ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ವಿವರವನ್ನು ಉಪನಿರ್ದೇಶಕರು (ಆಡಳಿತ), ಶಾಲಾ ಶಿಕ್ಷಣ ಇಲಾಖೆ, ಕೊಪ್ಪಳ ಜಿಲ್ಲೆ. ರವರಿಗೆ ಕೂಡಲೇ ಸಲ್ಲಿಸುವಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರು (ಆಡಳಿತ), ಶಾಲಾ ಶಿಕ್ಷಣ ಇಲಾಖೆ, ರವರಿಗೆ ತಿಳಿಸಿದೆ.
ಈ ಸಂಬಂಧ ಉಪನಿರ್ದೇಶಕರು (ಆಡಳಿತ), ಶಾಲಾ ಶಿಕ್ಷಣ ಇಲಾಖೆ, ಕೊಪ್ಪಳ ಜಿಲ್ಲೆ ರವರು ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರ ಅಪ್ತ ಕಾರ್ಯದರ್ಶಿರವರನ್ನು ಖುದ್ದು ಭೇಟಿ ಮಾಡಿ ಚರ್ಚಿಸಿ ದಿನಾಂಕವನ್ನು ನಿಗಧಿಪಡಿಸಿಕೊಂಡು ತುರ್ತು ಅಗತ್ಯ ಕ್ರಮಕೈಗೊಳ್ಳಲು ತಿಳಿಸಿದೆ. ಎಲ್ಲಾ ಜಿಲ್ಲೆಗಳ ಜಿಲ್ಲಾ ಮಟ್ಟದ ವಿಜೇತರ ಪಟ್ಟಿಯನ್ನು ಸಂಗ್ರಹಿಸಿ, ಉಲ್ಲೇಖಿತ ಸುತ್ತೋಲೆಯಲ್ಲಿನ ಅಂಶಗಳಂತೆ ನಿಯಮಾನುಸಾರ ಕಾರ್ಯಕ್ರಮವನ್ನು ಆಯೋಜಿಸಲು ಕ್ರಮವಹಿಸುವುದು. ಕಾರ್ಯಕ್ರಮ ಆಯೋಜನೆಗೆ ಸಂಬಂಧಿಸಿದಂತೆ ಶಿಷ್ಟಾಚಾರವನ್ನು ಪಾಲಿಸಲು ಕ್ರಮವಹಿಸುವಂತೆ ಹಾಗೂ ಜಿಲ್ಲೆಯಲ್ಲಿನ ಇಲಾಖೆಯ ವಿವಿಧ ಕಛೇರಿಗಳ ಅಧಿಕಾರಿ/ಸಿಬ್ಬಂದಿಗಳನ್ನು ನಿಯೋಜಿಸಿಕೊಂಡು ವಿವಿಧ ಸಮಿತಿಗಳನ್ನು ರಚಿಸಿ, ಕಾರ್ಯಕ್ರಮವನ್ನು ಉತ್ತಮ ರೀತಿಯಲ್ಲಿ ಸಂಘಟಿಸಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದೆ.









