ಶಿವಮೊಗ್ಗ : ಸಹಕಾರಿ ಕ್ಷೇತ್ರ ಅತ್ಯಂತ ಪವಿತ್ರವಾದ ಕ್ಷೇತ್ರವಾಗಿದ್ದು, ಅದರ ಪಾವಿತ್ರ್ಯತೆ ಹಾಳು ಮಾಡಬಾರದು. ಸಹಕಾರಿ ಸಂಸ್ಥೆಯಲ್ಲಿದ್ದು ರೈತರಿಗೆ, ಜನಸಾಮಾನ್ಯರಿಗೆ ಉಪಕಾರ ಮಾಡಬೇಕೆ ವಿನಃ, ಭ್ರಷ್ಟಾಚಾರ ನಡೆಸಿ ಉಪದ್ರವ ಕೊಡಬೇಡಿ ಎಂದು ಸಾಗರ ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಕಿವಿಮಾತು ಹೇಳಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಪವಿತ್ರ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹಾಗೂ ಸಹಕಾರ ಇಲಾಖೆಯಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಆಡಳಿತ ಮಂಡಳಿ, ನಿರ್ದೇಶಕರು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದಂತ ಅವರು, ಹಣ ಮಾಡುವ ಉದ್ದೇಶವಿದ್ದರೇ ಸಹಕಾರ ಸಂಘಕ್ಕೆ ಬರಬೇಡಿ. ಸೇವೆ ಮಾಡುವ ಮನಸ್ಸಿದ್ದವರಿಗೆ ಸಹಕಾರಿ ಕ್ಷೇತ್ರ ಅತ್ಯಂತ ಪೂರಕವಾಗಿರುತ್ತದೆ. ವೈಯಕ್ತಿಕ ಪ್ರತಿಷ್ಟೆಯನ್ನು ಬದಿಗಿಟ್ಟು ಕೆಲಸ ಮಾಡಿದಾಗ ಮಾತ್ರ ಸಹಕಾರ ಕ್ಷೇತ್ರದ ಮೂಲಕ ಸಮೂಹಕ್ಕೆ ಒಂದಷ್ಟು ಕೊಡುಗೆಯನ್ನು ನೀಡಲು ಸಾಧ್ಯವಿದೆ. ತಾಲ್ಲೂಕಿನಲ್ಲಿ ಕಲ್ಮನೆ ಹೊರತುಪಡಿಸಿ ಉಳಿದ ಸಹಕಾರ ಸಂಘಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಕಲ್ಮನೆ ಸೊಸೈಟಿಯನ್ನು ಸಹ ಸರಿದಾರಿಗೆ ತರುವ ಕೆಲಸ ಮಾಡಲಾಗುತ್ತಿದೆ ಎಂದರು.
ರೈತರ ಆಧಾರ ಸ್ತಂಭದಂತಿರುವ ಸಹಕಾರಿ ಕ್ಷೇತ್ರಗಳು ಗ್ರಾಮೀಣ ಭಾಗದ ಆರ್ಥಿಕ ಚೈತನ್ಯವನ್ನು ಕಾಪಾಡಿಕೊಂಡು ಬರುತ್ತಿದೆ. ಸಾಲ ವಸೂಲಾತಿ, ಸೌಲಭ್ಯ ಕಲ್ಪಿಸಲು ಇದು ಹೆಚ್ಚು ಪೂರಕವಾಗಿದೆ. ಹಣಕಾಸು ದುರುಪಯೋಗವಾಗದಂತೆ, ಸದಸ್ಯರ ಹಿತ ಕಾಯುವುದು ಹೇಗೆ ಎನ್ನುವುದನ್ನು ಇಂತಹ ಮಾಹಿತಿ ಕರ‍್ಯಾಗಾರಗಳ ಮೂಲಕ ಅರಿತುಕೊಳ್ಳಲು ಸಾಧ್ಯವಿದೆ. ನಮಗೂ ವಿಧಾನಸಭಾಧ್ಯಕ್ಷರು ಸದನದಲ್ಲಿ ನಡೆದುಕೊಳ್ಳಬೇಕಾದ ವಿಧಾನ ಕುರಿತು ತರಬೇತಿ ನೀಡುತ್ತಾರೆ. ಪ್ರತಿಯೊಂದು ಕ್ಷೇತ್ರದಲ್ಲಿ ಇರುವವರಿಗೂ ತರಬೇತಿ ಅತ್ಯಾಗತ್ಯ. ಈ ಆರ್ಥಿಕ ವರ್ಷದಿಂದ ತಾಲ್ಲೂಕಿನಲ್ಲಿ ಉತ್ತಮ ಸಹಕಾರಿ ಸಂಘಗಳಿಗೆ ಡಿಸಿಸಿ ಬ್ಯಾಂಕ್ ಮೂಲಕ ಹೆಚ್ಚಿನ ಸಾಲಸೌಲಭ್ಯ ಒದಗಿಸುವ ಜೊತೆಗೆ ಅತ್ಯುತ್ತಮವಾಗಿ ಕೆಲಸ ಮಾಡುವ ಮೂರು ಸಹಕಾರಿ ಸಂಸ್ಥೆಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹಕಾರಿ ಯೂನಿಯನ್ ಜಿಲ್ಲಾಧ್ಯಕ್ಷ ಹನುಮಂತಪ್ಪ ಸಿ. ವರ್ಷಕ್ಕೆ 8ಕ್ಕೂ ಹೆಚ್ಚು ತರಬೇತಿಗಳನ್ನು ಆಯೋಜಿಸುವ ಮೂಲಕ ಸಹಕಾರಿ ಕ್ಷೇತ್ರದಲ್ಲಿ ವ್ಯವಹರಿಸುವ ಕುರಿತು ಮಾಹಿತಿ ನೀಡಲಾಗುತ್ತದೆ. ಪ್ರತಿಯೊಂದು ಸಹಕಾರಿ ಸಂಸ್ಥೆಯ ಪ್ರಮುಖರು ಇಂತಹ ಕರ‍್ಯಾಗಾರಗಳಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವ ಮೂಲಕ ಮಾಹಿತಿ ತಿಳಿದುಕೊಳ್ಳಬೇಕು ಎಂದರು.
ಈ ವೇಳೆ ಸಹಕಾರಿ ಯೂನಿಯನ್ ಉಪಾಧ್ಯಕ್ಷ ಅಮೃತೇಶ್ವರ ಬಿ.ಎಂ., ಸಹಕಾರ ಸಂಘಗಳ ಸಹಾಯಕ ನಿಬಂಧಕ ಸತೀಶ್ ಕುಮಾರ್ ಎಚ್.ಎಸ್. ಉಪಸ್ಥಿತರಿದ್ದರು. ಸುನಂದ ಪ್ರಾರ್ಥಿಸಿದರು. ಯಶವಂತ ಕುಮಾರ್ ಎಚ್. ಸ್ವಾಗತಿಸಿದರು. ದಿನೇಶ್ ಬಿ.ಜಿ. ಬರದವಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಮಾರುತಿ ಎಚ್.ಎಚ್. ವಂದಿಸಿದರು. ಸಂತೋಷ ಕುಮಾರ್ ಆರ್. ನಿರೂಪಿಸಿದರು.
SHOCKING: ಶಾಲಾ ಸಮಯದಲ್ಲೇ ಮರಕ್ಕೆ ನೇಣು ಬಿಗಿದುಕೊಂಡು 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ
BREAKING: ರಾಜ್ಯದಲ್ಲಿ ವಾಹನಗಳ FC, ಸಾಗರೇತರ ನೋಂದಣಿ ನವೀಕರಣಕ್ಕೆ ಮಾರ್ಗಸೂಚಿ ಪ್ರಕಟ: ಈ ನಿಯಮ ಪಾಲನೆ ಕಡ್ಡಾಯ








