ತೂಕವನ್ನು ಸುಲಭ ರೀತಿಯಲ್ಲಿ ಕಡಿಮೆ ಮಾಡಿಕೊಳ್ಳಲು ಸರಳವಾದ ಉಪಾಯವೆಂದರೆ ಅದು, ತಾಜಾ ರಸಭರಿತ ಹಣ್ಣುಗಳನ್ನು ಸೇವನೆ ಮಾಡುವುದು.
ಬೇಸಿಗೆ ಕಾಲವು ಹಣ್ಣುಗಳನ್ನು ಅಥವಾ ಹಣ್ಣಿನ ರಸವನ್ನು ಯಥೇಚ್ಚವಾಗಿ ಸೇವನೆ ಮಾಡಲು ಪ್ರೇರೇಪಿಸುತ್ತದೆ. ಬೇಸಿಗೆ ಕಾಲದಲ್ಲಿ ವೈವಿಧ್ಯಮಯವಾದ ಹಣ್ಣುಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ನಾರಿನಂಶ ಹೆಚ್ಚಾಗಿರುವ ಹಣ್ಣುಗಳನ್ನು ಸೇವನೆ ಮಾಡುವುದರಿಂದ ತೂಕ ಇಳಿಕೆ ಮಾಡಿಕೊಳ್ಳಲು ಸುಲಭವಾದ ದಾರಿಯಾಗಿದೆ.
ಏಕೆಂದರೆ ಇಂತಹ ಹಣ್ಣುಗಳು ಪದೇ ಪದೇ ಹಸಿವಾಗುವುದನ್ನು ತಪ್ಪಿಸುವುದರ ಜೊತೆಗೆ ಕ್ಯಾಲೋರಿ ಭರಿತವಾದ ಆಹಾರವನ್ನು ತಿನ್ನುವುದನ್ನು ನಿಯಂತ್ರಿಸುತ್ತದೆ. ಒಟ್ಟಾರೆ ಈ ಕೆಳಗಿನ ಹಣ್ಣುಗಳು ನಿಮ್ಮ ತೂಕ ಇಳಿಕೆಗೆ ಸಹಾಯಕಾರಿಯಾಗಿದೆ. ಕೆಂಪು ಬಣ್ಣದ ರಸಭರಿತ ಕಲ್ಲಂಗಡಿ ಹಣ್ಣು ಬೇಸಿಗೆಯ ದಾಹವನ್ನು ತಣಿಸುತ್ತದೆ. ಈ ಋತುಮಾನದಲ್ಲಿ ಹೆಚ್ಚಾಗಿ ಕಲ್ಲಂಗಡಿ ಹಣ್ಣನ್ನು ಸೇವನೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಕಲ್ಲಂಗಡಿಯನ್ನು ‘ಬೇಸಿಗೆಯ ಹಣ್ಣು’ ಎಂದೇ ಕರೆಯಲಾಗುತ್ತದೆ.
ಇದು ದೇಹವನ್ನು ರಿಫ್ರೆಶ್‌ಗೊಳಿಸುವುದು ಮಾತ್ರವಲ್ಲದೆ, ತಂಪಾಗಿಸುತ್ತದೆ. ಕಲ್ಲಂಗಡಿಯಲ್ಲಿ ಫೈಬರ್, ವಿಟಮಿನ್ ಸಿ, ವಿಟಮಿನ್ ಎ, ಮೆಗ್ನೀಸಿಯಮ್, ಪೊಟ್ಯಾಶಿಯಮ್ ಮತ್ತು ಆಂಟಿಆಕ್ಸಿಡೆಂಟ್, ಲೈಕೋಪೀನ್‌ಗಳಿಂದ ಸಮೃದ್ಧವಾಗಿದೆ. ಇದರಲ್ಲಿ ಸುಮಾರು 90% ಭಾಗದಷ್ಟು ನೀರು ಮತ್ತು ನಾರಿನಂಶ ತುಂಬಿರುತ್ತದೆ. ಹೆಚ್ಚಾಗಿ ನೀರಿನಂಶ ಇರುವ ಹಣ್ಣು ಮತ್ತು ತರಕಾರಿಗಳನ್ನು ಸೇವನೆ ಮಾಡಿದಾಗ ಹೊಟ್ಟೆ ಹಸಿವು ಕಡಿಮೆಯಾಗುತ್ತದೆ.
ಸೌತೆಕಾಯಿ ಬೇಸಿಗೆಯಲ್ಲಿ ಅಚ್ಚು ಮೆಚ್ಚಿನ ತರಕಾರಿಯಾಗಿದೆ. ನಿಮಗೆ ತಿಳಿದಿರಲಿ, ಸೌತೆಕಾಯಿಯನ್ನು ನಿಮ್ಮ ಡಯಟ್ ಚಾರ್ಟ್‌ನಲ್ಲಿ ಸೇರಿಸುವುದರಿಂದ ತೂಕ ನಷ್ಟ ಮಾಡಿಕೊಳ್ಳಬಹುದು. ಸಲಾಡ್ ಅಥವಾ ಸ್ಮೂಥಿಯಂತಹ ಅನೇಕ ಆಹಾರಗಳಲ್ಲಿ ಮಿಕ್ಸ್ ಮಾಡಿ ಸೇವನೆ ಮಾಡಬಹುದು. ವಿಶೇಷವಾಗಿ ಹಸಿರು ನೈಸರ್ಗಿಕ ಹಣ್ಣು ಮತ್ತು ತರಕಾರಿಗಳು ದೇಹವನ್ನು ತಂಪಾಗಿಸುವ ಗುಣಗಳನ್ನು ಹೊಂದಿರುತ್ತವೆ. ಕಲ್ಲಂಗಡಿ ಹಣ್ಣಿನಂತೆ ಸೌತೆಕಾಯಿಯಲ್ಲಿಯೂ 95% ನಷ್ಟು ನೀರು ತುಂಬಿರುತ್ತದೆ. ಕ್ಯಾಲೋರಿ ಬಗ್ಗೆ ಹೇಳುವುದಾದರೆ ಅತಿ ಕಡಿಮೆ ಹೊಂದಿದೆ. ಪ್ರತಿನಿತ್ಯ ನಿಮ್ಮ ಆಹಾರದಲ್ಲಿ ಸೌತೆಕಾಯಿಯನ್ನು ಹೊಂದಿದ್ದಾಗ ಗಮನಾರ್ಹವಾಗಿ ತೂಕವನ್ನು ಕಳೆದುಕೊಳ್ಳಬಹುದಾಗಿದೆ.
ಕಿತ್ತಳೆ ಹಣ್ಣು ಆರೋಗ್ಯ, ತೂಕ ಮತ್ತು ಚರ್ಮಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಕಿತ್ತಳೆ ಹಣ್ಣು ಸಿಟ್ರಸ್ ಹಣ್ಣಿನ ಜಾತಿಗೆ ಸೇರಿದ್ದು, ಆರೋಗ್ಯಕ್ಕೆ ಬಹಳ ಉತ್ತಮವಾದ ಪರಿಣಾಮವನ್ನು ನೀಡುತ್ತದೆ.
ಈ ಹಣ್ಣು ಪೊಟ್ಯಾಶಿಯಮ್ ಮತ್ತು ವಿಟಮಿನ್ ಸಿ ಶ್ರೀಮಂತವಾದ ಮೂಲವನ್ನು ಹೊಂದಿದೆ. ಇದರಲ್ಲಿರುವ ವಿಟಮಿನ್ ಸಿ ರೋಗನಿರೋಧಕ ಶಕ್ತಿ ಮತ್ತು ಚಯಾಪಚಯವನ್ನು ಹೆಚ್ಚಿಸಲು ಉತ್ತೇಜಿಸುತ್ತದೆ. ಕಿತ್ತಳೆ ಹಣ್ಣಿನಲ್ಲಿ ಕೂಡ ಸುಮಾರು 88 % ನಷ್ಟು ನೀರಿನಂಶ ಹೊಂದಿದ್ದು, ದೇಹವನ್ನು ಈ ಬೇಸಿಗೆಯ ಸಮಯದಲ್ಲಿ ಹೈಡ್ರೇಟ್ ಮಾಡುತ್ತದೆ.
ಕಿತ್ತಳೆ ಹಣ್ಣಿನಲ್ಲಿರುವ ಪೊಟ್ಯಾಶಿಯಮ್ ಬೇಸಿಗೆಯ ತಾಪಾಮಾನದಿಂದ ಉಂಟಾಗುವ ಸ್ನಾಯು ಸೆಳೆತಕ್ಕೆ ಚಿಕಿತ್ಸೆ ನೀಡುತ್ತದೆ. ಇನ್ನು ಕಿತ್ತಳೆ ತೂಕ ಇಳಿಕೆಗೆ ಪ್ರಯೋಜನಕಾರಿ. ಕಿತ್ತಳೆ, ಕಲ್ಲಂಗಡಿ, ಸೌತೆಕಾಯಿಗಳಿಗೆ ಹೋಲಿಸಿದರೆ ಕರ್ಬೂಜ ಹಣ್ಣಿನಲ್ಲಿ ಕೂಡ ನೀರಿನಂಶದ ಕೊರತೆ ಇಲ್ಲ. ಇದರಲ್ಲಿ ಸಾಕಷ್ಟು ಪೋಷಕಾಂಶಗಳು ಮತ್ತು ನೀರಿನಂಶದಿಂದ ತುಂಬಿರುವ ಕಾರಣ ನಿಸ್ಸಂದೇಹವಾಗಿ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕರ್ಬೂಜ ಹಣ್ಣಿನಲ್ಲಿ ವಿಟಮಿನ್ ಎ, ಬಿ, ಕೆ, ಸಿ ಮತ್ತು ಇತರ ಖನಿಜಗಳಾದ ಸತು ಮತ್ತು ತಾಮ್ರದಲ್ಲಿ ಸಮೃದ್ಧವಾಗಿರುವುದರಿಂದ ಕರ್ಬೂಜ ಅನೇಕ ಆರೋಗ್ಯ ಸಮಸ್ಯೆಗಳನ್ನು ಹುಟ್ಟುವ ಮೊದಲೇ ಕಡಿವಾಣ ಹಾಕುತ್ತದೆ. ಪೀಚ್ ಹಣ್ಣು ಕೂಡ ರುಚಿಕರವಾದ ಹಣ್ಣುಗಳಲ್ಲಿ ಒಂದಾಗಿದೆ. ನಿಮ್ಮ ತೂಕ ಇಳಿಕೆಗೆ ಈ ಹಣ್ಣು ನಿಮಗೆ ವರದಾನವಾಗಲಿದೆ. ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ ಈ ಪೀಚ್ ಹಣ್ಣು, ಸುಮಾರು 89% ರಷ್ಟು ನೀರು ಹೊಂದಿದೆ. ಇದು ಪದೇ ಪದೇ ಹಸಿವಿನ ಬಯಕೆಯನ್ನು ನಿಗ್ರಹಿಸುತ್ತದೆ.
ಇದರಲ್ಲಿ ವಿಟಮಿನ್ ಎ, ಸಿ. ಕಬ್ಬಿಣ ಸತು ಹೊಂದಿದ್ದು, ಆರೋಗ್ಯಕ್ಕೆ ಉತ್ತಮವಾದ ಕೊಡುಗೆಯನ್ನು ನೀಡುತ್ತದೆ. ನಿಮ್ಮ ಡಯಟ್ ಚಾರ್ಟ್‌ನಲ್ಲಿ ತಪ್ಪದೇ ಪೀಚ್ ಹಣ್ಣನ್ನು ಸೇವನೆ ಮಾಡಿ. ಇದು ನಿಮ್ಮ ತೂಕ ಇಳಿಕೆಗೆ ಸಹಾಯ ಮಾಡಬಲ್ಲದು.