ಬೆಂಗಳೂರು: ಮಳೆಗಾಲ ಆರಂಭಗೊಂಡಿದೆ. ಸಾರಿಗೆ ಬಸ್ ಗಳು ಸೋರುತ್ತಿವೆ ಅನ್ನೋ ರೀತಿಯಲ್ಲಿ ಕೊಡೆ ಹಿಡಿದು ಸಾರಿಗೆ ಬಸ್ ಚಾಲನೆ ಮಾಡಿದಂತ ಡ್ರೈವರ್ ವೀಡಿಯೋ ವೈರಲ್ ಆಗಿತ್ತು. ಈ ಸಂಬಂಧ ನಿಮ್ಮ ಕನ್ನಡ ನ್ಯೂಸ್ ನೌ ವೆಬ್ ಸೈಟ್ ನಲ್ಲಿ WATCH VIDEO: ಬಸ್ ಛಾವಣಿ ಸೋರಿಕೆ; ಛತ್ರಿ ಹಿಡಿದೇ ಬಸ್ ಚಲಾಯಿಸಿದ KSRTC ಚಾಲಕ, ವಿಡಿಯೋ ವೈರಲ್ ಅಂತ ಸುದ್ದಿ ಪ್ರಕಟಿಸಿತ್ತು. ನಾಟಕೀಯವಾಗಿ ಛತ್ರಿ ಹಿಡಿದು ಸಾರಿಗೆ ಬಸ್ ಅನ್ನು ಡ್ರೈವರ್ ಚಾಲನೆ ಮಾಡಿದ್ದರು. ಇದನ್ನ ನಿರ್ವಾಹಕಿ ವೀಡಿಯೋ ಮಾಡಿದ್ದರು. ಈಗ ಈ ಇಬ್ಬರನ್ನು ಅಮಾನತುಗೊಳಿಸಿ, ಸಾರಿಗೆ ನಿಗಮ ಆದೇಶಿಸಿದೆ.
ನಮ್ಮ ಸುದ್ದಿ ಪ್ರಕಟಗೊಳ್ಳುತ್ತಿದ್ದಂತೆ, NWKRTC, ಮಳೆ ಬರುತ್ತಿರುವಾಗ ಸಂಸ್ಥೆಯ ವಾಹನದ ಚಾಲಕರು ಕೊಡೆ ಹಿಡಿದುಕೊಂಡು ವಾಹನ ಚಾಲನೆ ಮಾಡಿದ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಕುರಿತು ಈ ಕೆಳಗಿನಂತೆ ಸ್ಪಷ್ಟೀಕರಣ ಮಾಹಿತಿ ಹಂಚಿಕೊಂಡಿತ್ತು.
ಈ ವಿಷಯವಾಗಿ ಧಾರವಾಡ ಗ್ರಾಮಾಂತರ ವಿಭಾಗದ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು. ಅದರನ್ವಯ, ದಿನಾಂಕ: 23-05-2024 ರಂದು ಧಾರವಾಡ ಘಟಕದ ವಾಹನ ಸಂಖ್ಯೆ ಕೆಎ-25 ಎಫ್-1336 ಬೇಟಗೇರಿ-ಧಾರವಾಡ ಮಾರ್ಗದಲ್ಲಿ ಕಾರ್ಯಾಚರಿಸುತ್ತಿರುವಾಗ ವಾಹನದಲ್ಲಿ ಚಾಲಕರಾಗಿ ಹನುಮಂತಪ್ಪ ಅ ಕಿಲ್ಲೇದಾರ, ಬಿ.ಸಂ-1203 D ಹಾಗೂ ನಿರ್ವಾಹಕರಾಗಿ ಅನಿತಾ ಎಚ್. ಬಿ ಸಂ-396 ರವರು ಕರ್ತವ್ಯ ನಿರ್ವಹಿಸುತ್ತಿದ್ದರು. ಮಳೆ ಬರುತ್ತಿದ್ದ ಆ ಸಮಯದಲ್ಲಿ ಅಂದರೆ ಸುಮಾರು 16:30ಕ್ಕೆ ಬಸ್ಸಿನಲ್ಲಿ ಪ್ರಯಾಣಿಕರು ಇಲ್ಲದೇ ಖಾಲಿ ಇದ್ದುದರಿಂದ ಚಾಲಕರು ಮನೋರಂಜನೆಗಾಗಿ ನಿರ್ವಾಹಕರ ಬಳಿ ಇದ್ದ ಕೊಡೆಯನ್ನು ಪಡೆದು, ಹಿಡಿದುಕೊಂಡು ವಾಹನ ಚಾಲನೆ ಮಾಡಿರುತ್ತಾರೆ. ಇದನ್ನು ಸದರಿ ನಿರ್ವಾಹಕಿಯು ವಿಡಿಯೋ ಚಿತ್ರೀಕರಣ ಮಾಡಿರುತ್ತಾರೆ ಎಂದಿತ್ತು.
ಆ ಸಮಯದಲ್ಲಿ ಚಾಲಕರ ಮೇಲಿನ ಛಾವಣಿಯಾಗಲಿ ಪ್ರಯಾಣಿಕರು ಕುಳಿತುಕೊಳ್ಳುವ ಸ್ಥಳದ ಛಾವಣಿಯಾಗಲಿ ಸೋರಿಕೆ (Roof Leakage) ಇರಲಿಲ್ಲ ಎಂದು ತಿಳಿದುಬಂದಿರುತ್ತದೆ. ವಾಹನದ ಛಾವಣಿ ಸೋರಿಕೆ ಬಗ್ಗೆ ಚಾಲಕ, ನಿರ್ವಾಹಕರ, ಪ್ರಯಾಣಿಕರ ಯಾವುದೇ ದೂರು ಸಹ ದಾಖಲು ಆಗಿರುವುದಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿತ್ತು.
ಸದರಿ ವಾಹನವನ್ನು ವಿಭಾಗದ ತಾಂತ್ರಿಕ ಶಿಲ್ಪಿಗಳಿಂದ ಪರಿಶೀಲನೆ ಮಾಡಲಾಗಿ ಮೇಲ್ಚಾವಣಿಯು ಸೋರದೆ ಇರುವುದನ್ನು ಖಚಿತಪಡಿಸಿಕೊಳ್ಳಲಾಗಿದೆ. ಈ ಕುರಿತು ಸದರಿ ಚಾಲನಾ ಸಿಬ್ಬಂದಿಗಳಿಂದ ಸ್ಪಷ್ಟೀಕರಣ ಪಡೆಯಲಾಗಿ ಇದು ಕೇವಲ ಮನೋರಂಜನೆಗಾಗಿ ಮಾಡಿದ ವಿಡಿಯೋ ಚಿತ್ರೀಕರಣವಾಗಿರುತ್ತದೆ ಎಂದು ಹೇಳಿಕೆ ನೀಡಿದ್ದು, ಈ ಮೂಲಕ ಸ್ಪಷ್ಟೀಕರಣ ನೀಡಿತ್ತು.
ಈಗ ಸದರಿ ಬಸ್ಸಿನ ಚಾಲಕ ಮತ್ತು ನಿರ್ವಾಹಕರನ್ನು ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ ಎಂಬುದಾಗಿ NWKRTC ದೃಢಪಡಿಸಿದೆ. ಈ ಮೂಲಕ ಹುಡುಗಾಟ ಆಡಿ, ವೀಡಿಯೋ ಸೋಷಿಯಲ್ ಮೀಡಿಯದಲ್ಲಿ ಹಾಕಿ, ಸಾರಿಗೆ ಬಸ್ ಚಾಲಕ, ನಿರ್ವಾಹಕ ಸಸ್ಪೆಂಡ್ ಆಗಿದ್ದಾರೆ.
BREAKING: ‘BBMP ಮುಖ್ಯ ಆಯುಕ್ತ’ರ ಹೆಸರಲ್ಲಿ ‘ಮೆಸೇಜ್’: ‘FIR’ ದಾಖಲು
2024-25 ನೇ ಸಾಲಿನ ಶೈಕ್ಷಣಿಕ ಮಾರ್ಗದರ್ಶಿ ಪುಸ್ತಕ : ಶಾಲಾ ಮುಖ್ಯಸ್ತರಿಗೆ ಶಿಕ್ಷಣ ಇಲಾಖೆಯಿಂದ ಮಹತ್ವದ ಸೂಚನೆ