ಕಲಬುರಗಿ: ಹಣ ನೀಡುವಂತೆ ಬೇಡಿಕೆ ಇಟ್ಟಿರುವ ಪರಿಣಾಮ ಪಿಎಸ್‌ಐ ಪರಶುರಾಮ ಆತ್ಮಹತ್ಯೆ ಪ್ರಕರಣ ಮಾಸುವ ಮುನ್ನವೇ ಯಾದಗಿರಿ ಡಿವೈಎಸ್ಪಿ ಹುದ್ದೆಗೆ ವರದಿ ಮಾಡಿಕೊಳ್ಳದಂತೆ ಅಡ್ಡಿಪಡಿಸಿರುವ ವಿರುದ್ಧ ಮಾಜಿ ಶಾಸಕ, ಬಿಜೆಪಿ ವಿಭಾಗೀಯ ಪ್ರಭಾರಿ ರಾಜಕುಮಾರ ಪಾಟೀಲ್ ತೇಲ್ಕೂರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿವೈಎಸ್ಪಿ ಹುದ್ದೆಯ ತರಬೇತಿ ಪೂರ್ಣಗೊಳಿಸಿ ಯಾದಗಿರಿಯಲ್ಲಿ ಡಿವೈಎಸ್ಪಿ ಹುದ್ದೆಯ ಕಾರ್ಯಭಾರದ ಕರ್ತವ್ಯದ ವರದಿ ಮಾಡಿಕೊಳ್ಳದಿರುವಂತೆ ಒತ್ತಡ ಹಾಕಿರುವುದನ್ನು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡು ಮತ್ತೊಂದು ದುರಂತಕ್ಕೆ ಅವಕಾಶ ಮಾಡಿಕೊಡದೇ ತಕ್ಷಣವೇ ಕರ್ತವ್ಯ ಹಾಜರಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಮಾಜಿ ಶಾಸಕರು ಆಗ್ರಹಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ ಮೋಹನ್ ಅವರಿಗೆ ಪತ್ರ ಬರೆದಿರುವ ತೇಲ್ಕೂರ, ಜೇವರ್ಗಿ ತಾಲೂಕಿನ ವಿಜಯಕ್ರಾಂತಿ ಪ್ರತಿಭಾನ್ವಿತೆ. ಸ್ಪರ್ಧಾತ್ಮಕಾ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ನೇರವಾಗಿ ಡಿವೈಎಸ್ಪಿಯಾಗಿದ್ದಾರೆ. ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದರಿಂದ ತೆರವು ಇದ್ದ ಯಾದಗಿರಿ ಡಿವೈಎಸ್ಪಿ ಹುದ್ದೆಯ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಮಹಾನಿರ್ದೇಶಕರು ಕಳೆದ ಜೂನ್ ೩೦ರಂದು ಆದೇಶ ಹೊರಡಿಸಿದ್ದಾರೆ. ಆದರೆ ೧೦ ದಿನ ಕಳೆದರೂ ಕರ್ತವ್ಯಕ್ಕೆ ಹಾಜರಾಗಿ ವರದಿ ಮಾಡಿಕೊಳ್ಳಲಿಕ್ಕಾಗುತ್ತಿಲ್ಲ. ಯಾದಗಿರಿ ಶಾಸಕರು ಹಾಗೂ ಅವರ ಪುತ್ರ ಬೇಡಿಕೆಯನ್ನಿಟ್ಟು ಕರ್ತವ್ಯಕ್ಕೆ ಹಾಜರಾಗದಂತೆ ಅಡ್ಡಿಪಡಿಸಿದ್ದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.
ಕಲ್ಯಾಣ ಕರ್ನಾಟಕದ ಪ್ರತಿಭೆ ಡಿವೈಎಸ್ಪಿ ಹುದ್ದೆಯನ್ನು ನೇರವಾಗಿ ಆಯ್ಕೆಯಾಗಿರುವುದು ಎಲ್ಲರಿಗೂ ಹೆಮ್ಮೆಯ ಸಂಗತಿ. ಆದರೆ ಇಂತಹ ಪ್ರತಿಭಾನ್ವಿತ ಅಧಿಕಾರಿಯನ್ನು ಕರ್ತವ್ಯಕ್ಕೆ ಹಾಜರಾಗದಂತೆ ವ್ಯವಸ್ಥೆ ರೂಪುಗೊಂಡಿರುವುದು ಕಪ್ಪು ಮಸಿಯಾಗಿದೆ ಎಂದು ವಿವರಣೆ ನೀಡಿದ್ದಾರೆ.
ತಮ್ಮ ಪ್ರತಿಭೆ ಮೂಲಕ ಹಗಲಿರಳು ಓದಿ ಹುದ್ದೆಯನ್ನು ಪಡೆದಿರುವಂತಹ ಪ್ರತಿಭಾನ್ವಿತರಿಗೆ ಇಲಾಖಾ ಸೇವೆಗೆ ಹಾಜರಾಗುವ ಪ್ರಾರಂಭದಲ್ಲೇ ಹಣದಂತಹ ಬೇಡಿಕೆ ಇಟ್ಟರೆ ಮನಸ್ಸಿನ ಎಂತಹ ಪರಿಣಾಮ ಬೀರುತ್ತದೆ ಎಂದು ಊಹಿಸಲಿಕ್ಕಾಗದು. ರಾಜ್ಯ ಸರ್ಕಾರದ ಆಡಳಿತ ವೈಖರಿಗೆ ಇದು ಹಿಡಿದ ಕನ್ನಡಿ ಎನ್ನಬಹುದು. ಆದ್ದರಿಂದ ಈಗಲಾದರೂ ತಾವು ಎಚ್ಚೆತ್ತು ವಿಜಯಕ್ರಾಂತಿ ಅವರು ತತ್‌ಕ್ಷಣವೇ ಯಾದಗಿರಿ ಡಿವೈಎಸ್ಪಿ ಹುದ್ದೆಗೆ ವರದಿ ಮಾಡಿಕೊಳ್ಳದಿದ್ದರೆ, ಅದರಲ್ಲೂ ಸೋಮವಾರದೊಳಗೆ ಕರ್ತವ್ಯಕ್ಕೆ ಹಾಜರಾಗದಿದ್ದರೆ ಪೊಲೀಸ್ ಮಹಾನಿರ್ದೇಶಕರ ಕಚೇರಿ ಎದುರು ಧರಣಿ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಒಬ್ಬ ಯುವತಿ ಅದರಲ್ಲೂ ನಮ್ಮ ಭಾಗದ ಪ್ರತಿಭಾನ್ವಿತೆ ವಿಜಯಕ್ರಾಂತಿ ಅವರು ನೇರವಾಗಿ ಡಿವೈಎಸ್ಪಿಯಾಗಿರುವುದು ಹೆಮ್ಮೆಯ ಸಂಗತಿ. ನಮ್ಮ ಭಾಗದಲ್ಲೇ ಮೊದಲ ಸೇವೆಗೆ ಅವಕಾಶ ದೊರಕಿದ್ದನ್ನು ನಾವೆಲ್ಲರೂ ಮನಪೂರ್ವಕವಾಗಿ ಸ್ವಾಗತಿಸಿಕೊಳ್ಳಬೇಕು. ಆದರೆ ಯಾದಗಿರಿಯಲ್ಲಿ ಕರ್ತವ್ಯಕ್ಕೆ ಹಾಜರಾಗದಂತೆ ಅಡ್ಡಿಪಡಿಸಿರುವುದು ಪರಶರಾಮ ಪ್ರಕರಣದಿಂದ ಪಾಠ ಕಲಿತ್ತಿಲ್ಲ ಎಂಬುದು ಸಾಬೀತುಪಡಿಸುತ್ತದೆ. ಈ ನಿಟ್ಟಿನಲ್ಲಿ ಪ್ರಜ್ಞಾವಂತ ಸಮಾಜ ಅವಲೋಕನ ಮಾಡಿಕೊಳ್ಳುವುದು ಅವಶ್ಯಕವೆನಿಸುತ್ತದೆ. ಅಧಿಕಾರಿಗಳ ಪ್ರಾಣ ಹಿಂಡುವ ಮಟ್ಟಿಗೆ ಭೃಷ್ಟಾಚಾರ ವ್ಯಾಪಕಗೊಂಡಿರುವುದು ನಿಜಕ್ಕೂ ಆತಂಕಕಾರಿ ಸಂಗತಿ ಎಂದಿದ್ದಾರೆ.