ಶಿವಮೊಗ್ಗ: ಡಾ.ಬಾಬಾ ಸಾಹೇಬ್ ಬಿಆರ್ ಅಂಬೇಡ್ಕರ್ ಅವರ 68ನೇ ಪರಿನಿರ್ವಾಣ ದಿನಾಚರಣೆಯನ್ನು ಡಿಸೆಂಬರ್.6ರಂದು ಸಾಗರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ಆಚರಿಸಲಾಗುತ್ತಿದೆ.
ಇಂದು ಸಾಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ತಾಲ್ಲೂಕು ಸಂಚಾಲಕ ನಾಗರಾಜ್ ಅವರು, ಡಾ.ಬಾಬಾ ಸಾಹೇಬ್ ಬಿಆರ್ ಅಂಬೇಡ್ಕರ್ ಅವರ 68ನೇ ಮಹಾ ಪರಿನಿರ್ವಾಣ ದಿನಾಚರಣೆಯನ್ನು ಕರ್ನಾಟಕ ದಲತಿ ಸಂಘರ್ಷ ಸಮಿತಿಯಿಂದ ಡಿಸೆಂಬರ್.6ರಂದು ಆಚರಿಸಲಾಗುತ್ತಿದೆ. ಅಲ್ಲದೇ ಅಂಬೇಡ್ಕರ್ ವಿಚಾರಧಾರೆಗಳನ್ನು ಜನರಿಗೆ ತಿಳಿಸಿಕೊಡುವಂತ ಕೆಲಸ ಮಾಡಲಾಗುತ್ತದೆ ಎಂದರು.
ಅಂಬೇಡ್ಕರ್ ರೂಪಿಸಿದಂತ ಕಾನೂನಿನಡಿ ಹಲವರು ಪ್ರಯೋಜನ ಪಡೆದಿದ್ದಾರೆ. ದಲಿತ ಸಮುದಾಯದ ಜೀವನವೇ ಬದಲಾವಣೆಯಾಗಿದೆ. ಇನ್ನೂ ಆಗಬೇಕಿದೆ. ಇಂತಹ ಮಹಾನ್ ನಾಯಕನ 68ನೇ ಮಹಾ ಪರಿನಿರ್ವಾಣ ದಿನಾಚರಣೆಯನ್ನು ಡಿಸೆಂಬರ್.6ರಂದು ಸಾಗರ ನಗರದ ಸರ್ಕಾರಿ ನೌಕರರ ಭವನದಲ್ಲಿ ಬೆಳಿಗ್ಗೆ 10.30ಕ್ಕೆ ಆಚರಿಸಲಾಗುತ್ತಿದೆ. ಸಾಗರದ ಸಮಸ್ತ ಜನರು ಭಾಗಿಯಾಗುವಂತೆ ಮನವಿ ಮಾಡಿದರು.
ಸಾಗರ ಉಪ ವಿಭಾಗಾಧಿಕಾರಿ ಯತೀಶ್ ಅವರು ಡಾ.ಬಿಆರ್ ಅಂಬೇಡ್ಕರ್ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಮಹಾಪರಿ ನಿರ್ವಾಣ ಕಾರ್ಯಕ್ರಮವನ್ನು ಶಾಸಕ ಬೇಳೂರು ಗೋಪಾಲಕೃಷ್ಣ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿಎಸ್ಎಸ್ ಹಿರಿಯ ಮುಖಂಡ ನಾರಾಯಣ ಮಂಡಗಳಲೆ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ, ಜಿಲ್ಲಾ ಸಂಚಾಲಕ ಎಂ.ಏಳುಕೋಟೆ, ಸಾಗರ ತಾಲ್ಲೂಕು ಕಸಪ ಅಧ್ಯಕ್ಷ ವಿ.ಟಿ ಸ್ವಾಮಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್.ಎನ್, ಬುಡಕಟ್ಟು ಸಮುದಾಯದ ಅಧ್ಯಕ್ಷ ರಾಮಣ್ಣ ಹಲಸರು, ನಗರಸಭಾ ಸದಸ್ಯೆ ಲಲಿತಮ್ಮ, ವಕೀಲರಾದಂತ ಸತೀಶ್.ಡಿ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದರು.
ನಗರಸಭಾ ಸದಸ್ಯೆ ಲಲಿತಮ್ಮ ಮಾತನಾಡಿ ಡಿ.6ರಂದು ಡಿಎಸ್ಎಸ್ ನಿಂದ ಮಹಾಪರಿನಿರ್ವಾಣ ಕಾರ್ಯಕ್ರಮ ಆಯೋಜಿಸಲಾಗಿದೆ. ಎಲ್ಲಾ ಸಮುದಾಯದವರು ಅಂಬೇಡ್ಕರ್ ಸಂವಿಧಾನದಿಂದ ಸವಲತ್ತುಗಳನ್ನು ಪಡೆದ ಫಲಾನುಭವಿಗಳೇ ಆಗಿದ್ದಾರೆ. ಮಹಿಳೆಯರಿಗೆ ನ್ಯಾಯ ಒದಗಿಸಿಕೊಡದ ಕಾರಣಕ್ಕೆ ಅಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದಂತ ಮಹಾನ್ ನಾಯಕ ಡಾ.ಬಿಆರ್ ಅಂಬೇಡ್ಕರ್ ಆಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಾಗರ ತಾಲ್ಲೂಕಿನ ಎಲ್ಲಾ ಮಹಿಳೆಯರು ಭಾಗವಹಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸುರೇಶ್ ಕುಮಾರ್, ಶಿವಪ್ಪ, ಗಣಪತಿ ತಾಳಗುಪ್ಪ, ವೀರೇಶ್, ಚಂದ್ರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ