ನವದೆಹಲಿ:ಪರ್ಷಿಯನ್ ಕೊಲ್ಲಿಯ ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗಿರುವ ಉದ್ವಿಗ್ನತೆಯ ನಡುವೆ, “ಇರಾನ್ ತನ್ನ ಜಲಮಾರ್ಗವನ್ನು ಬಳಸುವ ಭಾರತೀಯ ಹಡಗುಗಳಿಗೆ ಟೋಲ್ ಅಥವಾ ಸಂಚಾರ ಶುಲ್ಕ ವಿಧಿಸುತ್ತಿದೆಯೇ?” ಎಂಬ ಪ್ರಶ್ನೆ ಜಾಗತಿಕ ವಾಣಿಜ್ಯ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು. ಈ ಕುರಿತು ಭಾರತದಲ್ಲಿನ ಇರಾನ್ ರಾಯಭಾರಿ ಇರಾಜ್ ಇಲಾಹಿ ಅವರು ಅಧಿಕೃತವಾಗಿ ಪ್ರತಿಕ್ರಿಯಿಸಿದ್ದು, ಈ ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಭಾರತದಂತಹ ಆತ್ಮೀಯ ಮಿತ್ರ ರಾಷ್ಟ್ರಗಳ ನೌಕೆಗಳಿಗೆ ಹಾರ್ಮುಜ್ ಜಲಸಂಧಿಯ ಮೂಲಕ ಸಂಚರಿಸಲು ಇರಾನ್ ಯಾವುದೇ ವಿಶೇಷ ‘ಟೋಲ್’ ಅಥವಾ ಶುಲ್ಕವನ್ನು ವಿಧಿಸುತ್ತಿಲ್ಲ ಎಂದು ಇರಾಜ್ ಇಲಾಹಿ ಸ್ಪಷ್ಟಪಡಿಸಿದ್ದಾರೆ.”ಸಮುದ್ರಯಾನದ ಹಕ್ಕುಗಳು ಮತ್ತು ಅಂತರಾಷ್ಟ್ರೀಯ ಕಾನೂನುಗಳ ಪ್ರಕಾರವೇ ನೌಕೆಗಳ ಸಂಚಾರ ನಡೆಯುತ್ತಿದೆ. ಭಾರತದೊಂದಿಗೆ ನಮಗೆ ಉತ್ತಮ ಬಾಂಧವ್ಯವಿದ್ದು, ಅಂತಹ ಯಾವುದೇ ಆರ್ಥಿಕ ಹೊರೆ ಹೇರುವ ಉದ್ದೇಶ ನಮಗಿಲ್ಲ” ಎಂದು ಅವರು ತಿಳಿಸಿದ್ದಾರೆ.
ಇರಾನ್ ತನ್ನ ಜಲಗಡಿಯ ಸುರಕ್ಷತೆಯ ಬಗ್ಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ ನಿಜ, ಆದರೆ ಅದು ಕೇವಲ ಭದ್ರತಾ ದೃಷ್ಟಿಯಿಂದಾಗಿಯೇ ಹೊರತು ವ್ಯಾಪಾರಕ್ಕೆ ಅಡ್ಡಿಪಡಿಸಲು ಅಥವಾ ಹಣ ವಸೂಲಿ ಮಾಡಲು ಅಲ್ಲ ಎಂದು ರಾಯಭಾರಿಗಳು ಹೇಳಿದ್ದಾರೆ.
ಭಾರತದ ಶೇ. 60ಕ್ಕೂ ಹೆಚ್ಚು ತೈಲ ಆಮದು ಈ ಹಾರ್ಮುಜ್ ಜಲಸಂಧಿಯ ಮೂಲಕವೇ ನಡೆಯುತ್ತದೆ. ಇಲ್ಲಿ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸಿದರೆ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರುವ ಭೀತಿಯಿತ್ತು.








