ಬೆಂಗಳೂರು: ರಾಜ್ಯದಲ್ಲಿ ನಡೆದಿರೋ ಹೆಣ್ಣು ಭ್ರೂಣ ಹತ್ಯೆ ಪ್ರಕರಣದಲ್ಲಿ ರಾಜಕೀಯ ಮಾಡಬೇಡಿ. ನಾವು ಈ ಕೇಸಲ್ಲಿ ಕಠಿಣ ನಿಲುವು ತೆಗೆದುಕೊಂಡಿದ್ದೇವೆ ಎಂಬುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬಿಜೆಪಿಗರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಇಂದು ಎಕ್ಸ್ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವಂತ ಅವರು,ವಿಪಕ್ಷ ನಾಯಕರಾದ ಆರ್.ಅಶೋಕ್ ಅವರೇ.. ಹೆಣ್ಣು ಭ್ರೂಣ ಹತ್ಯೆ ವಿಚಾರದಲ್ಲಿ ರಾಜಕೀಯ ಬೇಡ ಎಂದು ನಾನು ಲೇಖನದ ರೂಪದಲ್ಲಿ ನಿಮ್ಮ ಅಂಕಣಕ್ಕೆ ಉತ್ತರಿಸಿದ್ದೇನೆ. ಆದರೂ, ನೀವು ಮತ್ತೆ ಇದರಲ್ಲಿ ರಾಜಕಾರಣದ ಮಾತನ್ನಾಡಿದ್ದೀರಿ. ಸರ್ಕಾರವಾಗಿ ನಾವು ಭ್ರೂಣ ಹತ್ಯೆ ವಿಚಾರದಲ್ಲಿ ಎಷ್ಟು ಕಠಿಣ ನಿಲುವನ್ನು ತೆಗೆದುಕೊಳ್ಳುತ್ತಿದ್ದೇವೆ ಎಂಬುದು ನಮ್ಮ ಕಾರ್ಯಾಚರಣೆಗಳೇ ಸ್ಪಷ್ಟಪಡಿಸುತ್ತವೆ. ನಾವು ಹೆಚ್ಚು ಕಾರ್ಯಚರಣೆ ಮಾಡುತ್ತಿರುವುದರಿಂದಲೇ ಇಂದು ಹೆಚ್ಚು ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ ಎಂಬ ವಾಸ್ತವ ಸಂಗತಿ ತಮಗೆ ಅರಿವಿರಲಿ ಎಂಬುದಾಗಿ ತಿಳಿಸಿದ್ದಾರೆ.
ಈ ಜಾಲವನ್ನ ಗೃಹ ಸಚಿವರಾಗಿದ್ದ ತಾವು ಎಷ್ಟರ ಮಟ್ಟಿಗೆ ಭೇಧಿಸಿದ್ದಿರಿ ಎಂಬುದಕ್ಕೆ ನಿಮ್ಮ ಬಳಿ ಉತ್ತರವಿಲ್ಲ. ನಿಮ್ಮ ಕಾಲದಲ್ಲಿ ಎಷ್ಟು ಹೆಣ್ಣು ಭ್ರೂಣ ಹತ್ಯೆಗಳು ಬಯಲಿಗೆ ಬಂದಿವೆ ಹೇಳಿ ಸ್ವಾಮಿ.. ಎಲ್ಲವನ್ನು ಮುಚ್ಚಿಟ್ಟಿದ್ರಾ..? ಕೋವಿಡ್ ಸಾವುಗಳನ್ನ ಮುಚ್ಚಿಟ್ಟು ಹೆಣಗಳ ಮೇಲೆ ರಾಜಕೀಯ ಮಾಡಿದವರು ಭ್ರೂಣ ಹತ್ಯೆಗಳನ್ನ ಮುಚ್ಚಿಟ್ಟಿದ್ದರು ಇರಬಹುದು ಎಂಬುದಾಗಿ ವಾಗ್ಧಾಳಿ ನಡೆಸಿದ್ದಾರೆ.
ಜಾಮೀನು ಪಡೆದವರ ವಿರುದ್ಧ ಮತ್ತೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಿಐಡಿ ಕಾರ್ಯನಿರತವಾಗಿದೆ. ಅಲ್ಲದೇ ಜಾಮೀನು ಪಡೆದ ಒರ್ವನನ್ನ ನಮ್ಮ ಆರೋಗ್ಯ ಅಧಿಕಾರಿಗಳೇ ಪೊಲೀಸರ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. PC & PNDT ಕಾಯ್ದೆಯಡಿ ಶಿಕ್ಷೆ ಹಾಗೂ ದಂಡದ ಪ್ರಮಾಣ ಹೆಚ್ವಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಆದರೆ ಇನ್ನೂ ಕೇಂದ್ರ ಸರ್ಕಾರ ತನ್ನ ತೀರ್ಮಾನ ತಿಳಿಸಿಲ್ಲ. ತಾವು ತಮ್ಮ ಕೇಂದ್ರ ನಾಯಕರೊಂದಿಗೆ ಚರ್ಚಿಸಿ ಆದಷ್ಟು ಬೇಗ ಪಿ.ಸಿ&ಪಿ.ಎನ್ ಡಿ.ಟಿ ಕಾಯ್ದೆ ಪರಿಷ್ಕರಣೆ ಒತ್ತಡ ಹಾಕುವತ್ತ ಗಮನಹರಿಸಿ ಎಂದು ತಿಳಿಸಿದ್ದಾರೆ.