ಶಿವಮೊಗ್ಗ : ಸಮಾಜಮುಖಿ ಸೇವೆ ಮಾಡುವುದರಿಂದ ದಾನಿಗಳ ಹೆಸರು ಶಾಶ್ವತವಾಗಿ ಉಳಿಯುತ್ತದೆ. ನಿಮ್ಮ ಸೇವೆ ಇತರರಿಗೆ ಸ್ಪೂರ್ತಿಯಾಗುತ್ತದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಂದು ಶಿವಮೊಗ್ಗದ ಸಾಗರದಲ್ಲಿನ ಜೋಗ ಬಸ್ ನಿಲ್ದಾಣದ ಕೋರ್ಟ್ ವೃತ್ತದಲ್ಲಿ ಸೋಮವಾರ ಲಯನ್ಸ್ ಸಂಸ್ಥೆ ವತಿಯಿಂದ ದಿ. ಈಶ್ವರಪ್ಪ ನಾಯ್ಕ್ ಸ್ಮರಣಾರ್ಥ ಅವರ ಪುತ್ರ ನ್ಯಾಯವಾದಿ ನಾಗರಾಜ್ ಈ. ನೀಡಿರುವ ಬಸ್ ತಂಗುದಾಣ ನಿರ್ಮಾಣದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದಂತ ಅವರು, ಸೇವೆಯೊಂದೆ ನಮ್ಮ ಹೆಸರನ್ನು ಶಾಶ್ವತವಾಗಿ ಜನಮಾನಸದಲ್ಲಿ ಉಳಿಯುವಂತೆ ಮಾಡುವುದು. ಈ ಹಿನ್ನೆಲೆಯಲ್ಲಿ ಲಯನ್ಸ್ ಸಂಸ್ಥೆ ಅನೇಕ ಸೇವಾ ಕಾರ್ಯಗಳನ್ನು ನಿರಂತರವಾಗಿ ಮಾಡುವ ಮೂಲಕ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದೆ. ದಾನಿಗಳು ಲಯನ್ಸ್ ಮೂಲಕ ತಮ್ಮ ಸಮಾಜಸೇವೆಯನ್ನು ಮುಂದುವರೆಸಲು ಎಲ್ಲ ಅವಕಾಶ ಇದೆ. ಡಾ. ಪ್ರಸನ್ನ ಲಯನ್ಸ್ ಅಧ್ಯಕ್ಷರಾದ ಮೇಲೆ ಅನೇಕ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ನ್ಯಾಯವಾದಿ ನಾಗರಾಜ್ ತಮ್ಮ ತಂದೆಯವರ ಹೆಸರಿನಲ್ಲಿ ನೆನಪಿನಲ್ಲಿ ಉಳಿಯುವ ಅನೇಕ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. 2004ರಲ್ಲಿ ನಾನು ಚುನಾವಣೆಗೆ ನಿಲ್ಲುವಾಗ ಈಶ್ವರಪ್ಪ ನಾಯಕ್ ಅವರು ನೀಡಿದ ಸಹಕಾರ ಮರೆಯುವಂತಿಲ್ಲ. ಅವರ ಹೆಸರನ್ನು ಉಳಿಸುವ ಕೆಲಸವನ್ನು ಪುತ್ರ ನಾಗರಾಜ್ ಮಾಡುತ್ತಿರುವುದು ಅನುಕರಣೀಯ ಎಂದು ಹೇಳಿದರು.
ಲಯನ್ಸ್ ಜಿಲ್ಲಾ ಗರ್ವನರ್ ಸ್ವಪ್ನ ಸುರೇಶ್ ಮಾತನಾಡಿ, ಸಾಗರದಲ್ಲಿ ಲಯನ್ಸ್ ಸಂಸ್ಥೆ ಪ್ರಾರಂಭವಾಗಿ 53 ವರ್ಷವಾಗಿದ್ದು ನಿರಂತರವಾಗಿ ಸೇವಾಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ. ಈ ವರ್ಷ ಅತಿಹೆಚ್ಚು ಕೆಲಸ ಮಾಡುತ್ತಿದ್ದು ನಾಲ್ಕು ಜಿಲ್ಲೆಗಳ ಲಯನ್ಸ್ ಉನ್ನತ ಸ್ಥಾನದಲ್ಲಿರುವ ಸಂಸ್ಥೆಗಳಲ್ಲಿ ಪ್ರಥಮ ಸ್ಥಾನ ಗಳಿಸುವತ್ತ ಸಾಗುತ್ತಿದೆ. ಇಂತಹ ಕಾರ್ಯಕ್ರಮಗಳು ಲಯನ್ಸ್ ಸಂಸ್ಥೆಯ ಹೆಸರನ್ನು ಶಾಶ್ವತವಾಗಿ ಉಳಿಸುತ್ತದೆ. ಈ ವರ್ಷ ಲಯನ್ಸ್ ಸಂಸ್ಥೆ ಸ್ಪೂರ್ತಿ ಘೋಷವಾಕ್ಯದಡಿ ಅನೇಕ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ ಎಂದು ಹೇಳಿದರು.
ಈ ವೇಳೆ ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್, ಲಯನ್ಸ್ ದ್ವಿತೀಯ ಜಿಲ್ಲಾ ಉಪ ಗರ್ವನರ್ ಅಶ್ವಿನಿಕುಮಾರ್ ಮಾತನಾಡಿದರು. ಲಯನ್ಸ್ ಅಧ್ಯಕ್ಷ ಡಾ. ಪ್ರಸನ್ನ ಟಿ. ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸುರೇಶ್ ಪ್ರಭು, ನಾಗರಾಜ್ ಈ., ಪ್ರಕಾಶ್, ವಿನಯಕುಮಾರ್, ಎಂ.ಬಿ.ಗಿರೀಶ್, ಕೆ.ಬಿ.ಮಹಾಬಲೇಶ್, ವಿನಯ್ ಎನ್.ಆರ್. ಇನ್ನಿತರರು ಹಾಜರಿದ್ದರು.
ವಿಜಿ ರಾಮ್ ಜಿ ಹೆಸರನ್ನು ಉದ್ಯೋಗಖಾತ್ರಿಗೆ ಇರಿಸಲು ಮುಂದಾದ ಕೇಂದ್ರದ ಕ್ರಮ ಖಂಡನೀಯ: ಶಾಸಕ ಗೋಪಾಲಕೃಷ್ಣ ಬೇಳೂರು








