ಬೆಂಗಳೂರು: ರಾಜ್ಯದಲ್ಲಿನ ಮಕ್ಕಳ ಶಾಲಾ ಸಮಯದಲ್ಲಿ ಆಟದ ಅವಧಿಯನ್ನು ಕಡಿತಗೊಳಿಸದಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗವು ಶಾಲಾ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿದೆ.
ಈ ಕುರಿತಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಡಾ.ಕೆ.ಟಿ ತಿಪ್ಪೇಸ್ವಾಮಿ ಅವರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ರಾಜ್ಯದ ವಿವಿಧ ಭಾಗಗಳಲ್ಲಿ ನಡೆಸಿದ ಮಕ್ಕಳೊಂದಿಗೆ ಸಂವಾದ, ಶಾಲಾ ಭೇಟಿಯ ಸಮಯದಲ್ಲಿ 10ನೇ ತರಗತಿಯ ಮಕ್ಕಳು ವೇಳಾಪಟ್ಟಿಯಲ್ಲಿ ನಿಗದಿಗೊಳಿಸಿದ ಆಟದ ಅವಧಿಗಳನ್ನು ನಡೆಸದೆ ಇರುವ ಬಗ್ಗೆ ಆಯೋಗದ ಗಮನಕ್ಕೆ ತಂದಿರುತ್ತಾರೆ ಎಂದಿದ್ದಾರೆ.
ಸ್ವತಃ ನಾನು ಹಲವು ಪ್ರೌಢಶಾಲೆಯ ಮಕ್ಕಳ ಜೊತೆಗೆ ಮಾತನಾಡಿದಾಗ ಇದನ್ನು ಗಮನಿಸಿರುತ್ತೇನೆ. ಆಟ, ಕಲೆ, ಸಂಗೀತದಂತಹ ಪತ್ಯೇತರ ಚಟುವಟಿಕೆಗಳು ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಾಸದ ಅವಿಭಾಜ್ಯ ಅಂಗ. ಇದನ್ನು ಮನಗಂಡು ವಿಶ್ವಸಂಸ್ಥೆಯು ಜೂನ್ 11 ಅನ್ನು ಪ್ರತೀ ವರ್ಷ ಅಂತರಾಷ್ಟ್ರೀಯ ಆಟದ ದಿನವೆಂದು ಗುರುತಿಸಿದೆ. 10ನೇ ತರಗತಿಯ ಪರೀಕ್ಷೆಯಲ್ಲಿ ಶಾಲೆ ಉತ್ತಮ ಫಲಿತಾಂಶ ಗಳಿಸಬೇಕೆನ್ನುವ ಒಂದೇ ಕಾರಣದಿಂದ ಮಕ್ಕಳ ಆಟೋಟಗಳನ್ನು ಹೀಗೆ ನಿರ್ಭಂಧಿಸುವುದು ವಿಪರ್ಯಾಸದ ಸಂಗತಿ. ಇದು ಮಕ್ಕಳ ಕಲಿಕೆಯ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುದಾಗಿ ಹೇಳಿದ್ದಾರೆ.
ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪರಿಚ್ಛೇಧ 31ರ ಪ್ರಕಾರ ಆಟ ಮಕ್ಕಳ ಹಕ್ಕು. ಅದನ್ನು ನಿರ್ಭಂಧಿಸುವುದು ಮಕ್ಕಳ ಅಭಿವೃದ್ಧಿ ಹೊಂದುವ ಹಕ್ಕಿನ ಉಲ್ಲಂಘನೆಯಾಗುತ್ತದೆ. ಆದರೆ ತಳಮಟ್ಟದಲ್ಲಿನ ಶಿಕ್ಷಕರು ಹಾಗೂ ಅಧಿಕಾರಿಗಳ ತಪ್ಪುಗ್ರಹಿಕೆಗಳು, ಮಕ್ಕಳ ಹಕ್ಕುಗಳ ಜಾಗೃತಿಯ ಕೊರತೆಯ ಕಾರಣದಿಂದ ಮಕ್ಕಳು ತೊಂದರೆ ಅನುಭವಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ತಾವು ಇಲಾಖೆಯ ನಿಯಮಾನುಸಾರ ಶಾಲಾ ವೇಳಾಪಟ್ಟಿಯಂತೆ ಆಟದ ಅವಧಿಗಳನ್ನು ಕಡ್ಡಾಯವಾಗಿ ನಡೆಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲು ಕೋರಿದ್ದಾರೆ.

BREAKING: ನೆಲಮಂಗಲದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯನ ಮೇಲೆ ಅಪರಿಚಿತರಿಂದ ಗುಂಡಿನ ದಾಳಿ
BIG NEWS : ಅಕ್ರಮವಾಗಿ `BPL’ ರೇಷನ್ ಕಾರ್ಡ್ ಪಡೆದವರಿಗೆ ಸರ್ಕಾರದಿಂದ ಬಿಗ್ ಶಾಕ್.!








