ಬೆಂಗಳೂರು: ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆಯನ್ನು (Quiz Competition) ಹಮ್ಮಿಕೊಳ್ಳುವ ಬಗ್ಗೆ ಸುತ್ತೋಲೆಯನ್ನು ಹೊರಡಿಸಲಾಗಿದೆ.
2024-25ನೇ ಸಾಲಿನ ಯೋಜನಾ ಅನುಮೋಧನಾ ಮಂಡಳಿಯಿಂದ “ರಾಷ್ಟ್ರೀಯ ಅವಿಷ್ಕಾ ಅಭಿಯಾನ” ಕಾರ್ಯಕ್ರಮದಡಿ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲು ಪ್ರಾಥಮಿಕ ವಿಭಾಗಕ್ಕೆ ರೂ.35.00 ಲಕ್ಷಗಳು ಹಾಗೂ ಪ್ರೌಢಶಾಲಾ ವಿಭಾಗಕ್ಕೆ ರೂ.35.00 ಲಕ್ಷಗಳು ಒಟ್ಟು ರೂ.70.00 ಲಕ್ಷಗಳ ಅನುದಾನ ಅನುಮೋದನೆಯಾಗಿರುತ್ತದೆ. ರಸಪ್ರಶ್ನೆ ಸ್ಪರ್ಧೆಯು ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಆಸಕ್ತಿಯನ್ನು ಬೆಳೆಸುವಂತಹ ಚಟುವಟಿಕೆಗಳನ್ನು ಮತ್ತು ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಅವರಲ್ಲಿ ಗಣಿತ, ವಿಜ್ಞಾನ, ತಂತ್ರಜ್ಞಾನ ಸಾಮಾನ್ಯ ಜ್ಞಾನ, ಭಾಷೆ, ಭಾರತ ದೇಶದ ಪರಂಪರೆ ಹಾಗೂ ಇತರೆ ವಿಷಯಗಳಲ್ಲಿ ಅರಿವಿನ ಮಟ್ಟವನ್ನು ಹೆಚ್ಚಿ ಸಲು ಪೂರಕವಾಗಿದೆ. ವಿದ್ಯಾರ್ಥಿಗಳಲ್ಲಿ ವಿಜ್ಞಾನ, ಗಣಿತ ಹಾಗೂ ತಂತ್ರಜ್ಞಾನ ವಿಷಯಗಳ ಕಲಿಕೆಯಲ್ಲಿ ಆಸಕ್ತಿಯನ್ನು ಬೆಳೆಸುವುದು. ವಿದ್ಯಾರ್ಥಿಗಳಲ್ಲಿ ಹೊಸ ವಿಷಯಗಳ ಬಗ್ಗೆ ತಿಳಿಯುವ ಕುತೂಹಲ ಹಾಗೂ ಸಾಮಾನ್ಯ ಜ್ಞಾನವನ್ನು ಬೆಳೆಸುವುದು. ವಿದ್ಯಾರ್ಥಿಗಳಲ್ಲಿ ಚಿಂತಿಸುವ, ವಿಶ್ಲೇಷಿಸುವ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವುದು. ಭಾರತವು ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿರುವ ಸಾಧನೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು. ವಿದ್ಯಾರ್ಥಿಗಳನ್ನು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿ, ಅವರಲ್ಲಿ ಸ್ಪರ್ಧಾಮನೋಭಾವನೆಯನ್ನು ಬೆಳೆಸುವುದು.
ಸ್ಪರ್ಧೆಯ ಹಂತಗಳು: ಶಾಲಾ, ತಾಲ್ಲೂಕು, ಜಿಲ್ಲಾ ವಿಭಾಗ ಹಾಗೂ ರಾಜ್ಯ ಹಂತಗಳಲ್ಲಿ ರಸಪ್ರಶ್ನೆ ಸ್ಪರ್ಧೆಯನ್ನು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಆಯೋಜಿಸುವುದು.
1. ಜೂನಿಯರ್ ಹಂತ – (5-7 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ)
2. ಸೀನಿಯರ್ ಹಂತ – (8-10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ)
ಸ್ಪರ್ಧೆಯ ನೋಂದಣಿ ಮತ್ತು ಪ್ರಕ್ರಿಯೆ: ಪ್ರತಿ ಶಾಲೆಯಿಂದ ಶಾಲಾ ಹಂತದ ಸ್ಪರ್ಧೆಗೆ ಶಿಕ್ಷಕರು ಗಣಿತ, ವಿಜ್ಞಾನ, ತಂತ್ರಜ್ಞಾನ, ಭಾರತದ ಇತಿಹಾಸ-ಪರಂಪರೆ, ಭೌಗೋಳಿಕ, ಸಾಂಸ್ಕೃತಿಕ, ಸಾಹಿತ್ಯ, ಭಾಷೆ, ಕಲೆ, ಸಾಮಾನ್ಯ ಜ್ಞಾನ, ಕ್ರೀಡೆ, ಮಾನಸಿಕ ಸಾಮರ್ಥ್ಯ, ಪುಚಲಿತ ವಿದ್ಯಾಮಾನ ಇತ್ಯಾದಿ ವಿಷಯಗಳನ್ನೊಳಗೊಂಡಂತೆ ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡು (ಕನಿಷ್ಟ 50 ಬಹು ಆಯ್ಕೆಯ ಪ್ರಶ್ನೆಗಳು) ಉತ್ತರ ಸಹಿತ ಸಿದ್ಧಪಡಿಸಿ, ಮುಖ್ಯಶಿಕ್ಷಕರಿಂದ ಅನುಮೋದಿಸಿಕೊಂಡು ವಿದ್ಯಾರ್ಥಿಗಳಿಗೆ ಸ್ಪರ್ಧೆಯನ್ನು ಹಮ್ಮಿಕೊಳ್ಳುವುದು.
ಶಾಲಾ ಹಂತದ ಸ್ಪರ್ಧೆಯಲ್ಲಿ ಪಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿ ವಿಜೇತರಾದ 3 ವಿದ್ಯಾರ್ಥಿಗಳ ಹೆಸರನ್ನು ಶಿಕ್ಷಕರು ವಿದ್ಯಾರ್ಥಿಗಳ SATS ID, ಮೊಬೈಲ್ ಸಂಖ್ಯೆ ಭಾವಚಿತ್ರ ಹಾಗೂ ಬ್ಯಾಂಕ್ ಖಾತೆಯ ವಿವರವನ್ನು ಮೊಬೈಲ್/ಲ್ಯಾಪ್ ಟಾಪ್/ಕಂಪ್ಯೂಟರ್ನ್ನು ಬಳಸಿ ವಿದ್ಯಾವಾಹಿನಿ Portal ನಲ್ಲಿ ನೋಂದಣಿ ಮಾಡುವುದು ಹಾಗೂ ವಿದ್ಯಾವಾಹಿನಿ Portal ನಲ್ಲಿ ಪ್ರಮಾಣಪತ್ರವನ್ನು ಡೌನ್ಲೋಡ್ ಮಾಡಿ ವಿದ್ಯಾರ್ಥಿಗಳಿಗೆ ನೀಡಿ ಮಕ್ಕಳನ್ನು ಪ್ರೋತ್ಸಾಹಿಸುವುದು.
ಶಾಲಾ ಮಟ್ಟದಿಂದ ತಾಲ್ಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾದ ಸ್ಪರ್ಧಿಗಳಿಗೆ ನಿಗದಿಪಡಿಸಿದ ದಿನಾಂಕದಂದು ಶಾಲೆಯಲ್ಲಿ ಶಾಲಾ ಸಮಯದಲ್ಲಿ ಮುಖ್ಯ ಶಿಕ್ಷಕರ ಸಮ್ಮುಖದಲ್ಲಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸುವುದು. ಬಹುಲಾಗಿನ್ಗಳಿಗೆ ಅವಕಾಶವಿರುವುದಿಲ್ಲ. ತಾಲ್ಲೂಕು ಮಟ್ಟದ ಸ್ಪರ್ಧೆಯಲ್ಲಿ ಜೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ಪಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ 3 ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪಮಾಣ ಪತ್ರವನ್ನು ನೀಡಲಾಗುವುದು. ಬಹುಮಾನದ ಮೊತ್ತವನ್ನು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಹಿಸಲಾಗುವುದು.
ತಾಲ್ಲೂಕು ಹಂತದ ರಸಪ್ರಶ್ನೆ ಸ್ಪರ್ಧೆಯಲ್ಲಿ ಜೂನಿಯರ್ ಹಾಗೂ ಸೀನಿಯರ್ ವಿಭಾಗದಿಂದ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆ ಮಾಡಲಾಗುವುದು.
ತಾಲ್ಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ವಿಜೇತರಾದ ವಿದ್ಯಾರ್ಥಿಗಳು ಜಿಲ್ಲಾ ಹಂತದ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸುವುದು. ಜೂನಿಯರ್ ವಿಭಾಗದ ಜಿಲ್ಲಾ ಹಂತದ ರಸಪ್ರಶ್ನೆ ಸ್ಪರ್ಧೆಯನ್ನು ಆಯಾ ಜಿಲ್ಲಾ ಡಯಟ್ನ ಪ್ರಾಂಶುಪಾಲರ ನೇತೃತ್ವದಲ್ಲಿ ಹಮ್ಮಿಕೊಳ್ಳುವುದು ಹಾಗೂ ಸೀನಿಯರ್ ವಿಭಾಗದ ಜಿಲ್ಲಾ ಹಂತದ ರಸಪ್ರಶ್ನೆ ಸ್ಪರ್ಧೆಯನ್ನು ಬೆಂಗಳೂರಿನ ದೂರದರ್ಶನ ಚಂದನವಾಹಿನಿಯಲ್ಲಿ ಮುಖಾಮುಖಿಯಾಗಿ ಹಮ್ಮಿಕೊಳ್ಳುವುದು.
ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಜೂನಿಯರ್ ಹಾಗೂ ಸೀನಿಯರ್ ವಿಭಾಗದಿಂದ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ ವಿಜೇತರಿಗೆ ಪ್ರತ್ಯೇಕವಾಗಿ ನಗದು ಬಹುಮಾನ ಹಾಗೂ ಪುಮಾಣಪತ್ರ ನೀಡಲಾಗುವುದು.
ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಜೂನಿಯರ್ ಹಾಗೂ ಸೀನಿಯರ್ ವಿಭಾಗದಿಂದ ಪಥಮ ಸ್ಥಾನ ಪಡೆದು ವಿಜೇತರಾದ ವಿದ್ಯಾರ್ಥಿಗಳನ್ನು ವಿಭಾಗ ಮಟ್ಟದ ರಸಪ್ರಶ್ನೆ ಸ್ಪರ್ಧೆಗೆ ಆಯ್ಕೆ ಮಾಡಿಕೊಳ್ಳಲಾಗುವುದು.
ವಿಭಾಗ ಹಂತದ ರಸಪ್ರಶ್ನೆ ಸ್ಪರ್ಧೆ: ಜಿಲ್ಲಾ ಮಟ್ಟದಲ್ಲಿ ಜೂನಿಯರ್ ವಿಭಾಗದಿಂದ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ಆಯಾ ವಿಭಾಗದ ಡಯಟ್ನಲ್ಲಿ ಪ್ರಾಂಶುಪಾಲರ ನೇತೃತ್ವದಲ್ಲಿ ವಿಭಾಗ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸುವುದು. ಸೀನಿಯರ್ ವಿಭಾಗದ ವಿದ್ಯಾರ್ಥಿಗಳು ಬೆಂಗಳೂರಿನ ದೂರದರ್ಶನ ಚಂದನವಾಹಿನಿಯಲ್ಲಿ ಮುಖಾಮುಖಿಯಾಗಿ ವಿಭಾಗ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸುವುದು.
ವಿಭಾಗ ಮಟ್ಟದ ಸ್ಪರ್ಧೆಯಲ್ಲಿ ಜೂನಿಯರ್ ಹಾಗೂ ಸೀನಿಯರ್ ವಿಭಾಗದಿಂದ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ ವಿಜೇತರಿಗೆ ಪ್ರತ್ಯೇಕವಾಗಿ ನಗದು ಬಹುಮಾನ ಹಾಗೂ ಪ್ರಮಾಣಪತ್ರ ನೀಡಲಾಗುವುದು. ವಿಭಾಗ ಮಟ್ಟದ ಸ್ಪರ್ಧೆಯಲ್ಲಿ ಜೂನಿಯರ್ ಹಾಗೂ ಸೀನಿಯರ್ ವಿಭಾಗದಿಂದ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದು ವಿಜೇತರಾದ 4 ವಿಭಾಗದಿಂದ ಒಟ್ಟು 16 ವಿದ್ಯಾರ್ಥಿಗಳನ್ನು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಿಕೊಳ್ಳಲಾಗುವುದು. ರಾಜ್ಯ ಮಟ್ಟದ ಸ್ಪರ್ಧೆಯು ನಿಗದಿಪಡಿಸುವ ದಿನಾಂಕದಂದು ಮುಖಾಮುಖಿಯಾಗಿ ಕ್ವಿಜ್ ಮಾಸ್ಟರ್ ಮೂಲಕ ನಡೆಸಲಾಗುವುದು. ಸ್ಪರ್ಧಾನಿಯಮಗಳು: ಪ್ರಶ್ನೆಗಳು ಪಠ್ಯ ವಿಷಯವನ್ನು ಆಧರಿಸಿದ್ದು, ಗಣಿತ, ವಿಜ್ಞಾನ, ಭಾರತದ ಇತಿಹಾಸ- ಪರಂಪರೆ, ಭೌಗೋಳಿಕ, ಸಾಂಸ್ಕೃತಿಕ, ಸಾಹಿತ್ಯ ಭಾಷೆ, ಕಲೆ, ಕ್ರೀಡೆ ಹಾಗೂ ಸಾಮಾನ್ಯ ಜ್ಞಾನ ಇತ್ಯಾದಿ ವಿಷಯಗಳನ್ನು ಸಹ ಒಳಗೊಂಡಿರುತ್ತವೆ.
ಬ್ಲಾಕ್ ಹಂತದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಿಗೆ 30 ಬಹು ಆಯ್ಕೆ ಪ್ರಶ್ನೆಗಳಿಗೆ 15 ನಿಮಿಷಗಳ ಕಾಲಾವಕಾಶವನ್ನು ನೀಡಲಾಗಿದ್ದು, ಕಡಿಮೆ ಸಮಯದಲ್ಲಿ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಟಾಪರ್ಗಳ ಆಯ್ಕೆಯು ಸಂಪೂರ್ಣವಾಗಿ ಸಾಫ್ಟ್ ವೇರ್ ಸ್ವಯಂಚಾಲಿತವಾಗಿದೆ ಮತ್ತು ಯಾವುದೇ ಮಾನವ ಸಂವಹನವನ್ನು ಒಳಗೊಂಡಿಲ್ಲ.
ವಿದ್ಯಾರ್ಥಿಯು ಆನ್ಲೈನ್ನಲ್ಲಿ ಉತ್ತರಿಸಲು ಆಯ್ಕೆ ಮಾಡಿ ಕೊಂಡಿರುವ ಭಾಷೆಯಲ್ಲಿಯೇ (ಕನ್ನಡ/ಆಂಗ್ಲ) ಪ್ರಶ್ನೆಗಳು ಇರುತ್ತವೆ, ಸ್ಪರ್ಧೆಯ ಸಮಯದಲ್ಲಿ ಭಾಷೆ ಬದಲಾವಣೆಗೆ ಅವಕಾಶ ಇರುವುದಿಲ್ಲ.
• ನೋಂದಣಿಯ ನಂತರ ಸ್ಪರ್ಧೆಯ ರೂಪುರೇಷೆಗಳನ್ನು ತಿಳಿದುಕೊಳ್ಳಲು ವಿದ್ಯಾರ್ಥಿಗಳು ನಿಗದಿತ ದಿನಾಂಕದವರೆಗೆ ಟ್ರಯಲ್ ಆಧಾರದ ಮೇಲೆ ರಸಪ್ರಶ್ನೆಯನ್ನು ಭಾಗವಹಿಸಬಹುದು. ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಆಯಾ ಸುತ್ತುಗಳಲ್ಲಿ ಒಂದು ಬಾರಿ ಮಾತ್ರ
ಭಾಗವಹಿಸಬಹುದಾಗಿದೆ.
ಪ್ರತಿ ವಿದ್ಯಾರ್ಥಿಗೂ ಯಾದೃಚ್ಛಿಕ ವಶ್ನೆಗಳನ್ನು ಆಯ್ಕೆ ಮಾಡಲಾಗುತ್ತದೆ.
ಪ್ರತಿ ಸರಿಯಾದ ಉತ್ತರಕ್ಕೆ ಒಂದು ಅಂಕ, ತಪ್ಪು ಉತ್ತರಕ್ಕೆ 0 ಹಾಗೂ ಪ್ರಶ್ನೆಯನ್ನು ಬಿಟ್ಟು ಬಿಟ್ಟರೆ 0 ಅಂಕ ಎಂದು ಪರಿಗಣಿಸಲಾಗುತ್ತದೆ.
ಪ್ರತಿ ಪ್ರಶ್ನೆಗೆ ಉತ್ತರಿಸಲು ತೆಗೆದುಕೊಂಡ ಸಮಯವನ್ನು ಪರಿಗಣಿಸಲಾಗುವುದು, ಸ್ಪರ್ಧೆಯಲ್ಲಿ ಹಿಂದಿನ ಪ್ರಶ್ನೆಗೆ ಹೋಗಲು ಅವಕಾಶವಿರುವುದಿಲ್ಲ.
ಸ್ಪರ್ಧೆಯಲ್ಲಿ ತಾಂತ್ರಿಕ ಸಮಸ್ಯೆಗಳು ಸಂಭವಿಸಿದರೆ ಇಲಾಖೆ ಹೊಣೆಗಾರಿಕೆಯಾಗುವುದಿಲ್ಲ. ಯಾವುದೇ ತಾಂತ್ರಿಕ ದೋಷದಿಂದ ಸ್ಪರ್ಧೆಗೆ ಅಡ್ಡಿಯಾದರೆ ಅಭ್ಯರ್ಥಿಯು ಬಿಟ್ಟು ಹೋದ ಪ್ರಶ್ನೆಯಿಂದ ಮತ್ತೆ ಪುನರಾರಂಭಿಸಬಹುದು ಮತ್ತು ಉಳಿದ ಸಮಯವನ್ನು ರಸಪ್ರಶ್ನೆ ಸ್ಪರ್ಧೆಗೆ ಪರಿಗಣಿಸಿ ಲೆಕ್ಕಚಾರದ ಸಮಯವನ್ನು ಪ್ರಾರಂಭದಿಂದ ತೆಗೆದುಕೊಂಡು ಮೊದಲ 15 ನಿಮಿಷಗಳ ಕಾಲಾವಕಾಶವನ್ನು ಪರಿಗಣಿಸಲಾಗುವುದು.
ನಿಗದಿತ ವೇಳಾಪಟ್ಟಿಯಂತೆ ವಿದ್ಯಾರ್ಥಿಗಳು ರಸಪ್ರಶ್ನೆ ಸ್ಪರ್ಧೆಗೆ ಹಾಜರಾಗಬೇಕು. ಯಾವುದೇ ಕಾರಣದಿಂದ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿ ಸ್ಪರ್ಧೆಯಿಂದ ತಪ್ಪಿಸಿ ಕೊಂಡರೆ ನಂತರ ಯಾವುದೇ ಪರ್ಯಾಯ ಆಯ್ಕೆ ಇರುವುದಿಲ್ಲ.
ಸ್ಪರ್ಧೆಯಲ್ಲಿ ಭಾಗವಹಿಸಿರುವಾಗ ವಿದ್ಯಾರ್ಥಿಯು ಪರದೆಯನ್ನು ಬಿಡಬಾರದು ಅಥವಾ ಕಿಟಕಿಯನ್ನು ಮುಚ್ಚಬಾರದು ಹಾಗೂ ಯಾರ ಸಹಾಯವನ್ನು ಪಡೆಯಬಾರದು. (ಶಿಕ್ಷಕರು ಹಾಗೂ ಪೋಷಕರನ್ನೊಳಗೊಂಡಂತೆ) ಈ ಕಾರ್ಯಕ್ರಮವು ವಿದ್ಯಾರ್ಥಿಗಳ ಜ್ಞಾರ್ನಾಜನೆಯ ಬೆಳವಣಿಗೆಗೆ ಹಾಗೂ ಕಲಿಕೆಯಲ್ಲಿ ಆಸಕ್ತಿಯನ್ನು ವೃದ್ಧಿಸುವ ದೃಷ್ಟಿಯಿಂದ ಆಯೋಜಿಸಲಾಗಿರುತ್ತದೆ.
ಸ್ಪರ್ಧೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಹಾಗೂ ವಿವಿಧ ಹಂತಗಳಲ್ಲಿ ಫಲಿತಾಂಶವನ್ನು ಪರಿಶೀಲಿಸಲು ನಿಯಮಿತವಾಗಿ ವಿದ್ಯಾವಾಹಿನಿ ವೆಬ್ ಪೋರ್ಟಲ್ ಭೇಟಿ ನೀಡುವುದು. ಇಲಾಖೆಯಿಂದ ಪ್ರತ್ಯೇಕ ಸಂವಹನ ನಡೆಸುವುದಿಲ್ಲ.