ಬೆಂಗಳೂರು : 2024-25 ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ ನಡೆಸುವ ಬಗ್ಗೆ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
2024-25ನೇ ಶೈಕ್ಷಣಿಕ ಸಾಲಿನಲ್ಲಿ ಕರ್ನಾಟಕ ರಾಜ್ಯ ಪಠ್ಯಕ್ರಮದ 1ರಿಂದ 10ನೇ ತರಗತಿಶಾಲೆಗಳಿಗೆ2024-25ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ವಾರ್ಷಿಕ ಕ್ರಿಯಾಯೋಜನೆ ಹಾಗೂ ಶೈಕ್ಷಣಿಕ ಮಾರ್ಗದರ್ಶಿಯನ್ನು ಉಲ್ಲೇಖಗಳನ್ವಯ ಹೊರಡಿಸಲಾಗಿದೆ. ಇದನ್ನು ಆಧರಿಸಿ ಶಾಲೆಗಳಲ್ಲಿ ಪಠ್ಯವಸ್ತು ಬೋಧನೆ ಹಾಗೂ ಮೌಲ್ಯಾಂಕನ ಕುರಿತು ವಹಿಸಬೇಕಾದ ಕ್ರಮಗಳನ್ನು ಈ ಕೆಳಕಂಡಂತೆ ಸೂಚಿಸಿ, ಅದರಂತೆ ಕ್ರಮವಹಿಸಲು ತಿಳಿಸಿದೆ.
1. ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ದಿನಾಂಕ:29-05-2024 ರಿಂದ ಶೈಕ್ಷಣಿಕ ವರ್ಷವು ಪ್ರಾರಂಭವಾಗಿದೆ. 2022-23 ನೇ ಶೈಕ್ಷಣಿಕ ಸಾಲಿನಲ್ಲಿ ಕಲಿಕಾ ಚೇತರಿಕೆ’ ಉಪಕ್ರಮವನ್ನು ಮತ್ತು 2023-24 ನೇ ಸಾಲಿನಲ್ಲಿ ‘ಕಲಿಕಾ ಬಲವರ್ಧನೆ’ ಕಾರ್ಯಕ್ರಮದಡಿ ಕಲಿವಿನ ಫಲಾಧಾರಿತ ವಿದ್ಯಾರ್ಥಿಗಳ ಚಟುವಟಿಕೆ ಪುಸ್ತಕ ಹಾಗೂ ಶಿಕ್ಷಕರ ಚಟುವಟಿಕೆ ಕೋಶಗಳನ್ನು ಸಿದ್ಧಪಡಿಸಿ ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಅಳವಡಿಸಿ ಕಲಿಕಾ ಅಂತರವನ್ನು ಬೆಸೆಯಲು ನಿರಂತರವಾಗಿ ಉಪಕ್ರಮಗಳನ್ನು ಅನುಷ್ಠಾನಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ಸಜ್ಜುಗೊಳಿಸಲು ಶೈಕ್ಷಣಿಕ ವರ್ಷದ ಆರಂಭದಲ್ಲಿ ‘ಸೇತುಬಂಧ’ ಕಾರ್ಯಕ್ರಮವನ್ನು ಜೂನ್ ತಿಂಗಳಿನಲ್ಲಿ ನಡೆಸುವುದು. 1 ರಿಂದ 10ನೇ ತರಗತಿಗಳಿಗೆ ಸೇತುಬಂಧ ಸಾಹಿತ್ಯವನ್ನು ಸಿದ್ಧಪಡಿಸಿ DSERT website ನಲ್ಲಿ ಅಳವಡಿಸಲಾಗಿದೆ. ಕಾರ್ಯಕ್ರಮ ಅನುಷ್ಠಾನಿಸುವ ಕುರಿತು ಸೇತುಬಂಧ ಸುತ್ತೋಲೆಯ ಮೂಲಕ ಮಾರ್ಗದರ್ಶನ ನೀಡಲಾಗಿದೆ.
2. ಶಾಲಾ ಬ್ಯಾಗ್ ಹೊರೆ ತಗ್ಗಿಸುವ ನಿಟ್ಟಿನಲ್ಲಿ 2024-25 ನೇ ಸಾಲಿನಲ್ಲಿ ಪಠ್ಯಪುಸ್ತಕಗಳನ್ನು ಭಾಗ-1 ಮತ್ತು ಭಾಗ-2 ರಂತೆ ಪ್ರತ್ಯೇಕವಾಗಿ ಮುದ್ರಿಸಲಾಗಿದೆ. ಭಾಗ-1 ರ ಪಠ್ಯ ಶೇ.50 ಹಾಗೂ ಭಾಗ-2 ರ ಪಠ್ಯ ಶೇ.50 ಒಟ್ಟು ಸೇರಿ ಶೇ.100 ರಷ್ಟು ಪಠ್ಯವನ್ನು ಮೌಲ್ಯಾಂಕನಕ್ಕೆ ಒಳಪಡಿಸುವ ವಿಧಾನವನ್ನು ನೀಡಲಾಗಿದ್ದು, ಅದರಂತೆ ಕ್ರಮವಹಿಸುವುದು.
3. ಉಲ್ಲೇಖಿತ ಸುತ್ತೋಲೆ ಹಾಗೂ 2024-25ನೇ ಸಾಲಿನ ಶೈಕ್ಷಣಿಕ ಮಾರ್ಗದರ್ಶಿಯನ್ನು ಆಧರಿಸಿ, ವಾರ್ಷಿಕ ಪಾಠ ಹಂಚಿಕೆ ಮಾಡಿಕೊಂಡು, ಕಲಿಕೆಯನ್ನು ಅನುಕೂಲಿಸುತ್ತಾ, ರೂಪಣಾತ್ಮಕ ಹಾಗೂ ಸಂಕಲನಾತ್ಮಕ ಮೌಲ್ಯಾಂಕನ ಕೈಗೊಂಡು, ಮಕ್ಕಳ ಕಲಿಕೆಯ ಪ್ರಗತಿಯನ್ನು ದಾಖಲಿಸಿಕೊಳ್ಳಬೇಕಾಗಿದೆ. ಈ ಸಂಬಂಧ ಮಕ್ಕಳ ಕಲಿಕೆಗೆ ಪೂರಕವಾಗಿ ಶಿಕ್ಷಕರು ಅಗತ್ಯ ಪೂರ್ವ ತಯಾರಿಯೊಂದಿಗೆ ವಾರ್ಷಿಕ ಕ್ರಿಯಾಯೋಜನೆಯನ್ನು ರೂಪಿಸಿಕೊಳ್ಳುವುದು.
4. 2024-2025ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸೇತುಬಂಧ ಕಾರ್ಯಕ್ರಮ, ರೂಪಣಾತ್ಮಕ ಹಾಗೂ ಸಂಕಲನಾತ್ಮಕ ಮೌಲ್ಯಾಂಕನ ನಿರ್ವಹಿಸಲು ಅನುವಾಗುವಂತೆ ಮಾಹಿತಿಯನ್ನು ನೀಡಲಾಗಿರುತ್ತದೆ. ಅದರಂತೆ, ಶಾಲಾ ಹಂತದಲ್ಲಿ ನಿಗದಿತ ಕಾಲಾವಧಿಯೊಳಗೆ* ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕ್ರಮವಹಿಸುವುದು.