ಬೆಂಗಳೂರು: ಎಂ.ಕೆ. ಗಣಪತಿ, ಡಿವೈಎಸ್ಪಿ, (ಇಲಾಖಾ ವಿಚಾರಣೆ), ಐಜಿಪಿ ಕಛೇರಿ, ಪಶ್ಚಿಮ ವಲಯ, ಮಂಗಳೂರು ಇವರು ಮಡಿಕೇರಿಯ ವಿನಾಯಕ ಲಾಡ್, ಕೊಠಡಿ ಸಂಖ್ಯೆ: 315ರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ 2016ನೇ ಜುಲೈ 07 ರಂದು ಮರಣ ಹೊಂದಿರುವ ಬಗ್ಗೆ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಗಿತ್ತು ಹಾಗೂ ಮುಖ್ಯಮಂತ್ರಿಯವರ ಆದೇಶದನ್ವಯ ಈ ಪ್ರಕರಣದ ತನಿಖೆ ನಡೆಸಲು ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಕೆ.ಎನ್.ಕೇಶವನಾರಾಯಣ ಇವರ ನೇತೃತ್ವದಲ್ಲಿ ಏಕ ಸದಸ್ಯ ವಿಚಾರಣಾ ಆಯೋಗವನ್ನು ನೇಮಿಸಲಾಗಿತ್ತು.
ವಿಚಾರಣಾ ಆಯೋಗವು 2018 ನೇ ಫೆಬ್ರವರಿ 26 ರಂದು ಸರ್ಕಾರಕ್ಕೆ ವಿಚಾರಣಾ ವರದಿಯನ್ನು ಸಲ್ಲಿಸಿತ್ತು. ಸದರಿ ವಿಚಾರಣಾ ಆಯೋಗದ ವರದಿಯಲ್ಲಿನ ಸಂಪೂರ್ಣ 08 ಭಾಗಗಳ ಕುರಿತು ಅಧ್ಯಯನ ನಡೆಸಿ ಸದರಿ ವರದಿಯಲ್ಲಿನ ಎಲ್ಲಾ ಅಂಶಗಳು ಹಾಗು ಶಿಫಾರಸ್ಸುಗಳನ್ನು ಪರಿಶೀಲಿಸಿ ಅಧ್ಯಯನ ವರದಿಯನ್ನು ನೀಡಲು ಸರ್ಕಾರವು ಎಂ.ಕೆ.ಶ್ರೀವಾಸ್ತವ್, ಐಪಿಎಸ್ ನಿವೃತ್ತ ಪೊಲೀಸ್
ಮಹಾನಿರ್ದೇಶಕರು ಇವರನ್ನು ನೇಮಿಸಲಾಗಿತ್ತು.
ಸದರಿ ಅಧ್ಯಯನ ವರದಿಯ ಆಧಾರದಲ್ಲಿ ಕೆ.ಎನ್. ಕೇಶವ ನಾರಾಯಣ, ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು, ಇವರ ನೇತೃತ್ವದ ಏಕ ಸದಸ್ಯ ವಿಚಾರಣಾ ಆಯೋಗದ ವರದಿ ಹಾಗೂ ಶಿಫಾರಸ್ಸುಗಳ ಮೇಲೆ ಅಂತಿಮ ತೀರ್ಮಾನಕ್ಕೆ ಬರಲು ಸರ್ಕಾರವು ನಿರ್ಧರಿಸಿತ್ತು.
ಪ್ರಸ್ತುತ 2025ನೇ ಮೇ 27 ರಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕರಾದ ಎಂ.ಕೆ. ಶ್ರೀವಾಸ್ತವ್ ಐ.ಪಿ.ಎಸ್ ಇವರು ಸರ್ಕಾರಕ್ಕೆ ಅಧ್ಯಯನ ವರದಿಯನ್ನು ಸಲ್ಲಿಸಿರುತ್ತಾರೆ.
ಕೆ.ಎನ್. ಕೇಶವ ನಾರಾಯಣ, ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು, ಇವರ ನೇತೃತ್ವದ ಏಕ ಸದಸ್ಯ ವಿಚಾರಣಾ ಆಯೋಗದ ವರದಿಯಲ್ಲಿ ಈ ಹಿಂದಿನ ಗೃಹ ಸಚಿವರಾದ ಕೆ.ಜಿ.ಜಾರ್ಜ್ ಹಾಗೂ ಎ.ಎಂ. ಪ್ರಸಾದ್. ಐಪಿಎಸ್, ಆಗಿನ ಇನ್ಸ್‍ಪೆಕ್ಟರ್ ಜನರಲ್ ಆಫ್ ಪೊಲೀಸ್ ಪಶ್ಚಿಮ ವಲಯ ಪ್ರಣವ್ ಮೊಹಾಂತಿ, ಐಪಿಎಸ್ ಇವರುಗಳ ವಿರುದ್ಧ ದಿವಂಗತ ಗಣಪತಿಯವರು ಸಂದರ್ಶನದಲ್ಲಿ ಆರೋಪಿಸಿರುವುದನ್ನು ಉದ್ಘರಿಸಿ ಸದರಿಯವರ ಆತ್ಮಹತ್ಯೆಗೆ ಇವರುಗಳು ಕಾರಣವಲ್ಲವೆಂಬ ಅಭಿಪ್ರಾಯವನ್ನು ಆಯೋಗವು ಸ್ಪಷ್ಟಪಡಿಸಿದೆ.
ಆದರೆ, ತನಿಖಾ ಕ್ರಮದಲ್ಲಿ ಕೆಲವು ನ್ಯೂನತೆಗಳು ಕಂಡುಬಂದಿರುವುದಾಗಿ ಆಯೋಗವು ವಿವರಿಸಿರುತ್ತದೆ.
ಎಂ.ಕೆ.ಶ್ರೀವಾಸ್ತವ್, ಐಪಿಎಸ್ ನಿವೃತ್ತ ಪೊಲೀಸ್ ಮಹಾನಿರ್ದೇಶಕರು ಇವರು ಸರ್ಕಾರಕ್ಕೆ ಸಲ್ಲಿಸಿರುವ ಅಧ್ಯಯನ ವರದಿಯಲ್ಲಿ ತನಿಖಾ ಕ್ರಮಗಳ ಬಗ್ಗೆ, ವಿಚಾರಣಾ ಆಯೋಗವು ಮಾಡಿರುವ ಆಕ್ಷೇಪಣೆಗಳನ್ನು ಸಿ.ಬಿ.ಐ. ಸಲ್ಲಿಸಿರುವ ವರದಿಯನ್ನು ಮಾನ ಕರ್ನಾಟಕ ಉಚ್ಚ ನ್ಯಾಯಾಲಯವು ಮಾನ್ಯ ಮಾಡಿರುವುದರಿಂದ ಮತ್ತು ಮಾನ್ಯ ಸರ್ವೋಚ್ಚ ನ್ಯಾಯಾಲಯವು ಎಸ್.ಎಲ್.ಪಿ. ಯಲ್ಲಿ. ಸಿ.ಬಿ.ಐ. ಪ್ರಕರಣವನ್ನು ಮುಕ್ತಾಯ ಮಾಡಿರುವುದನ್ನು ಎತ್ತಿ ಹಿಡಿದಿರುವುದರಿಂದ, ಅಧಿಕಾರಿಗಳ ವಿರುದ್ಧದ ಇಲಾಖಾ ವಿಚಾರಣೆಯ ಶಿಫಾರಸ್ಸನ್ನು ಒಪ್ಪುವ ಅಗತ್ಯವಿಲ್ಲವೆಂದು ಅಧ್ಯಯನ ವರದಿಯಲ್ಲಿ ತಿಳಿಸಲಾಗಿರುತ್ತದೆ.
ಈ ಹಿನ್ನೆಲೆಯಲ್ಲಿ ಕೆ.ಎನ್. ಕೇಶವ ನಾರಾಯಣ, ಮಾನ್ಯ ಕರ್ನಾಟಕ ಉಚ್ಚ, ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು ಇವರ ವಿಚಾರಣಾ ವರದಿಯನ್ನು ಸಚಿವ ಸಂಪುಟವು ಭಾಗಶಃ ಒಪ್ಪಿ ಅಧಿಕಾರಿಗಳ ವಿರುದ್ಧದ ಇಲಾಖಾ ತನಿಖೆಯ ಶಿಫಾರಸ್ಸನ್ನು ತಿರಸ್ಕರಿಸಿದೆ ಎಂದು ಒಳಾಡಳಿತ ಇಲಾಖೆಯ ಪ್ರಕಟಣೆ ತಿಳಿಸಿದೆ.