ಬೆಂಗಳೂರು: ನಗರದಲ್ಲಿ ಮಳೆಗಾಲದ ವೇಳೆ ರಸ್ತೆಗಳಲ್ಲಿ ಜಲಾವೃತ ಆಗುವುದನ್ನು ತಪ್ಪಿಸುವಂತೆ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದಲ್ಲಿ ವಿವಿಧ ವಿಷಯಗಳ ಸಮಸ್ಯೆ ಗಳಿಗೆ ಸಂಬಂಧಿಸಿದಂತೆ ಬಿಬಿಎಂಪಿ ಕೇಂದ್ರ ಕಛೇರಿಯ ಮುಖ್ಯ ಆಯುಕ್ತರ ಕಛೇರಿಯಲ್ಲಿ ಇಂದು ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಳೆಗಾಲದ ವೇಳೆ ಹೊರ ವರ್ತುಲ ರಸ್ತೆಗಳಲ್ಲಿ ಎಲ್ಲೆಲ್ಲಿ ಜಲಾವೃತವಾಗುತ್ತದೆಯೋ ಆ ಸ್ಥಳಗಳಲ್ಲಿ ಕೂಡಲೆ ಜಲಾವೃತವಾಗುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲು ಸೂಚಿಸಿದರು.
ನಗರದಲ್ಲಿ ಪ್ರಮುಖವಾಗಿ ಹೆಬ್ಬಾಳ ಜಂಕ್ಷನ್, ನಾಗವಾರ ಜಂಕ್ಷನ್, ವಿದ್ಯಾಶಿಲ್ಪ ಜಂಕ್ಷನ್, ರೂಪೇನ ಅಗ್ರಹಾರ, ಮಾರತಹಳ್ಳಿ ಪೊಲೀಸ್ ಠಾಣೆ, ಕಾರ್ತಿಕ್ ನಗರ, ಕಸ್ತೂರಿ ನಗರ ಮೇಲ್ಸೇತುವೆ, ಪ್ಯಾಲೆಸ್ ಗುಟ್ಟಹಳ್ಳಿ, ಪಣತ್ತೂರು ರೈಲ್ವೆ ಕೆಳಸೇತುವೆ, ನಾಯಂಡಹಳ್ಳಿ ಜಂಕ್ಷನ್, ಆರ್.ಆರ್ ನಗರ ಆರ್ಚ್, ಸುಮ್ಮನಹಳ್ಳಿ ಜಂಕ್ಷನ್ ಇನ್ನಿತರ ಪ್ರಮುಖ ಸ್ಥಳಗಳಲ್ಲಿ ಜಲಾವೃತವಾಗಲಿದ್ದು, ಅಲ್ಲಿ ಕೂಡಲೆ ಸಮಸ್ಯೆ ಬಗೆಹರಿಸಲು ಸೂಚಿಸಿದರು.
ಮೆಟ್ರೋ ಕಾಮಗಾರಿ ನಡೆಯುತ್ತಿರುವ ಕಡೆ ಮೆಟ್ರೋ ವಿಭಾಗದ ಜೊತೆ ಸಮನ್ವಯ ಸಾಧಿಸಿ ಇರುವ ಸಮಸ್ಯೆಗಳನ್ನು ಬಗೆಹರಿಸಬೇಕು. ರಸ್ತೆ ಬದಿಯ ಸೈಡ್ ಡ್ರೈನ್ ಗಳಲ್ಲಿ ಹೂಳನ್ನು ತೆಗೆದು ಸ್ವಚ್ಛಗೊಳಿಸಬೇಕು. ರಸ್ತೆಗಳ ಮೇಲೆ ಬೀಳುವ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲು ಸೂಚಿಸಿದರು.
ರಸ್ತೆ ಗುಂಡಿಗಳನ್ನು ಮುಚ್ಚಿ:
ನಗರದ ಹೊರ ವರ್ತುಲ ರಸ್ತೆ ಹಾಗೂ ಪ್ರಮುಖ ರಸ್ತೆಗಳಲ್ಲಿ ಸಂಚಾರ ವಿಭಾಗದಿಂದ ರಸ್ತೆಗುಂಡಿಗಳ ಪಟ್ಟಿಯನ್ನು ನೀಡಿದ್ದು, ಆ ಪಟ್ಟಿಯ ಅನುಸಾರ ಆದ್ಯತೆ ಮೇರೆಗೆ ರಸ್ತೆ ಗುಂಡಿಗಳನ್ನು ಮುಚ್ಚಬೇಕು. ಇದರಿಂದ ವಾಹನಗಳ ಸಂಚಾರಕ್ಕೆ ಹೆಚ್ಚು ಅನುಕೂಲವಾಗಲಿದ್ದು, ಸಂಚಾರ ದಟ್ಟಣೆ ಆಗುವುದನ್ನು ನಿಯಂತ್ರಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಈ ವೇಳೆ ವಿಶೇಷ ಆಯುಕ್ತರಾದ, ಮುನಿಷ್ ಮೌದ್ಗೀಲ್, ಕರೀಗೌಡ, ಸುರಳ್ಕರ್ ವಿಕಾಸ್ ಕಿಶೋರ್, ವಲಯ ಆಯುಕ್ತರಾದ ರಮೇಶ್, ರಮ್ಯಾ, ದಿಗ್ವಿಜಯ್ ಬೋಡ್ಕೆ, ಸ್ನೇಹಲ್, ಮುಖ್ಯ ಅಭಿಯಂತರರು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.