ಬೆಂಗಳೂರು : ಈ ಹಿಂದಿನ ಯಾವುದೇ ವರ್ಷ ಅಥವಾ ಯಾವುದೇ ಸರ್ಕಾರಕ್ಕೆ ಹೋಲಿಸಿದರೆ 2023-24ರ ಸಾಲಿನಲ್ಲಿ ಅತಿಹೆಚ್ಚು ರೈತರಿಗೆ ಬರ ಪರಿಹಾರ ನೀಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ವಿಧಾನ ಪರಿಷತ್‌ಗೆ ಮಾಹಿತಿ ನೀಡಿದರು.
ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ವೇಳೆ ಬಿಜೆಪಿ ಸದಸ್ಯ ಕೇಶವ ಪ್ರಸಾದ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, “ ಈ ವರ್ಷ ಸುಮಾರು 38,78,525 ರೈತರಿಗೆ ಬರ ಪರಿಹಾರ ನೀಡಲಾಗಿದೆ. ಈ ಹಿಂದೆ 23,42,667 ರೈತರಿಗೆ ಪರಿಹಾರ ನೀಡಿದ್ದೇ ದಾಖಲೆಯಾಗಿತ್ತು. ಅಲ್ಲದೆ, ಕಳೆದ ಸರ್ಕಾರದ ನಾಲ್ಕು ವರ್ಷದ ಅವಧಿಯಲ್ಲಿ ನೀಡಿದ್ದು, 14,41,049 ರೈತರಿಗೆ ಪರಿಹಾರ ನೀಡಿದ್ದೇ ದೊಡ್ಡ ಸಂಖ್ಯೆಯಾಗಿತ್ತು. ಆದರೆ, ಯಾವುದೇ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಎರಡರಷ್ಟು ರೈತರಿಗೆ ಬರ ಪರಿಹಾರ ನೀಡುವ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸದನಕ್ಕೆ ಮಾಹಿತಿ ನೀಡಿದರು.
ಮುಂದುವರೆದು, “ಅಧಿಕಾರಿಗಳು ಸ್ಥಳಕ್ಕೇ ತೆರಳಿ ಬೆಳೆ ಸಮೀಕ್ಷೆ ಆ್ಯಪ್ ಮೂಲಕ ಬೆಳೆ ಆಗಿದ್ಯಾ, ಇಲ್ವಾ? ಅಂತ ಸಮೀಕ್ಷೆ ನಡೆಸಿ ಡಿಜಿಟಲ್ ಮೂಲಕ ನೇರವಾಗಿ ರೈತರ ಖಾತೆಗಳಿಗೆ ಬರ ಪರಿಹಾರ ಹಣ ಜಮೆ ಮಾಡಲಾಗಿದೆ. ಶೇ.33ರಷ್ಟು ಬೆಳೆ ನಷ್ಟ ಅನುಭವಿಸಿದ ಎಲ್ಲಾ ರೈತರಿಗೂ ಪರಿಹಾರ ನೀಡಲಾಗಿದೆ. ನೀರಾವರಿ ಆಶ್ರಿತ ಜಮೀನಿದ್ರೆ ಯಾರಿಗೆಲ್ಲ ನಾಲೆಯಲ್ಲಿ ನೀರು ಹರಿಸಲು ಸಾಧ್ಯವಾಗಿಲ್ಲ ಅಂತಾವ್ರಿಗೂ ಪರಿಹಾರ ನೀಡಿದ್ದೇವೆ. ಬಹುವಾರ್ಷಿಕ ತೋಟಗಾರಿಕಾ ಬೆಳೆಗಳಿಗೂ ಪರಿಹಾರ ನೀಡಲಾಗಿದೆ” ಎಂದು ಅವರು ಮಾಹಿತಿ ನೀಡಿದರು.
ಮೊದಲ ಬಾರಿಗೆ ಜೀವನೋಪಾಯ ನಷ್ಟ:
ಕರ್ನಾಟಕ ರಾಜ್ಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಜೀವನೋಪಾಯ ನಷ್ಟವನ್ನೂ ರೈತರಿಗೆ ಭರಿಸಲು ಸರ್ಕಾರ ಮುಂದಾಗಿದೆ. ಈವರೆಗೆ ರಾಜ್ಯಾದ್ಯಂತ 17,80,000 ರೈತ ಕುಟುಂಬಗಳನ್ನು ಗುರುತಿಸಿದ್ದು, ಜೀವನೋಪಾಯ ನಷ್ಟಕ್ಕೆ ಹಣ ಪಾವತಿ ಮಾಡುವ ಕೆಲಸ ಚಾಲ್ತಿಯಲ್ಲಿದೆ. ಇದಕ್ಕಾಗಿ 531ಕೋಟಿ ರೂಪಾಯಿಯನ್ನು ತೆಗೆದಿರಿಸಲಾಗಿದೆ. ಬರ ಪರಿಹಾರ ಕೆಲಸಕ್ಕೆ ಈವರೆಗೆ 4047 ಕೋಟಿ ರೂಪಾಯಿ ಹಣ ರೈತರಿಗೆ ಪರಿಹಾರವಾಗಿ ಕೊಟ್ಟಿದ್ದೇವೆ. ಅಥವಾ ಚಾಲ್ತಿಯಲ್ಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದರು.
ರಾಜ್ಯ ಸರ್ಕಾರದಿಂದ BBMPಯ ಮಳಿಗೆಗಳು ಮತ್ತು ಆಸ್ತಿಗಳ ಗುತ್ತಿಗೆ ನಿಯಮಗಳ ಕರಡು ಅಧಿಸೂಚನೆ ಪ್ರಕಟ
ಇನ್ಮುಂದೆ ನಿಮ್ಮ ಭೂಮಿಗೂ ಸಿಗುತ್ತೆ ʻಆಧಾರ್ʼ : ʻಭೂ ಆಧಾರ್ʼ ಕುರಿತು ಇಲ್ಲಿದೆ ಮಾಹಿತಿ | Bhu Aadhar yojana