ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲೇ ಇ-ಸ್ವತ್ತು ಸೌಲಭ್ಯಕ್ಕೆ ಸರ್ಕಾರ ಚಾಲನೆ ನೀಡಿದೆ. ಈ ಮೂಲಕ ರಾಜ್ಯ ಸರ್ಕಾರವು ಪಾರದರ್ಶಕ ಆಡಳಿತದತ್ತ ಮಹತ್ವದ ಹೆಜ್ಜೆಯನ್ನು ಇರಿಸಲಾಗಿದೆ.
ಗ್ರಾಮೀಣ ಆಡಳಿತವನ್ನು ಡಿಜಿಟಲ್‌ಗೊಳಿಸುವ ಮಹತ್ತರ ಹೆಜ್ಜೆಯಾಗಿ ರಾಜ್ಯ ಸರ್ಕಾರ “ಇ-ಸ್ವತ್ತು” ಯೋಜನೆಗೆ ಅಧಿಕೃತ ಚಾಲನೆ ನೀಡಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ಕ್ಕೆ ತಿದ್ದುಪಡಿ ತಂದು, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಎಲ್ಲಾ ಆಸ್ತಿಗಳಿಗೆ ಡಿಜಿಟಲ್ ಪ್ರಮಾಣಪತ್ರ ವಿತರಿಸುವ ವ್ಯವಸ್ಥೆ ಜಾರಿಯಾಗಿದೆ.
ಹೊಸ ನಿಯಮಾವಳಿಗಳ ಪ್ರಕಾರ, ನಿರಾಕ್ಷೇಪಣ ಪತ್ರ (No Objection Letter-NOC), ಪರವಾನಗಿ, ತೆರಿಗೆ ಹಾಗೂ ಶುಲ್ಕಗಳ ನಿಗದಿಯನ್ನು ವೈಜ್ಞಾನಿಕ ರೀತಿಯಲ್ಲಿ ನಿಗದಿಪಡಿಸಲಾಗಿದ್ದು, ರಾಜ್ಯದ 95.75 ಲಕ್ಷಕ್ಕೂ ಅಧಿಕ ಆಸ್ತಿಗಳಿಗೆ “ಇ-ಸ್ವತ್ತು” ಪ್ರಮಾಣಪತ್ರ ನೀಡುವ ದಾರಿಯನ್ನು ಸರ್ಕಾರ ತೆರೆದಿದೆ. ಹೊಸ ತಂತ್ರಾಂಶದ ಅಭಿವೃದ್ಧಿಯು ಹದಿನೈದು ದಿನಗಳೊಳಗೆ ಪೂರ್ಣಗೊಳ್ಳಲಿದ್ದು, ಗ್ರಾಮೀಣ ನಾಗರಿಕರು ನೇರವಾಗಿ ಆನ್‌ಲೈನ್ ಮೂಲಕ ಈ ಸೇವೆಯನ್ನು ಪಡೆಯಲು ಸಾಧ್ಯವಾಗಲಿದೆ.
ತೆರಿಗೆ ಲೆಕ್ಕಾಚಾರ ವಿಧಾನವನ್ನು ಸರಳಗೊಳಿಸಿರುವ ಸರ್ಕಾರ, ಇ-ಸ್ವತ್ತು ನಮೂನೆ ವಿತರಣೆ ಅವಧಿಯನ್ನು ಹಿಂದಿನ 45 ದಿನಗಳಿಂದ ಕೇವಲ 15 ದಿನಗಳಿಗೆ ಇಳಿಸಿದೆ. ನಿರ್ದಿಷ್ಟ ಅವಧಿಯಲ್ಲಿ ಅಧಿಕಾರಿಗಳಿಂದ ಅನುಮೋದನೆ ಲಭಿಸದಿದ್ದರೆ, ಸಿಸ್ಟಂ ಸ್ವಯಂಚಾಲಿತವಾಗಿ ಅನುಮೋದನೆ ನೀಡುವ ವ್ಯವಸ್ಥೆ ಅಳವಡಿಸಲಾಗಿದೆ.
2025-26 ನೇ ಸಾಲಿನ ಬಜೆಟ್‌ನ 272ನೇ ಕಂಡಿಕೆಯಲ್ಲಿ ಘೋಷಿಸಲಾದಂತೆ, ಗ್ರಾಮ ಪಂಚಾಯತ್ ವ್ಯವಸ್ಥೆಯನ್ನು ಬಲಪಡಿಸಿ, ಗ್ರಾಮೀಣ ಜನತೆಗೆ ಪಾರದರ್ಶಕ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆ ಕೈಗೊಳ್ಳಲಾಗಿದೆ. ತಿದ್ದುಪಡಿಗಳ ಪ್ರಕಾರ 199(ಬಿ) ಹಾಗೂ 199(ಸಿ) ಪ್ರಕ್ರಿಯೆಗಳನ್ನು ಸೇರಿಸಲಾಗಿದ್ದು, ಇವು ಸ್ವತ್ತುಗಳಿಗೆ ಖಾತಾ (PID) ವಿತರಣೆಯ ಜೊತೆಗೆ, ಪರಿವರ್ತಿತ ಹಾಗೂ ಅಪರೂಪದ ಬಡಾವಣೆಗಳ ತೆರಿಗೆ ನಿಯಮಗಳಿಗೂ ಸ್ಪಷ್ಟತೆ ನೀಡುತ್ತವೆ.
ಹೊಸ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು – 2025 ಅಧಿಸೂಚನೆಯಿಂದ ಹಳೆಯ 2021ರ ನಿಯಮಗಳನ್ನು ಹಿಂತೆಗೆದುಕೊಳ್ಳಲಾಗಿದೆ. ಇದರಡಿ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಎಲ್ಲ ಆಸ್ತಿಗಳ ಕರಡು ದಾಖಲೆಗಳನ್ನು ಸಾರ್ವಜನಿಕರ ಪರಿಶೀಲನೆಗೆ ತಂತ್ರಾಂಶದ ಮೂಲಕ ಲಭ್ಯ ಮಾಡಿಸಲಾಗುತ್ತದೆ. ನಾಗರಿಕರು ತಮ್ಮ ಆಸ್ತಿ ಮಾಹಿತಿಯನ್ನು ತಿದ್ದುಪಡಿಸಿಕೊಳ್ಳಲು ಹಾಗೂ ತೆರಿಗೆ ಪಾವತಿಸಿ ನವೀಕೃತ ದಾಖಲೆ ಪಡೆಯಲು ಅವಕಾಶ ಸಿಕ್ಕಿದೆ.
ಈ ಕ್ರಮದಿಂದ ಗ್ರಾಮ ಪಂಚಾಯತಿಗಳ ಸ್ವಂತ ಸಂಪನ್ಮೂಲ ವೃದ್ಧಿಯಾಗುವುದರೊಂದಿಗೆ, ಗ್ರಾಮೀಣ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಹಣ ಲಭ್ಯವಾಗಲಿದೆ. ತೆರಿಗೆ ಅಥವಾ ಶುಲ್ಕ ನಿಗದಿ ಕುರಿತ ವಿವಾದಗಳ ಕುರಿತು ಉಪ ಕಾರ್ಯದರ್ಶಿ (ಅಭಿವೃದ್ಧಿ) ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕರಿಗೆ ಕ್ರಮವಾಗಿ ಮೇಲ್ಮನವಿಯ ಅವಕಾಶ ಕಲ್ಪಿಸಲಾಗಿದೆ.
ರಾಜ್ಯ ಸರ್ಕಾರವು ಡಿಜಿಟಲ್ ವ್ಯವಸ್ಥೆಯ ಮೂಲಕ ಪಾರದರ್ಶಕತೆ, ವೇಗ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸುವ ಈ ಕ್ರಮವು “ಗ್ರಾಮದಿಂದಲೇ ಶಕ್ತಿ – ಗ್ರಾಮದಿಂದಲೇ ಅಭಿವೃದ್ಧಿ” ಎಂಬ ಧ್ಯೇಯವಾಕ್ಯವನ್ನು ಅರ್ಥಪೂರ್ಣಗೊಳಿಸುವತ್ತದ ನೂತನ ಪ್ರಯತ್ನವಾಗಿದೆ.