ಬೆಂಗಳೂರು : 2024-25 ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ” ಪ್ರಶಸ್ತಿಗೆ ಆನ್-ಲೈನ್ ಮೂಲಕ ಅರ್ಜಿ ಆಹ್ವಾನಿಸಿರುವ ಬಗ್ಗೆ ಮತ್ತು ಸಂಪೂರ್ಣ ಪ್ರಕ್ರಿಯೆಯನ್ನು ಆನ್-ಲೈನ್ ಮುಖಾಂತರ ನಿರ್ವಹಿಸುವ ಬಗ್ಗೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ತರಗತಿ ಕೋಣೆಯಲ್ಲಿ ವಿಷಯ ಪಾಂಡಿತ್ಯದ ಜೊತೆಗೆ ಪೂರಕ ಪರಿಕರಗಳೊಂದಿಗೆ ಬೋಧನಾ ಚಟುವಟಿಕೆಗಳನ್ನು ಸಾದರಪಡಿಸಿ ಮಕ್ಕಳಲ್ಲಿ ಶಾಶ್ವತ ಮತ್ತು ಸಂತಸದಾಯಕ ಕಲಿಕೆಯನ್ನುಂಟು ಮಾಡುವ ಬಹುಮುಖ ವ್ಯಕ್ತಿತ್ವದ ಶಿಕ್ಷಕರನ್ನು, ಉಪನ್ಯಾಸಕರನ್ನು, ಮುಖ್ಯ ಶಿಕ್ಷಕರನ್ನು ಹಾಗೂ ಪ್ರಾಂಶುಪಾಲರನ್ನು ಗುರ್ತಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿ ವರ್ಷ ಸೆಪ್ಟೆಂಬರ್-05 ರಂದು ಕ್ರಮವಾಗಿ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರದಾನ ಮಾಡುವುದರ ಮೂಲಕ ಗೌರವಿಸುತ್ತಿವೆ.
ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಅಹರ್ನಿಶಿ ತೊಡಗಿಸಿ ಕೊಳ್ಳುವ ಹಲವು ಅತ್ಯುತ್ತಮ ಶಿಕ್ಷಕರು, ವಿಶೇಷ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಎಲೆ ಮರೆಯ ಕಾಯಿಯಂತೆ ಇದ್ದು, ಅಂತಹ ತೆರೆಮರೆಯ ಸಾಧಕರನ್ನು ಸ್ವಯಂಪ್ರೇರಿತವಾಗಿ ಗುರುತಿಸಿ ಸದರಿ ಪ್ರಶಸ್ತಿಗಳನ್ನು ಪ್ರದಾನ ಮಾಡಬೇಕೆನ್ನುವುದು ಸರ್ಕಾರದ ಮತ್ತು ಶಾಲಾ ಶಿಕ್ಷಣ ಇಲಾಖೆಯ ಆಶಯವಾಗಿರುತ್ತದೆ. ಇದರಿಂದಾಗಿ ರಾಜ್ಯದ ಶಿಕ್ಷಕ ವೃಂದ ಶೈಕ್ಷಣಿಕ ಚಟುವಟಿಕೆಗಳಲ್ಲಿ ಮತ್ತಷ್ಟು ಹುರುಪಿನಿಂದ ತೊಡಗಿಸಿಕೊಳ್ಳಲು ಪ್ರೇರೇಪಣೆಯನ್ನು ಮತ್ತು ಉತ್ತೇಜನವನ್ನು ಒದಗಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಸಕಾಲಿಕ ಕ್ರಮಗಳನ್ನು ವಹಿಸಬೇಕಾಗಿರುವುದು ಸಂಬಂಧಿಸಿದ ಇಲಾಖಾಧಿಕಾರಿಗಳ ಆದ್ಯ ಕರ್ತವ್ಯ ಹಾಗೂ ಪ್ರಮುಖ ಹೊಣೆಗಾರಿಕೆಯಾಗಿರುತ್ತದೆ. ಅದರಂತೆ, ಸದರಿ ಅಂಶಗಳ ಕುರಿತು ಈ ಸುತ್ತೋಲೆಯಲ್ಲಿರುವ ಮಾರ್ಗದರ್ಶಿ ಸೂತ್ರಗಳನ್ನು ಪರಿಪಾಲಿಸಲು ತಿಳಿಸಿದೆ.
ಪ್ರಯುಕ್ತ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಿಕ್ಷಣ ಮಂತ್ರಾಲಯ, ಭಾರತ ಸರ್ಕಾರ, ನವದೆಹಲಿ ಇವರು ಅರ್ಹ ಶಿಕ್ಷಕರನ್ನು, ಉಪನ್ಯಾಸಕರನ್ನು, ಮುಖ್ಯ ಶಿಕ್ಷಕರನ್ನು ಹಾಗೂ ಪ್ರಾಂಶುಪಾಲರನ್ನು ರಾಷ್ಟ್ರ ಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆ ಮಾಡಲು 2018 ರಿಂದ ಜಾರಿಗೆ ತಂದಿರುವ ಆನ್-ಲೈನ್ ವ್ಯವಸ್ಥೆಯ ಮಾದರಿಯಲ್ಲಿಯೇ, ರಾಜ್ಯದಲ್ಲಿಯೂ ಸಹ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಅರ್ಹ ಶಿಕ್ಷಕರನ್ನು, ವಿಶೇಷ ಶಿಕ್ಷಕರನ್ನು ಹಾಗೂ ಮುಖ್ಯ ಶಿಕ್ಷಕರನ್ನು ಆಯ್ಕೆ ಮಾಡಲು ಆನ್-ಲೈನ್ ಮೂಲಕ ಅರ್ಜಿಗಳನ್ನು ಸ್ವೀಕರಿಸಿ, ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್-ಲೈನ್ ಮೂಲಕವೇ ನಿರ್ವಹಿಸಲು ಉಲ್ಲೇಖ-01 ರಂತೆ ಸರ್ಕಾರವು ಅನುಮತಿಯನ್ನು ನೀಡಿರುತ್ತದೆ. ಈ ಪ್ರಕಾರ ಕಳೆದ ಐದು ವರ್ಷಗಳಿಂದ ಸದರಿ ಪ್ರಕ್ರಿಯೆಯನ್ನು ನಿರ್ವಹಿಸಲಾಗುತ್ತಿದೆ.
ಈ ಪ್ರಶಸ್ತಿಗೆ ಆಯ್ಕೆ ಪ್ರಕ್ರಿಯೆಯನ್ನು ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಕೈಗೊಳ್ಳಲು ಉಲ್ಲೇಖ-02 ರಿಂದ 05 ರವರೆಗಿನ ಸರ್ಕಾರದ ಪತ್ರಗಳಂತೆ ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದ ಆಯ್ಕೆ ಸಮಿತಿಗಳನ್ನು ಕೆಳಕಂಡಂತೆ ರಚಿಸಲಾಗಿದೆ ಮತ್ತು ಪುನರ್-ರಚಿಸಲಾಗಿದೆ.
ಅದರಂತೆ. 2024-25 ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಅರ್ಹ ಶಿಕ್ಷಕರು, ವಿಶೇಷ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರು ಶಾಲಾ ಶಿಕ್ಷಣ ಇಲಾಖೆಯ ಆನ್-ಲೈನ್ ಪೋರ್ಟಲ್ http://www.schooleducation.kar.nic.in ಮೂಲಕ ಅರ್ಜಿಯನ್ನು ಸಲ್ಲಿಸುವ ಪ್ರಕ್ರಿಯೆಯಿಂದ ಪ್ರಾರಂಭವಾಗಿ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಆಯ್ಕೆ ಸಮಿತಿಗಳ ಶಿಫಾರಸ್ಸು ಪ್ರಕ್ರಿಯೆ ಹಾಗೂ ರಾಜ್ಯ ಮಟ್ಟದ ಆಯ್ಕೆ ಸಮಿತಿ ಕೈಗೊಳ್ಳುವ ಅಂತಿಮ ಆಯ್ಕೆಪಟ್ಟಿಯವರೆಗಿನ ಎಲ್ಲಾ ಹಂತಗಳನ್ನು / ಪ್ರಕ್ರಿಯೆಗಳನ್ನು ಕೆಳಕಂಡ ವೇಳಾಪಟ್ಟಿಯ ಅನುಸಾರ ಸಂಪೂರ್ಣವಾಗಿ ಆನ್-ಲೈನ್ ಮೂಲಕ ನಡೆಸಲು ಉದ್ದೇಶಿಸಲಾಗಿದೆ.