ಬೆಂಗಳೂರು : ರಾಜ್ಯದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆಯಲ್ಲಿನ ಸೋರಿಕೆಯನ್ನು ತಡೆಯಲು ‘ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್ಸ್’ ಎಂಬ ಮೊಬೈಲ್ ಅಪ್ಲಿಕೇಶನ್ ವ್ಯವಸ್ಥೆಯನ್ನು ಪರಿಚಯಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಿರ್ಧರಿಸಿದೆ.
ಗ್ರಾಹಕರಿಗೆ ಪಡಿತರ ವಿತರಿಸುವಾಗ ತೂಕದಲ್ಲಿ ಮೋಸವಾಗುವುದನ್ನು ತಡೆಯಲು ಕೇಂದ್ರ ಸರಕಾರದ ಸೂಚನೆ ಮೇರೆಗೆ ತೂಕದ ಯಂತ್ರವನ್ನು ಬಯೋಮೆಟ್ರಿಕ್‌ಗೆ ಸಂಯೋಜಿಸಲು ನಿರ್ಧರಿಸಲಾಗಿದೆ. ಇದರಿಂದ ತೂಕದಲ್ಲಿ ವ್ಯತ್ಯಾಸವಾದರೆ ಗ್ರಾಹಕರಿಗೆ ಗೊತ್ತಾಗಲಿದೆ. ಮೊಬೈಲ್ ಅಪ್ಲಿಕೇಶನ್, ಸರಕಾರದ ಕೇಂದ್ರೀಕೃತ ದತ್ತಾಂಶದೊಂದಿಗೆ ಸಂಪರ್ಕ ಹೊಂದಿರುತ್ತದೆ.
ಈ ಕೇಂದ್ರೀಕೃತ ವ್ಯವಸ್ಥೆಯಿಂದ ಫಲಾನುಭವಿಗಳು ರಾಜ್ಯದ ಯಾವುದೇ ಪ್ರದೇಶದಲ್ಲಿ ಪಡಿತರ ಪಡೆಯುವುದನ್ನು ಖಚಿತಪಡಿಸುತ್ತದೆ. ಹೀಗಾಗಿ ಕರ್ನಾಟಕದಲ್ಲಿ ಅಳವಡಿಸಲು ತೀರ್ಮಾನಿಸಲಾಗಿದ್ದು, ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಅನುಕೂಲವಾಗುವಂತೆ ಸರಕಾರ ಹೊಸ ಮೊಬೈಲ್ ಅಪ್ಲಿಕೇಶನ್ ಪರಿಚಯಿಸಲು ಮುಂದಾಗಿದೆ.








