ರಾಜ್ಯಕ್ಕೆ ಎನ್.ಡಿ.ಆರ್.ಎಫ್ ನಿಧಿಯನ್ನು ತಕ್ಷಣ ಬಿಡುಗಡೆಗೊಳಿಸಲು ಕೇಂದ್ರ ಬಿಜೆಪಿ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
ಈ ಕುರಿತು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದು, ಕೇಂದ್ರದಿಂದ ನಮ್ಮ ಪಾಲಿನ ಪರಿಹಾರವನ್ನು ಇವತ್ತು ಕೊಡ್ತಾರೆ, ನಾಳೆ ಕೊಡ್ತಾರೆ, ಇವತ್ತು ಬರುತ್ತೆ, ನಾಳೆ ಬರುತ್ತೆ ಎಂದು ಕಳೆದ ಐದು ತಿಂಗಳು ಕಾದಿದ್ದಾಯ್ತು. ನಮಗೆ ಬೇರೆ ದಾರಿ ಇಲ್ಲದೆ ಸಂವಿಧಾನದ ಪರಿಚ್ಛೇದ 32ರ ಅಡಿಯಲ್ಲಿ ನಾವು ನಮ್ಮ ಕಾನೂನುಬದ್ಧ ಹಕ್ಕನ್ನು ಚಲಾಯಿಸಿದ್ದೇವೆ ಎಂದು ತಿಳಿಸಿದ್ದಾರೆ.
ಬರದ ಸಂದರ್ಭದಲ್ಲಿ, ತುರ್ತು ಸಂದರ್ಭಗಳಲ್ಲಿ ಜನರಿಗೆ ತುರ್ತಾಗಿ ಸ್ಪಂದಿಸಬೇಕು ಎನ್ನುವ ಉದ್ದೇಶದಿಂದಲೇ ವಿಪತ್ತು ನಿರ್ವಹಣಾ ಕಾನೂನು ಮಾಡಲಾಗಿದೆ. ಆದರೆ ಇದುವರೆಗೂ ಕೇಂದ್ರ ಕಾನೂನುಬದ್ಧವಾಗಿ ನಮಗೆ ಬರಬೇಕಾದ ಹಣದಲ್ಲಿ ಒಂದೇ ಒಂದು ಪೈಸೆಯನ್ನೂ ಕೊಟ್ಟಿಲ್ಲ. ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವೆ. ರಾಜ್ಯದಲ್ಲಿ 240 ತಾಲ್ಲೂಕುಗಳಲ್ಲಿ 223 ತಾಲ್ಲೂಕುಗಳನ್ನು ಬರಗಾಲ ಅಂತ ಘೋಷಿಸಿದ್ದೇವೆ. ನಾಲ್ಕು ಬಾರಿ ಮೌಲ್ಯಮಾಪನ ಮಾಡಿದ್ದೇವೆ. 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆ ನಷ್ಟ ಆಗಿದೆ. 3 ಬಾರಿ ಸತತವಾಗಿ ಕೇಂದ್ರಕ್ಕೆ ಮನವಿ ಪತ್ರ ಬರೆದೆವು. ಇದುವರೆಗೂ ಕೇಂದ್ರ ಸರ್ಕಾರ ರಾಜ್ಯದ ಪಾಲಿನಲ್ಲಿ ನಯಾ ಪೈಸೆಯನ್ನೂ ಕೊಟ್ಟಿಲ್ಲ ಎಂದರು.
ನಿಯಮಾವಳಿ ಪ್ರಕಾರ ರಾಜ್ಯ ಸರ್ಕಾರ ಮನವಿ ಮಾಡಿದ ವಾರದಲ್ಲಿ ಕೇಂದ್ರದ ತಂಡ ಬರಬೇಕು. ಆದರೆ, ಅಕ್ಟೋಬರ್ ನಲ್ಲಿ ಕೇಂದ್ರ ತಂಡ ರಾಜ್ಯಕ್ಕೆ ಬಂದು ಪರಿಶೀಲನೆ ನಡೆಸಿ ಕೇಂದ್ರಕ್ಕೆ IMCT ವರದಿ ನೀಡಿದೆ. ಈ ವರದಿ ಕೊಟ್ಟ ಒಂದು ತಿಂಗಳಲ್ಲಿ ರಾಜ್ಯಕ್ಕೆ ಬರ ಪರಿಹಾರ ಕೊಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು ಎನ್ನುವುದು ನಿಯಮ. ಆದರೆ, ಇದುವರೆಗೂ ಕೇಂದ್ರ ರಾಜ್ಯದ ಜನರಿಗೆ ಸ್ಪಂದಿಸಿಲ್ಲ. ಇದು NDRF ನಿಯಮಾವಳಿಗಳ ಉಲ್ಲಂಘನೆ ಮಾಡಿದಂತೆ.
ಕೇಂದ್ರ ತಂಡ ವರದಿ ಕೊಟ್ಟರೂ ನಮಗೆ ಕೇಂದ್ರ ಸರ್ಕಾರ ಸ್ಪಂದಿಸದಿದ್ದಾಗ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ದೆಹಲಿಗೆ ಹೋದರು, ಆದರೆ ಕೇಂದ್ರ ಸಚಿವರ ಭೇಟಿಗೆ ಅವಕಾಶವನ್ನೇ ಕೊಡಲಿಲ್ಲ. ಬಳಿಕ ಡಿಸೆಂಬರ್ 19 ರಂದು ನಾನು ಮತ್ತು ಕೃಷ್ಣಬೈರೇಗೌಡ ಅವರು ಮತ್ತೆ ದೆಹಲಿಗೆ ಹೋಗಿ ಪ್ರಧಾನಿ Narendra Modi ಅವರನ್ನು ಭೇಟಿ ಮಾಡಿ ಮನವಿ ಮಾಡಿದೆವು. ನಂತರ ಡಿಸೆಂಬರ್ 20 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮನವಿ ಮಾಡಿದೆವು. ಆದರೂ ನಮಗೆ ಪರಿಹಾರ ಕೊಡಲಿಲ್ಲ ಎಂದು ಹೇಳಿದರು.
ಬಳಿಕ ನಾನು ಬೆಂಗಳೂರಿನಲ್ಲೇ ಪ್ರಧಾನಿ ಮೋದಿಯವರನ್ನು ಖುದ್ದಾಗಿ ಭೇಟಿ ಮಾಡಿ ಮನವಿ ಮಾಡಿದೆ. ಆದರೂ ಪರಿಹಾರ ಸಿಗಲಿಲ್ಲ. ಕೇಂದ್ರದಿಂದ ನಯಾಪೈಸೆ ಬಿಡುಗಡೆ ಆಗದಿದ್ದಾಗ ₹327 ಕೋಟಿ ಕುಡಿಯುವ ನೀರಿಗೆ, ಮೇವಿಗೆ ₹40 ಕೋಟಿ, ರೈತರಿಗೆ ಬೆಳೆ ಪರಿಹಾರ ನೀಡಲು ₹650 ಕೋಟಿ ಹೀಗೆ ಒಟ್ಟು ₹1,017 ಕೋಟಿ ಬಿಡುಗಡೆ ಮಾಡಿದೆವು. ಡಿಸಿ ಗಳ ಬಳಿ ಇನ್ನೂ ₹800 ಕೋಟಿ ರೂಪಾಯಿ ಹಣ ಬರನಿರ್ವಹಣೆ ಉದ್ದೇಶಕ್ಕಾಗಿಯೇ ಮೀಸಲಿಡಲಾಗಿದೆ. ಬರ ನಿರ್ವಹಣೆ ಕುರಿತಾಗಿ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆಗಳನ್ನು ನೀಡಲಾಗಿದೆ.
₹4,600 ಕೋಟಿ ಇನ್ಪುಟ್ ಸಬ್ಸಿಡಿಗೆ ಹಣ ಬೇಕು. ಕಾಯ್ದೆ ಪ್ರಕಾರ ಇಂಥ ಸನ್ನಿವೇಶದಲ್ಲಿ ತಡ ಮಾಡದೆ ಹಣ ಬಿಡುಗಡೆ ಆಗಬೇಕಿತ್ತು. ಆದರೆ ಐದು ತಿಂಗಳಾದರೂ ನಮಗೆ NDRF ನಿಧಿ ಬಂದೇ ಇಲ್ಲ. ಹೀಗಾಗಿ ನಾವು ಬೇರೆ ದಾರಿ ಇಲ್ಲದೆ ಸುಪ್ರೀಂ ಕೋರ್ಟ್ ಬಾಗಿಲು ಬಡಿಯಬೇಕಾಯಿತು.
ನಮ್ಮ ನಾಡಿಗೆ, ನಮ್ಮ ನಾಡಿನ ಜನರಿಗೆ ಆಗಿರುವ ಅನ್ಯಾಯವನ್ನು ಸರಿಮಾಡಿ ಎಂದು, ಎನ್.ಡಿ.ಆರ್.ಎಫ್ ನಿಧಿ ಕೊಡಿ ಎಂದು ಮೇಲಿಂದ ಮೇಲೆ ಮನವಿ ಮಾಡಿ ಎಲ್ಲಾ ರೀತಿಯಲ್ಲೂ ಬೇಡಿಕೆ ಸಲ್ಲಿಸಿದರೂ ಪ್ರಯೋಜನ ಆಗಲಿಲ್ಲ. ಈ ಕಾರಣಕ್ಕೆ ನಾವು ಸುಪ್ರೀಂಕೋರ್ಟ್ ಬಳಿ ನ್ಯಾಯ ಕೇಳಬೇಕಾಗಿ ಬಂದಿದೆ.
ಇವತ್ತು ಕೊಡ್ತಾರೆ, ನಾಳೆ ಕೊಡ್ತಾರೆ, ಇವತ್ತು ಬರತ್ತೆ, ನಾಳೆ ಬರತ್ತೆ ಎಂದು ಐದು ತಿಂಗಳು ಕಾದಿದ್ದಾಯ್ತು. ನಮಗೆ ಬೇರೆ ಇರಲಿಲ್ಲ.
ನಮಗೆ ಕಾನೂನು ಮೊರೆ ಹೋಗುವುದು ಇಷ್ಟ ಇರಲಿಲ್ಲ. ಆದರೆ ನಾವು ಕಾನೂನು ಮೊರೆ ಹೋಗುವ ಅನಿವಾರ್ಯತೆಯನ್ನು ಕೇಂದ್ರ ಸರ್ಕಾರ ಸೃಷ್ಟಿಸಿದೆ ಎಂದು ತಿಳಿಸಿದ್ದಾರೆ.