ಬೆಂಗಳೂರು: ಸಚಿವ ಪ್ರಿಯಾಂಕ್ ಖರ್ಗೆಯವರು ಪ್ರಚಾರದ ಗೀಳಿನಿಂದ ಅಪ್ರಸ್ತುತ ಮಾತನಾಡುತ್ತಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಅವರು ಟೀಕಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವರ ಬುದ್ಧಿ ಯಾವ ರೀತಿ ಓಡುತ್ತದೆ ಗೊತ್ತಿಲ್ಲ; ಮನಸ್ಥಿತಿ ಯಾವ ರೀತಿ ಇರುತ್ತದೆ ಎಂದು ಗೊತ್ತಿಲ್ಲ; ಅವರೇನು ಮಾತನಾಡುತ್ತಾರೆಂದು ಅವರಿಗೆ ಗೊತ್ತಿದೆಯೋ ಇಲ್ಲವೋ ಎಂದು ತಿಳಿಸಿದರು.
ಆರೆಸ್ಸೆಸ್ ಎಂದರೆ ರಾಷ್ಟ್ರ ನಿರ್ಮಾಣ ಮಾಡುವ ಸಂಘಟನೆ. ಇಂಥ ದೇಶಭಕ್ತ ಸಂಘಟನೆಯ ಚಟುವಟಿಕೆಗಳ ಮೇಲೆ ನಿಷೇಧ ಹೇರುವ ಪತ್ರ ಬರೆದಿದ್ದಾರೆ. ಸಮಾಜಕ್ಕೆ ಒಳಿತಾಗಬಾರದು; ವ್ಯಕ್ತಿ ನಿರ್ಮಾಣ ಆಗಬಾರದು ಎಂಬ ದುರುದ್ದೇಶದ ಪತ್ರವನ್ನು ಮುಖ್ಯಮಂತ್ರಿಗೆ ಬರೆದಿದ್ದಾರೆ ಎಂದು ಟೀಕಿಸಿದರು.
ಈ ವ್ಯಕ್ತಿ ಯಾವಾಗಲೂ ಅಪ್ರಸ್ತುತ ಮಾತನಾಡುತ್ತಾರೆ. ಅಪ್ರಸ್ತುತ ಕೆಲಸಗಳನ್ನು ಮಾಡುತ್ತಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರು, ಗ್ರಾಮೀಣಾಭಿವೃದ್ಧಿಯಲ್ಲಿ ಕ್ರಾಂತಿಕಾರಿಯಾದ ಕೆಲಸ ಮಾಡಲು ಅವಕಾಶವಿದೆ. ಐಟಿ, ಬಿಟಿ, ಎಲೆಕ್ಟ್ರಾನಿಕ್ಸ್ ಇಲಾಖೆಯಲ್ಲೂ ಕ್ರಾಂತಿಕಾರಿ ಕೆಲಸ ಮಾಡಬಹುದು; ಇವತ್ತು ನಮ್ಮ ಕರ್ನಾಟಕ, ನಮ್ಮ ಬೆಂಗಳೂರು ಇಡೀ ವಿಶ್ವದ ಗಮನ ಸೆಳೆದ ನಗರ. ಅಂಥ ಇಲಾಖೆಗಳನ್ನು ನಿರ್ವಹಿಸುವ ಈ ಮಹಾನುಭಾವರು ಸಚಿವರಾಗಿ ಈಗ ಎರಡೂವರೆ ವರ್ಷ ಆಗಿದೆ. ಇದರ ಮುಂಚೆಯೂ 2 ಬಾರಿ ಸಚಿವರಾಗಿದ್ದರು. ಮಲ್ಲಿಕಾರ್ಜುನ ಖರ್ಗೆಯವರ ಮಗ ಎಂಬುದೇ ಇವರ ಅರ್ಹತೆ ಎಂದು ವ್ಯಂಗ್ಯವಾಗಿ ನುಡಿದರು. ಅನುಭವ, ಜ್ಞಾನ, ಅರ್ಹತೆ ಇದೆಯೋ ಇಲ್ಲವೋ ಅವರಿಗೆ ಕೂತಲ್ಲೇ ಅಧಿಕಾರ ಲಭಿಸಿದೆ ಎಂದು ದೂರಿದರು.
ವಂಶಪಾರಂಪರ್ಯ ಆಧಾರದಿಂದ ನೀವು ಬಂದಿದ್ದೀರಿ. ನಿಮಗೆ ಯಾವ ನೈತಿಕತೆ ಇದೆ. ಜನರು ಅಧಿಕಾರ ಕೊಟ್ಟಿದ್ದಾರೆ; ನಿಮ್ಮ ಸಾಧನೆ ಮೂಲಕ ಮಾತನಾಡಿ ಎಂದು ಸವಾಲೆಸೆದರು. ಇಂಥ ಅಪ್ರಸ್ತುತ ವಿಚಾರ ಮಾತನಾಡುವ ಬದಲು ನಿಮ್ಮ ಸಾಧನೆ ಮಾತನಾಡಬೇಕು ಎಂದು ತಿಳಿಸಿದರು.
BREAKING: ತಮಿಳುನಾಡಿನಲ್ಲಿ ಕೈಗೊಂಡಂತೆ ‘RSS’ ವಿರುದ್ಧ ಕರ್ನಾಟಕದಲ್ಲಿ ಕ್ರಮ: ಸಿಎಂ ಸಿದ್ಧರಾಮಯ್ಯ ಘೋಷಣೆ
GOOD NEWS: ‘ಬೆಂಗಳೂರು ಸಿಟಿ ಪೊಲೀಸ’ರಿಗೆ ಗುಡ್ ನ್ಯೂಸ್: BMTC ಬಸ್ಸಿನಲ್ಲಿ ‘ಉಚಿತ ಪ್ರಯಾಣ’ಕ್ಕೆ ಅವಕಾಶ