ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ ಚುನಾವಣೆ ನಡೆಸುವ ಸಲುವಾಗಿ ಇಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, ಈ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಲು, ಹೆಸರಿಲ್ಲದಿದ್ದರೆ ಕೂಡಲೇ ನಮೂನೆಯ ಮೂಲಕ ಅರ್ಜಿ ಸಲ್ಲಿಸಿ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳುವ ಅವಕಾಶವಿದೆ. 18 ವರ್ಷ ತುಂಬಿದ ಎಲ್ಲರೂ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಲು ರಾಜ್ಯ ಚುನಾವಣಾ ಆಯೋಗದ ಆಯುಕ್ತರಾದ ಜಿ.ಎಸ್ ಸಂಗ್ರೇಶಿ ರವರು ಜಿ.ಬಿ.ಎ. ಕೇಂದ್ರ ಕಛೇರಿಯ ಸಭಾಂಗಣ-1 ರಲ್ಲಿ ನಡೆದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳ ವಾರ್ಡ್ವಾರು ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು 88,91,411 ಮತದಾರರು ಬರಲಿದ್ದಾರೆ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತರಾದ ಜಿ.ಎಸ್ ಸಂಗ್ರೇಶಿ ಅವರು ತಿಳಿಸಿದ್ದಾರೆ.
ಜಿಬಿಎ ವ್ಯಾಪ್ತಿಯಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಇಂದು ಕರಡು ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಬಿಎ ವ್ಯಾಪ್ತಿಯಲ್ಲಿ ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ ಮತ್ತು ಬೆಂಗಳೂರು ಪಶ್ಚಿಮ ನಗರ ಪಾಲಿಕೆಗಳು ಸೇರಿದಂತೆ ಒಟ್ಟು 05 ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ 369 ವಾರ್ಡ್ಗಳು ರಚನೆಯಾಗಿರುವುದಾಗಿ ತಿಳಿಸಿದರು.
ಐದು ನಗರ ಪಾಲಿಕೆಗಳ 369 ವಾರ್ಡ್‌ಗಳ ಮತದಾರರ ಕರಡು ಪಟ್ಟಿ ಹೀಗಿದೆ.. #GBA pic.twitter.com/jkdBvCoiDf
— DIPR Karnataka (@KarnatakaVarthe) January 20, 2026
ಜಿಬಿಎ 5 ನಗರ ಪಾಲಿಕೆಗಳ ಚುನಾವಣೆಗೆ 1 ಅಕ್ಟೋಬರ್ 2025*ನ್ನು ಆಧಾರವಾಗಿ ತೆಗೆದುಕೊಂಡು ಸಿದ್ಧಪಡಿಸಲಾದ ಕರಡು ಮತದಾರರ ಪಟ್ಟಿಯಲ್ಲಿ *45,69,193 ಪುರುಷರು, 43,20,583 ಮಹಿಳೆಯರು ಹಾಗೂ 1,635 ಇತರೆ ಮತದಾರರು ಸೇರಿದಂತೆ, ಒಟ್ಟು 88,91,411 ಮತದಾರರು ಇದ್ದಾರೆ ಎಂದು ವಿವರಿಸಿದರು.
ಜನವರಿ 20, 2026 ರಿಂದ ಫೆಬ್ರವರಿ 3, 2026 ರವರೆಗೆ ಬೂತ್ ಲೆವಲ್ ಅಧಿಕಾರಿಗಳು (ಬಿ.ಎಲ್.ಓ) ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ಈ ಅವಧಿಯಲ್ಲಿ ಹಕ್ಕು ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಹಕ್ಕು ಹಾಗೂ ಆಕ್ಷೇಪಣೆಗಳ ವಿಲೇವಾರಿಯು ಫೆಬ್ರವರಿ 4 ರಿಂದ ಫೆಬ್ರವರಿ 18, 2026 ರವರೆಗೆ ನಡೆಯಲಿದ್ದು, ಮಾರ್ಚ್ 16, 2026 ರಂದು ಮತದಾರರ ಪಟ್ಟಿಯ ಅಂತಿಮ ಪ್ರಕಟಣೆ ಮಾಡಲಾಗುವುದು ಎಂದು ಹೇಳಿದರು.
ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ವಾರ್ಡ್ ಸಂಖ್ಯೆ 23 ರಲ್ಲಿ ಅತಿ ಹೆಚ್ಚು 49,530 ಮತದಾರರು ಇದ್ದರೆ, ಬೆಂಗಳೂರು ಪೂರ್ವ ನಗರ ಪಾಲಿಕೆಯ ವಾರ್ಡ್ ಸಂಖ್ಯೆ 16 ರಲ್ಲಿ ಅತಿ ಕಡಿಮೆ 10,926 ಮತದಾರರು ಇದ್ದಾರೆ. ಒಟ್ಟು 369 ವಾರ್ಡ್ಗಳಲ್ಲಿ 8,044 ಮತಗಟ್ಟೆಗಳು ಇರಲಿವೆ ಎಂದು ಮಾಹಿತಿ ನೀಡಿದರು.
ವೆಬ್ ಸೈಟ್ನಲ್ಲಿ ಮತದಾರರ ಪಟ್ಟಿ:
ವಾರ್ಡ್ವಾರು ಕರಡು ಮತದಾರರ ಪಟ್ಟಿಯನ್ನು ಜಿಬಿಎ ಅಧಿಕೃತ ಜಾಲತಾಣ https://gba.karnataka.gov.in/home ನಲ್ಲಿ ಪಿ.ಡಿ.ಎಫ್ ಆವೃತ್ತಿಯಾಗಿ ಪ್ರಕಟಿಸಲಾಗುವುದು. ಸಾರ್ವಜನಿಕರು ತಮ್ಮ ಹೆಸರುಗಳು ಮತದಾರರ ಪಟ್ಟಿಯಲ್ಲಿ ಸೇರಿರುವುದನ್ನು ಪರಿಶೀಲಿಸಿಕೊಂಡು ಖಚಿತಪಡಿಸಿಕೊಳ್ಳಬಹುದು.
ವಾರ್ಡ್‌ವಾರು ಮತದಾರರ ಕರಡು ಪಟ್ಟಿಯನ್ನು ಜಿಬಿಎ ಅಧಿಕೃತ ಜಾಲತಾಣದಲ್ಲಿ (https://t.co/70CTOsgAtU) ಪ್ರಕಟಿಸಲಾಗಿದೆ. ಅದನ್ನು ಪರಿಶೀಲಿಸಿಕೊಳ್ಳಬೇಕು. ಗೊಂದಲವಿದ್ದರೆ ನಗರ ಪಾಲಿಕೆವಾರು ಸಹಾಯವಾಣಿ ಸ್ಥಾಪಿಸಲಾಗಿದ್ದು, ಕರೆ ಮಾಡಿ ಪರಿಹರಿಸಿಕೊಳ್ಳಬಹುದು.
ಬೆಂಗಳೂರು ಕೇಂದ್ರ – 080 22975803
ಬೆಂಗಳೂರು ಉತ್ತರ – 080 22975936… pic.twitter.com/qGWQTiVWve— DIPR Karnataka (@KarnatakaVarthe) January 20, 2026
ನಗರ ಪಾಲಿಕೆವಾರು ಮತದಾರರ ಸಹಾಯವಾಣಿ:
ಮತದಾರರ ಪಟ್ಟಿಗಳ ಪರಿಷ್ಕರಣೆಯ ವೇಳಾಪಟ್ಟಿಯ ಕುರಿತು ವ್ಯಾಪಕ ಪ್ರಚಾರಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಕರಡು ಮತದಾರರ ಪಟ್ಟಿಯನ್ನು ರಾಜಕೀಯ ಪಕ್ಷಗಳಿಗೆ ವಿತರಿಸಲಾಗುತ್ತಿದೆ. ಮತದಾರರ ಅನುಕೂಲಕ್ಕಾಗಿ ಐದು ನಗರ ಪಾಲಿಕೆಗಳ ಸಹಾಯವಾಣಿ ಸಂಖ್ಯೆಗಳು ಈ ಕೆಳಗಿನಂತಿವೆ:
1. ಬೆಂಗಳೂರು ಕೇಂದ್ರ : 080-22975803
2. ಬೆಂಗಳೂರು ಉತ್ತರ : 080-22975936
3. ಬೆಂಗಳೂರು ದಕ್ಷಿಣ : 9480685704
4. ಬೆಂಗಳೂರು ಪೂರ್ವ : 9480685706
5. ಬೆಂಗಳೂರು ಪಶ್ಚಿಮ : 9480685703
ನಮೂನೆಗಳ (ಫಾರಂ) ಮೂಲಕ ಅರ್ಜಿ ಸಲ್ಲಿಕೆ:
ಗ್ರೇಟರ್ ಬೆಂಗಳೂರು ಆಡಳಿತ (ಮತದಾರರ ನೋಂದಣಿ) ನಿಯಮಗಳು, 2025 ರಂತೆ ವಾರ್ಡ್ವಾರು ಮತದಾರರ ಪಟ್ಟಿ ಸಿದ್ಧತೆಗೆ, ಆಯೋಗದಿಂದ ನೇಮಕಗೊಂಡ ಮತದಾರರ ನೋಂದಣಾಧಿಕಾರಿ / ಸಹಾಯಕ ಮತದಾರರ ನೋಂದಣಾಧಿಕಾರಿ / ಬಿ.ಎಲ್.ಓ ಅವರ ಬಳಿ ನಿಗಧಿತ ನಮೂನೆಗಳಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಬಹುದು.
1. ನಮೂನೆ–4 : ಮತದಾರರ ಹೆಸರು ಸೇರ್ಪಡೆಗೆ
2. ನಮೂನೆ–5 : ಹೆಸರು ಸೇರ್ಪಡೆಗೆ ಆಕ್ಷೇಪಣೆ
3. ನಮೂನೆ–6 : ಹೆಸರು ತಿದ್ದುಪಡಿಗೆ
4. ನಮೂನೆ–7 : ಸ್ಥಳ ಬದಲಾವಣೆಗೆ
5. ನಮೂನೆ–8 : ಹೆಸರು ತೆಗೆದುಹಾಕಲು
ಈ ಸಂದರ್ಭದಲ್ಲಿ ಜಿ.ಬಿ.ಎ. ಚುನಾವಣೆ ವಿಶೇಷ ಆಯುಕ್ತರಾದ ರಾಮಚಂದ್ರನ್, ನಗರ ಪಾಲಿಕೆಗಳ ಆಯುಕ್ತರುಗಳಾದ ರಾಜೇಂದ್ರ ಚೋಳನ್, ಪೊಮ್ಮಲ ಸುನೀಲ್ ಕುಮಾರ್, ರಮೇಶ್ ಡಿ.ಎಸ್., ಡಾ: ರಾಜೇಂದ್ರ ಕೆ.ವಿ, ಚುನಾವಣಾ ವಿಭಾಗದ ವಿಶೇಷ ಕರ್ತವ್ಯಾಧಿಕಾರಿಯಾದ ಸೆಲ್ವಮಣಿ, ಅಪರ ಆಯುಕ್ತರು, ಚುನಾವಣೆ ಸಹಾಯಕ ಆಯುಕ್ತರು, ತಹಸೀಲ್ದಾರ್, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಇತರ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.








