ಬೆಂಗಳೂರು : ತಮ್ಮ ಜನ್ಮದಿನವಾದ ಮೇ 15 ರಂದು ಚುನಾವಣೆ ಪ್ರಚಾರ, ಖಾಸಗಿ ಕಾರ್ಯಕ್ರಮ ನಿಮಿತ್ತ ತಾವು ಉತ್ತರ ಭಾರತ ಪ್ರವಾಸ ಕೈಗೊಳ್ಳುತ್ತಿದ್ದು, ಅಂದು ಯಾರಿಗೂ ಸಿಗುವುದಿಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.
ಪಕ್ಷದ ನಾಯಕರು, ಕಾರ್ಯಕರ್ತರು, ಅಭಿಮಾನಿಗಳು, ಬಂಧುಗಳು ಅಂದು ತಮ್ಮನ್ನು ಭೇಟಿ ಮಾಡಲು ಪ್ರಯತ್ನಿಸುವುದು ಬೇಡ. ದಯವಿಟ್ಟು ಯಾರೂ ತಪ್ಪು ತಿಳಿಯಬಾರದು. ತಾವು ಇದ್ದಲ್ಲಿಂದಲೇ ನನ್ನನ್ನು ಆಶೀರ್ವದಿಸಿ, ಹಾರೈಸಿ ಎಂದು ಶಿವಕುಮಾರ್ ಅವರು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಬರಗಾಲವಿದೆ. ಮಳೆ, ಬೆಳೆ ಇಲ್ಲದೆ ಜನರು ಬವಣೆ ಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯಾರೂ ನನ್ನ ಜನ್ಮದಿನವನ್ನು ಆಚರಿಸಬಾರದು. ಯಾವುದೇ ಕಾರ್ಯಕ್ರಮ ಹಮ್ಮಿಕೊಳ್ಳಬಾರದು. ಕಟೌಟ್, ಪೋಸ್ಟರ್ಸ್ ಹಾಕುವುದಾಗಲಿ, ಮಾಧ್ಯಮಗಳಲ್ಲಿ ಜಾಹೀರಾತು ನೀಡುವುದಾಗಲಿ ಮಾಡಬಾರದು. ನಿಮ್ಮ ಪ್ರೀತಿಯಷ್ಟೇ ನನಗೆ ಸಾಕು. ಅದುವೇ ನನಗೆ ಶ್ರೀರಕ್ಷೆ ಎಂದು ಶಿವಕುಮಾರ್ ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.