ದೇವನಹಳ್ಳಿ : “ಬೆಂಗಳೂರು ದಕ್ಷಿಣ ಹಾಗೂ ಉತ್ತರ ಜಿಲ್ಲೆಗಳಲ್ಲಿ ಹೊಸ ಬೆಂಗಳೂರು ನಿರ್ಮಾಣ ಮಾಡಿ ವಿಶ್ವದ ಜನರನ್ನು ಆಕರ್ಷಿಸಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದ ನೂತನ ಕಛೇರಿ ಕಟ್ಟಡವನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ದೇವನಹಳ್ಳಿಯ ಅಂಬಿಕಾ ಲೇಔಟ್ ನಲ್ಲಿ ಶನಿವಾರ ಉದ್ಘಾಟಿಸಿ ಮಾತನಾಡಿದರು.
“ಎತ್ತಿನಹೊಳೆ ಹಾಗೂ ಕಾವೇರಿ ನೀರನ್ನು ಈ ಭಾಗಕ್ಕೆ ನೀಡಬೇಕು ಎಂದು ಮುನಿಯಪ್ಪನವರು ನನ್ನ ಮೇಲೆ ಬಹಳ ಒತ್ತಡ ಹಾಕುತ್ತಿದ್ದಾರೆ. ನಾನು ಮಂತ್ರಿಯಾದ ಬಳಿಕ ಬೆಂಗಳೂರು ನಗರಕ್ಕೆ ಪ್ರತ್ಯೇಕವಾಗಿ 6 ಟಿಎಂಸಿ ನೀರನ್ನು ಮೀಸಲಿಡಲು ಆದೇಶ ಹೊರಡಿಸಿರುವೆ” ಎಂದರು.
“ನೀವೆಲ್ಲರೂ ನಮ್ಮ ನೀರು ನಮ್ಮ ಹಕ್ಕು ಎಂದು ಮೇಕೆದಾಟು ಹೋರಾಟದಲ್ಲಿ ಭಾಗವಹಿಸಿ ಹೆಜ್ಜೆ ಹಾಕಿದಿರಿ. ಇತ್ತೀಚೆಗೆ ಸುಪ್ರೀಂ ಕೋರ್ಟ್ ನಮ್ಮ ರಾಜ್ಯದ ಪರವಾಗಿ ತೀರ್ಪು ನೀಡಿದೆ. ಈ ವಿಚಾರದಲ್ಲಿ ನಮ್ಮ ಹಸ್ತಕ್ಷೇಪವಿಲ್ಲ. ತಾಂತ್ರಿಕ ವಿಚಾಗಳೇನೆ ಇದ್ದರು ಕೇಂದ್ರ ಜಲ ಆಯೋಗ ತೀರ್ಮಾನ ಮಾಡಬೇಕು ಎಂದು ತಿಳಿಸಿದೆ. ಎತ್ತಿನಹೊಳೆ ನೀರು ನೀಡುವ ಗುರಿ ಇದೆ. ಕೋಲಾರ, ಚಿಕ್ಕಬಳ್ಳಾಪುರ, ದೇವನಹಳ್ಳಿಗೆ ನೀರು ತರಲು ಪ್ರಯತ್ನಿಸುತ್ತಿದ್ದೇವೆ” ಎಂದು ತಿಳಿಸಿದರು.
“ಇಲ್ಲಿ ಯಾರೇ ಆಗಲಿ ಕೊಳಚೆ ನೀರನ್ನು ಯಾವುದೇ ಕಾರಣಕ್ಕೂ ಕೆರೆಗಳಿಗೆ ಬಿಡಬಾರದು. ಇದಕ್ಕೆ ಪ್ರತ್ಯೇಕ ಚರಂಡಿ ವ್ಯವಸ್ಥೆ ಮಾಡಬೇಕು. ಕೆರೆಗಳ ರಕ್ಷಣೆ ಮಾಡಿ. ಈ ಭಾಗ ಅಂತಾರಾಷ್ಟ್ರೀಯ ನಗರವಾಗಿ ಬೆಳೆಯಲಿದೆ. ಯೋಜನಾ ಪ್ರಾಧಿಕಾರದಿಂದ ಯಾವುದೇ ಬಡಾವಣೆ ರಸ್ತೆಯಾದರೂ 30-40 ಮೀಟರ್ ಅಗಲದ ರಸ್ತೆ ಕಡ್ಡಾಯವಾಗಿ ಇರಲೇಬೇಕು” ಎಂದು ಸೂಚಿಸಿದರು.
“ಕೆಂಪೇಗೌಡರ ಕನಸು ಮೀರಿ ಬೆಂಗಳೂರು ಬೆಳೆಯುತ್ತಿದೆ. ಬೆಂಗಳೂರಿನ ಸುತ್ತಮುತ್ತಲ ಪ್ರದೇಶವನ್ನು ಜಿಬಿಎ ವ್ಯಾಪ್ತಿಯ ಪಾಲಿಕೆಗಳಿಗೆ ಸೇರಿಸಲಾಗುವುದು. ಬಿಡದಿ, ಸೋಲೂರು, ನಂದಗುಡಿಯಲ್ಲಿ ಟೌನ್ ಶಿಪ್ ಮಾಡುತ್ತೇವೆ. ಇದನ್ನು ಡಿನೋಟಿಫಿಕೆಷನ್ ಮಾಡಲು ಸಾಧ್ಯವೇ ಇಲ್ಲ. ನಿನ್ನೆ ಕೂಡ ಹೈಕೋರ್ಟ್ ದ್ವಿಸದಸ್ಯ ಪೀಠ ಬಿಡಿಎ ಪರವಾಗಿ ಆದೇಶ ಬಂದಿದೆ. ರೈತರಿಗೆ ಅನುಕೂಲ ಮಾಡಿಕೊಡಲು ಉತ್ತಮ ಬೆಲೆ ಸಿಗುವಂತೆ ಮಾಡಲಾಗುವುದು” ಎಂದು ಭರವಸೆ ನೀಡಿದರು.
“ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ಬಿಡದಿ, ರಾಮನಗರ ಹೊಸ ಬೆಂಗಳೂರಾಗಲಿದೆ. ನೀವು ನಿಮ್ಮ ಆಸ್ತಿಗಳನ್ನು ಕಾಪಾಡಿಕೊಳ್ಳಿ. ನಿಮ್ಮ ಆಸ್ತಿಗಳಿಗೆ ಹೆಚ್ಚು ಮೌಲ್ಯ ಬರುವಂತೆ ಮಾಡುತ್ತನೆ. ಇಡೀ ವಿಶ್ವ ನೋಡುವಂತೆ ಬೆಂಗಳೂರನ್ನು ಪರಿವರ್ತನೆ ಮಾಡುತ್ತೇವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಪರಿಗಣಿಸಲಾಗಿದೆ. ನಮ್ಮ ಸರ್ಕಾರ ಸದಾ ನಿಮ್ಮ ಜೊತೆ ಇರಲಿದೆ” ಎಂದು ತಿಳಿಸಿದರು.
“2002-2004ರಲ್ಲಿ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಈ ಯೋಜನಾ ಪ್ರಾಧಿಕಾರಕ್ಕೆ ಸಹಿ ಹಾಕಿದ್ದೆ. ವಿಮಾನ ನಿಲ್ದಾಣ ಎಲ್ಲಿ ಮಾಡಬೇಕು, ಬಿಡದಿಯಲ್ಲಾ ಅಥವಾ ದೇವನಹಳ್ಳಿಯಲ್ಲಾ ಎಂದು ದೊಡ್ಡ ಚರ್ಚೆ ನಡೆಯುತ್ತಿತ್ತು. ಅಂದು ರಾಮಯ್ಯ ಅವರು, ಬಚ್ಚೆಗೌಡರು, ಮುನಿನರಸಿಂಹಯ್ಯನವರು ಈ ಭಾಗದ ರೈತರನ್ನು ಒಪ್ಪಿಸಿ ಪ್ರತಿ ಎಕರೆಗೆ ಕೇವಲ 6 ಲಕ್ಷದಂತೆ 2,400 ಎಕರೆ ಭೂಮಿಯನ್ನು ಕೊಡುವಂತೆ ಮಾಡಿದ್ದರು. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಕರೆಸಿ ಇದಕ್ಕೆ ಭೂಮಿ ಪೂಜೆ ಮಾಡಲಾಯಿತು” ಎಂದರು.
“ಇದರಿಂದ ಎಷ್ಟು ಜನರಿಗೆ ಉದ್ಯೋಗ ಸಿಕ್ಕಿತು, ಎಷ್ಟು ಅಭಿವೃದ್ಧಿಯಾಯಿತು. ಈ ಭೂಮಿಗೆ ಎಷ್ಟು ಬೆಲೆ ಬಂದಿದೆ ಎಂದು ಈ ಭಾಗದ ಜನರಿಗೆ ಗೊತ್ತಿದೆ. ಯೋಜನಾ ಪ್ರಾಧಿಕಾರದಲ್ಲಿ ನೀವೆಲ್ಲರೂ ನಿಯಮದಲ್ಲಿ ಕೆಲಸ ಮಾಡಬೇಕು. ಈ ಭಾಗಕ್ಕೆ ಕಾವೇರಿ ನೀರು ತರಲು ಅಧ್ಯವೇ ಇಲ್ಲ, ಕೇವಲ ವಿಮಾನ ನಿಲ್ದಾಣಕ್ಕೆ ಮಾತ್ರ ಕಾವೇರಿ ನೀರು ಪೂರೈಸೋಣ ಎಂದು ತೀರ್ಮಾನವಾಗಿತ್ತು. ನಂತರ ಅದನ್ನು ಸರಳೀಕರಣ ಮಾಡಿ ಕೆಲವರಿಗೆ ಕಾವೇರಿ ನೀರು ಪೂರೈಕೆ ಮಾಡಲಾಯಿತು” ಎಂದರು.
ಶಾಸಕ ಇಕ್ಬಾಲ್ ಮಾತನ್ನು ಗಂಭೀರವಾಗಿ ಪರಿಗಣಿಸಬೇಡಿ
ವಿಮಾನ ನಿಲ್ದಾಣದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು. ಡಿಸೆಂಬರ್ ನಲ್ಲಿ ಶಿವಕುಮಾರ್ ಅವರು ಸಿಎಂ ಆಗುತ್ತಾರೆ ಎಂಬ ಶಾಸಕ ಇಕ್ಬಾಲ್ ಹುಸೇನ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಯಾರೂ ಶಾಸಕ ಇಕ್ಬಾಲ್ ಹುಸೇನ್ ಅವರ ಮಾತನ್ನು ಗಣನೆಗೆ ತೆಗೆದುಕೊಳ್ಳುವುದು ಬೇಡ. ಆತ ಚಟಕ್ಕೆ ಮಾತನಾಡುತ್ತಾನೆ” ಎಂದು ತಿಳಿಸಿದರು.
‘ಹಿರಿಯ ಪತ್ರಕರ್ತ ಅ.ಚ.ಶಿವಣ್ಣ’ಗೆ KUWJ ಶ್ರದ್ಧಾಂಜಲಿ: ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಶ್ಲಾಘನೆ
ಪೋಷಕರೇ ಗಮನಿಸಿ : ಮಕ್ಕಳಿಗೆ ‘ಬ್ಲೂ ಆಧಾರ್ ಕಾರ್ಡ್’ ಮಾಡಿಸುವುದು ಹೇಗೆ.? ಇಲ್ಲಿದೆ ಮಾಹಿತಿ








