ಬೆಂಗಳೂರು: ಈ ವರ್ಷ ಮಂಡಿಸುವ ಬಜೆಟ್‍ನಲ್ಲಿ ದಲಿತರಿಗೆ ಮೀಸಲಾಗಿಡುವ ಎಸ್.ಸಿ.ಪಿ., ಟಿ.ಎಸ್.ಪಿ.ಗೆ ಸೇರಿದ ಒಂದು ರೂಪಾಯಿ ಹಣವನ್ನು ಕೂಡ ಗ್ಯಾರಂಟಿಗಳಿಗೆ ಬಳಸಬಾರದು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರಿಗೆ ಮೀಸಲಿಟ್ಟ ಎಸ್.ಸಿ.ಪಿ., ಟಿ.ಎಸ್.ಪಿ. ಹಣದಲ್ಲಿ ಮೊದಲು ಅಂಬೇಡ್ಕರ್ ನಿಗಮ, ಆದಿ ಜಾಂಬವ ನಿಗಮ, ಬೋವಿ, ವಾಲ್ಮೀಕಿ ನಿಗಮ ಸೇರಿ ವಿವಿಧ ನಿಗಮಗಳ ಮೂಲಕ ಜಮೀನು ಇಲ್ಲದವರಿಗೆ ಜಮೀನುಗಳನ್ನು ಕೊಡಲಾಗುತ್ತಿತ್ತು. ಆದರೆ, ಭೂಮಿ ಕೊಟ್ಟಿಲ್ಲ; 39 ಸಾವಿರ ಕೋಟಿ ಮೀಸಲಿಟ್ಟರೂ ಎಲ್ಲ ನಿಗಮಗಳಿಗೆ ಸೇರಿ 500 ಕೋಟಿ ಕೊಡಲು ಇವರಿಗೆ ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.
ದಲಿತರ ಹಣ ಗ್ಯಾರಂಟಿಗೆ ಕೊಡುವುದೇಕೆ?
ದಲಿತರಿಗೆ ಇಟ್ಟ ಹಣವನ್ನು ಅವರಿಗಲ್ಲದೇ ಇನ್ನೊಬ್ಬರಿಗೆ ಖರ್ಚು ಮಾಡುವುದಿಲ್ಲ ಎನ್ನುತ್ತಾರೆ. ಆದರೆ, ಗ್ಯಾರಂಟಿಗಳಿಗೆ ಬಳಸುವುದು ತಪ್ಪು. ಸಾರ್ವಜನಿಕವಾಗಿ ಕೊಡುವ ಗ್ಯಾರಂಟಿಗೆ ದಲಿತರಿಗೆ ಮೀಸಲಿಟ್ಟ ಹಣ ಬಳಸುವುದು ತಪ್ಪು ಎಂದು ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದರು.
ದಲಿತ ಪದವೀಧರರಿಗೆ ಕೆಲಸ ಸಿಗುವಂತೆ ಮಾಡಿಲ್ಲ; ಕಾರ್ಖಾನೆ ಆರಂಭಿಸಲು ಸ್ವ ಉದ್ಯೋಗ ಆರಂಭಕ್ಕೆ ಸಾಲ ಮತ್ತಿತರ ಸೌಲಭ್ಯ ಕೊಟ್ಟಿಲ್ಲ ಎಂದು ತಿಳಿಸಿದರು. ಚಾಲನೆ ಕಲಿತವರಿಗೆ ಒಂದೇ ಒಂದು ಕಾರು ಕೊಡದವರು ಕಾಂಗ್ರೆಸ್ ಸರಕಾರ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಕೇವಲ ನೀವು ಕಾರು ತೆಗೆದುಕೊಳ್ಳುತ್ತೀರಿ; ನೀವು ಲ್ಯಾಂಬೊರ್ಗಿನಿ ಕೂಡ ತೆಗೆದುಕೊಳ್ಳುತ್ತೀರಿ ಎಂದು ವ್ಯಂಗ್ಯವಾಡಿದರು.
ನಮ್ಮ ಕಾಲದಲ್ಲಿ ಪರಿಶಿಷ್ಟ ಜಾತಿ, ವರ್ಗದವರಿಗೆ 75 ಯೂನಿಟ್ ಉಚಿತ ವಿದ್ಯುತ್ ಕೊಡುತ್ತಿದ್ದೆವು. ನೀವೇನೂ ಹೆಚ್ಚುವರಿ ಕೊಟ್ಟಿಲ್ಲ; ನಮ್ಮವರು ಕೂಲಿಕಾರ ಜನರು. ಬಜೆಟ್‍ನಲ್ಲಿ ನಮ್ಮವರಿಗೆ ಮೀಸಲಿಟ್ಟ ಹಣ ತೆಗೆದು ಯಾರಿಗೆ ಕೊಡುತ್ತ ಇದ್ದೀರಿ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರಕಾರವು ದಲಿತರಿಗೆ ಮನೆ ನಿರ್ಮಾಣ, ಜಮೀನು ನೀಡುವುದು, ಕಾರು ತೆಗೆದು ಕೊಡುವ ಕಾರ್ಯವನ್ನು ಮಾಡಿಲ್ಲ; ಗಂಗಾ ಕಲ್ಯಾಣದಡಿ ಪಂಪ್ ಸೆಟ್‍ಗೆ ಹಣ ಕೊಟ್ಟಿಲ್ಲ. ಎಸ್.ಸಿ.ಪಿ., ಟಿ.ಎಸ್.ಪಿ. ಸಂಬಂಧ ತಂದ ಕಾಯಿದೆಗೆ ವಿರುದ್ಧವಾಗಿ ಕಾಂಗ್ರೆಸ್ ಸರಕಾರ ನಡೆದುಕೊಳ್ಳುತ್ತಿದೆ ಎಂದು ಟೀಕಿಸಿದರು.
ಗ್ಯಾರಂಟಿ ಎಂಬುದು ಚುನಾವಣಾ ಗಿಮಿಕ್..
ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬರಲು ಗ್ಯಾರಂಟಿಗಳನ್ನು ಘೋಷಿಸಿತ್ತು. ಇದು ಕೇವಲ ಚುನಾವಣಾ ಗಿಮಿಕ್ ಆಗಿತ್ತು. ಕಳೆದೆರಡು ವರ್ಷಗಳಲ್ಲಿ ಗ್ಯಾರಂಟಿಗಳ ಅನುಷ್ಠಾನಕ್ಕೆ ನಿಗದಿತ ಮೊತ್ತ ನೀಡಿದ್ದರು. ಕಳೆದ ಬಜೆಟ್‍ನಲ್ಲಿ 52 ಸಾವಿರ ಕೋಟಿ ಗ್ಯಾರಂಟಿಗಳಿಗೆ ಮೀಸಲಿಟ್ಟಿದ್ದರು ಎಂದು ಛಲವಾದಿ ನಾರಾಯಣಸ್ವಾಮಿ ಅವರು ಗಮನಕ್ಕೆ ತಂದರು.
ಮುಖ್ಯಮಂತ್ರಿಗಳು, ಕೆಪಿಸಿಸಿ ಅಧ್ಯಕ್ಷರು, ಕಾಂಗ್ರೆಸ್ಸಿನ ಯಾವುದೇ ನಾಯಕರು ಭಾಷಣದಲ್ಲಿ ಕಾಕಾ ಪಾಟೀಲ್ ನಿನಗೂ ಫ್ರೀ, ಮಹದೇವಪ್ಪ ನಿನಗೂ ಫ್ರೀ ಎಂದರೆ, ಮುಖ್ಯಮಂತ್ರಿಗಳು ನನಗೂ ಫ್ರೀ, ನನ್ನ ಹೆಂಡತಿಗೂ ಫ್ರೀ ಎನ್ನುತ್ತಿದ್ದರು. ಇದು ಗ್ಯಾರಂಟಿಗಳು ಸರ್ವರಿಗೂ ಇರುವಂಥದ್ದು ಎಂಬಂತಿತ್ತು. ಕ್ರಮೇಣ ಇವರ ನಡವಳಿಕೆ ಬದಲಾಗಿದೆ. ಎಲ್ಲರಿಗೂ ಇದ್ದುದಕ್ಕೆ ಕಟ್ಟಳೆಗಳನ್ನು ಹಾಕಿ ಸೀಮಿತಗೊಳಿಸಿದರು ಎಂದು ಆಕ್ಷೇಪಿಸಿದರು.
ಗ್ಯಾರಂಟಿ ಕೊಡಲು ನಮ್ಮ ಅಭ್ಯಂತರವಿಲ್ಲ; ಆದರೆ, ಪರಿಶಿಷ್ಟ ಜಾತಿ, ವರ್ಗಗಳಿಗೆ, ದಲಿತರು, ತುಳಿತಕ್ಕೆ ಒಳಗಾದ ಸಮುದಾಯಗಳಿಗೆ ಮೀಸಲಿಟ್ಟ ಹಣವನ್ನು ಅವರಿಗೇ ಬಳಸದೆ ಇರುವುದು ದೊಡ್ಡ ಮೋಸ ಎಂದು ಆಕ್ಷೇಪಿಸಿದರು. 2013-14ರಲ್ಲಿ ನೀವು ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಜಾತಿ, ವರ್ಗಗಳ ಜನಸಂಖ್ಯೆ ಹೋಲಿಕೆ ಮಾಡಿ ಶೇ 40, ಇನ್ನುಳಿದ ಶೇ 60 ಅನ್ನು ಆಸ್ತಿಗಳಿಗಾಗಿ ಬಳಸಲು ತಿಳಿಸಲಾಗಿತ್ತು. ನೀವು ಮಾಡಿದ್ದೇನು? ಈ ಸಾರಿ 39 ಸಾವಿರ ಕೋಟಿ ಇಟ್ಟಿದ್ದಾಗಿ ಹೇಳಿದ್ದ ಮುಖ್ಯಮಂತ್ರಿಗಳು, ಪರಿಶಿಷ್ಟರಿಗೆ ಮೀಸಲಿಟ್ಟ ಹಣ ಬೇರೆಯವರಿಗೆ ಬಳಕೆ ಆಗಬಾರದೆಂದು ಕಾಯ್ದೆಯನ್ನೂ ತರಲಾಗಿದೆ ಎಂದರು.
ನಿಮ್ಮ ಕಟ್ಟಳೆಯನ್ನು ನೀವೇ ದುರುಪಯೋಗ ಮಾಡಿದ್ದೀರಿ. ಆ ಜನಾಂಗಕ್ಕೆ ಅನ್ಯಾಯ ಮಾಡಿದ್ದೀರಿ ಎಂದು ಆಕ್ಷೇಪಿಸಿದರು. ಎರಡು ಬಜೆಟ್‍ನಲ್ಲೂ ಇದನ್ನು ವಿರೋಧಿಸಿದ್ದೆ. ಮೊದಲ ವರ್ಷದಲ್ಲಿ 11,144 ಕೋಟಿ ರೂ.ಗಳನ್ನು ಇವರು ಗ್ಯಾರಂಟಿಗೆ ತೆಗೆದಿದ್ದರು. ಎರಡನೇ ಬಜೆಟ್‍ನಲ್ಲಿ 14,282 ಕೋಟಿಯನ್ನು ತೆಗೆದರು ಎಂದು ಟೀಕಿಸಿದರು.
ಒಂದೆಡೆ ಗ್ಯಾರಂಟಿ ಹಣ ಕೊಡದೆ ವಂಚನೆ ನಡೆದಿದೆ. ಮತ್ತೊಂದು ಕಡೆ ಪರಿಶಿಷ್ಟರಿಗೆ ಮೀಸಲಿಟ್ಟ ಹಣ ಗ್ಯಾರಂಟಿಗೆ ಬಳಸಿ ಇನ್ನೊಂದು ಕಡೆ ಅನ್ಯಾಯ ಮಾಡಿದ್ದಾರೆ. ಪರಿಶಿಷ್ಟ ಜಾತಿ, ಪಂಗಡಗಳು ಬುದ್ಧಿವಂತರಾದರೆ, ಬಡತನ ನಿರ್ಮೂಲನೆ ಆದರೆ, ಇವರಿಗೆ ಅರಿವು, ಜಾಗೃತಿ ಆದರೆ ಅಲ್ಲಿ ಕಾಂಗ್ರೆಸ್ಸೇ ಇರುವುದಿಲ್ಲ; ಈಗ ದೇಶದಲ್ಲಿ ಅದೇ ಪರಿಸ್ಥಿತಿ ಇದೆ. ದಲಿತ ಸಮುದಾಯಗಳು ಅಕ್ಷರ ಜ್ಞಾನ ಪಡೆದ ಬಳಿಕ, ಪ್ರಜ್ಞಾವಂತರಾದ ನಂತರ, ಬಾಬಾ ಸಾಹೇಬರ ಚಿಂತನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡ ಬಳಿಕ ದೇಶದಲ್ಲಿ ಕಾಂಗ್ರೆಸ್ಸಿಗರ ಪರಿಸ್ಥಿತಿ ಬಿಗಡಾಯಿಸಿದೆ ಎಂದು ವಿಶ್ಲೇಷಿಸಿದರು.
ಅಂಬೇಡ್ಕರರಿಗೂ ಅನ್ಯಾಯ ಮಾಡಿದ್ದ ಕಾಂಗ್ರೆಸ್ ಪಕ್ಷ..
ಕಾಂಗ್ರೆಸ್ ಪಕ್ಷ ಅಂಬೇಡ್ಕರರಿಗೂ ಅನ್ಯಾಯ ಮಾಡಿತ್ತು. ಅದನ್ನು ಹಾಗೇ ಮುಂದುವರೆಸಿ ದಲಿತ ಸಮುದಾಯಗಳನ್ನು ತನ್ನ ತೆಕ್ಕೆಯಲ್ಲಿ ಇಟ್ಟುಕೊಳ್ಳಲು ಅವರು ಬಡತನ ರೇಖೆಯಿಂದ ಮೇಲೆ ಬರದಂತೆ ಒಂದು ಕೈಯಲ್ಲಿ ಕೊಟ್ಟ ಹಾಗೆ ಮಾಡಿ, ಮತ್ತೊಂದೆಡೆ ಕಿತ್ತುಕೊಳ್ಳುವುದನ್ನು ಮುಂದುವರೆಸಿದೆ. ಜನರಿಗೆ ತೋರಿಕೆಗೆ ಸ್ಕೀಂಗಳನ್ನು ಪ್ರಕಟಿಸುವುದು- ಇದೇ ಇವರ ತಂತ್ರಗಾರಿಕೆ ಎಂದು ದೂರಿದರು.
ಜನರ ಮುಂದೆ ನಿಂತು ಸುಳ್ಳು ಹೇಳುವ ಕಾಂಗ್ರೆಸ್‍ನವರಲ್ಲಿ ಎಷ್ಟು ವಂಚಕತನ ಇದೆ? ಹಿಂದೆ ಜನತಾದಳದಲ್ಲಿ ಇದ್ದಾಗ ಮುಖ್ಯಮಂತ್ರಿಗಳು ಬಹಳ ಖಡಕ್ಕಾಗಿ ಮಾತನಾಡುತ್ತಿದ್ದರು. ಈಗ ಸುಳ್ಳು ಹೇಳುವುದರಲ್ಲಿ ವೀರಪ್ಪ ಮೊಯಿಲಿ ಅವರನ್ನೇ ಮೀರಿಸಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್ ಅವರು ಮಾತನಾಡಿ, ಎಸ್‍ಸಿ, ಎಸ್‍ಟಿ ಸಮುದಾಯಗಳಿಗೆ ಆಸ್ತಿ ನಿರ್ಮಾಣ, ಸ್ವ ಉದ್ಯೋಗಕ್ಕೆ ನೆರವು ಕೊಡಬೇಕಿತ್ತು. 7 ಅಭಿವೃದ್ಧಿ ನಿಗಮದ ಮೂಲಕ ಸ್ವಾವಲಂಬಿತನಕ್ಕೆ ಅವಕಾಶ ಕೊಡಬೇಕಿತ್ತು; ಅದು ಆಗುತ್ತಿಲ್ಲ; 7 ಅಭಿವೃದ್ಧಿ ನಿಗಮಗಳ ಕೆಲಸ ಸ್ಥಗಿತವಾಗಿದೆ ಎಂದು ವಿವರಿಸಿದರು.
ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀನಾರಾಯಣ್, ರಾಜ್ಯ ವಕ್ತಾರ ವೆಂಕಟೇಶ್ ದೊಡ್ಡೇರಿ, ಪಕ್ಷದ ಮುಖಂಡ ಅನಿಲ್ ಕುಮಾರ್ ಅವರು ಇದ್ದರು.
ಮಹಾಕುಂಭ 2025ರಲ್ಲಿ ದಾಖಲೆಯ 17000+ ರೈಲು ಸಂಚಾರ: ರೈಲ್ ಕರ್ಮಯೋಗಿಗಳ ಪ್ರಯತ್ನಗಳಿಗೆ ಅಶ್ವಿನಿ ವೈಷ್ಣವ್ ಕೃತಜ್ಞತೆ
BIG NEWS : `ರಾಜ್ಯ ಸರ್ಕಾರಿ ನೌಕರರೇ’ ಗಮನಿಸಿ : `ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ’ ನೋಂದಣಿ ಕುರಿತು ಇಲ್ಲಿದೆ ಮಾಹಿತಿ